ಮೂಡುಬಿದಿರೆ : ಮೂಡುಬಿದರೆ ತಾಲೂಕಿನ ಬಡಗ ಮಿಜಾರು ಗ್ರಾಮದ ಅರೆಮಜಲು ಪಲ್ಕೆ ಎಂಬಲ್ಲಿ ಹತ್ತಾರು ವಿದ್ಯುತ್ ಕಂಬಗಳು ಧರೆಗೆ ಉರುಳಿವೆ. ಇದರಿಂದಾಗಿ ಆ ಭಾಗದ ಜನ ಇದೀಗ ಕಗ್ಗತ್ತಲೆಯಲ್ಲಿ ಕಾಲ ಕಳೆಯುವಂತಾಗಿದೆ.
ಶನಿವಾರ ರಾತ್ರಿ 10:00 ಸುಮಾರಿಗೆ ಮರ ಉರುಳಿದ ಪರಿಣಾಮ ವಿದ್ಯುತ್ ತಂತಿಗೆ ತಗುಲಿ ತೀರಾ ಹಳೆಯದಾಗಿರುವ ಹತ್ತಾರು ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿವೆ. ಸ್ಥಳೀಯರು ಕೂಡಲೇ ಮೆಸ್ಕಾಂ ಗಮನಕ್ಕೆ ವಿಷಯವನ್ನು ತಿಳಿಸಿದ್ದಾರೆ.
ಆದರೂ ವಿದ್ಯುತ್ ಸಂಪರ್ಕವನ್ನು ಇದುವರೆಗೂ ನೀಡುವ ಕೆಲಸ ಆಗಿಲ್ಲ. ವಿದ್ಯುತ್ ಕಂಬಗಳು ಬರಲು ಇನ್ನೂ ಐದಾರು ದಿನ ಆಗಬಹುದು. ವಿದ್ಯುತ್ ಕಂಬ ಬರಲು ಮಂಜೂರಾತಿ ಪಡೆಯಬೇಕು ಎಂಬ ಸಬೂಬನ್ನು ಮೆಸ್ಕಾಂ ಸಿಬ್ಬಂದಿ ಹೇಳುತ್ತಿದ್ದು ಇದೀಗ ನಾಗರಿಕರು ಮುಂದೇನು ಎಂದು ದಿಕ್ಕು ತೋಚದ ಸ್ಥಿತಿಯಲ್ಲಿದ್ದಾರೆ. ಬಿರು ಬೇಸಿಗೆ ಕುಡಿಯುವ ನೀರಿಗೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಇಲ್ಲಿನ ಜನ ಕೊಳವೆ ಬಾವಿಗಳ ನೀರನ್ನು ಕುಡಿಯುವ ನೀರಿಗಾಗಿ ಆಶ್ರಯಿಸಿದ್ದಾರೆ. ಹೀಗಾಗಿ ಕುಡಿಯುವ ಹಾಗೂ ಜನ ಜಾನುವಾರುಗಳಿಗೆ ನೀರಿಲ್ಲದೆ ಈ ಭಾಗದ ಜನ ಪರಿತಪಿಸುವಂತಾಗಿದೆ. ಈ ನಿಟ್ಟಿನಲ್ಲಿ ಮೆಸ್ಕಾಂ ಈ ಕೂಡಲೇ ಧರೆಗೆ ಉರುಳಿರುವ ವಿದ್ಯುತ್ ಕಂಬಗಳನ್ನು ತೆಗೆದು ಹೊಸ ವಿದ್ಯುತ್ ಕಂಬಗಳನ್ನು ಅಳವಡಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.