ನೆಲ್ಯಾಡಿ: ಮಕ್ಕಳ ಮೋಜಿನ ಬೇಸಿಗೆ ಶಿಬಿರ ಉದ್ಘಾಟನೆ

ಶೇರ್ ಮಾಡಿ

ನೆಲ್ಯಾಡಿ: ವಾರವಿಡೀ ಪಾಠ ಪ್ರವಚನದಲ್ಲಿ ನಿರತರಾಗಿರುವ ಮಕ್ಕಳು ಇತರೆ ಚಟುವಟಿಕೆಗಳಿಗೆ ವಾರದಲ್ಲಿ ಒಂದು ದಿನ ಮೀಸಲಿಡುವ ಪರಿಪಾಠ ಜಾರಿಯಾಗಬೇಕು. ವೇದಿಕೆಯಲ್ಲಿನ ಭಯ ನೀಗಿಸುವ ಕಾರ್ಯ ಎಳವೆಯಿಂದಲೇ ಆರಂಭಿಸಬೇಕು ಎಂದು ಜೆಸಿಐ ಇಂಡಿಯಾದ 15ರ ವಲಯ ನಿರ್ದೇಶಕರಾದ ಜೇಸಿ ಭರತ್ ಶೆಟ್ಟಿ ಹೇಳಿದರು.
ನೆಲ್ಯಾಡಿ ಸಂತ ಜಾರ್ಜ್ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಜೆಸಿಐ ನೆಲ್ಯಾಡಿ ಆಶ್ರಯದಲ್ಲಿ ನೆಲ್ಯಾಡಿ-ಕೌಕ್ರಾಡಿ ವರ್ತಕ ಮತ್ತು ಕೈಗಾರಿಕಾ ಸಂಘದ ಸಹಯೋಗದೊಂದಿಗೆ ಶುಕ್ರವಾರ ಹಮ್ಮಿಕೊಂಡ ಮೋಜಿನ ಬೇಸಿಗೆ ಶಿಬಿರ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿದರು.

ಸ್ಥಪ್ರತಿಯೊಂದು ಮಗುವಿನಲ್ಲಿಯೂ ಸುಪ್ತವಾದ ಪ್ರತಿಭೆ ಅಡಗಿರುತ್ತದೆ. ಈ ಪ್ರತಿಭೆ ಹೊರ ಹಾಕುವಲ್ಲಿ ಇಂಥ ಶಿಬಿರಗಳು ಸಹಕಾರಿಯಾಗುತ್ತದೆ. ಶಿಕ್ಷಣದ ಜೊತೆಯಲ್ಲಿ ಸಂಸ್ಕೃತಿ, ಕಲೆಯನ್ನು ಪರಿಚಯಿಸುವ ಕೆಲಸ ನಡೆಸಬೇಕು ಎಂದರು. ಈ ಸಂದರ್ಭದಲ್ಲಿ ಜೇಸಿ ವತಿಯಿಂದ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ನೆಲ್ಯಾಡಿ ಸಂತ ಜಾರ್ಜ್ ವಿದ್ಯಾ ಸಂಸ್ಥೆಯ ಸಂಚಾಲಕ ರೆ.ಫಾ.ನೋಮಿಸ್ ಕುರಿಯಾಕೋಸ್ ಶಿಬಿರವನ್ನು ಉದ್ಘಾಟಿಸಿ ಶುಭಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಜೆಸಿಐ ಅಧ್ಯಕ್ಷೆ ಸುಚಿತ್ರಾ.ಜೆ.ಬಂಟ್ರಿಯಾಲ್ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ವೇದಿಕೆಯಲ್ಲಿ ನೆಲ್ಯಾಡಿ-ಕೌಕ್ರಾಡಿ ವರ್ತಕ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಸತೀಶ್. ಕೆ.ಎಸ್., ಮಹಿಳಾ ಜೇಸಿ ಅಧ್ಯಕ್ಷೆ ಲೀಲಾ ಮೋಹನ್ ಉಪಸ್ಥಿತರಿದ್ದರು.
ಜೇಸಿ ಪೂರ್ವಾಧ್ಯಕ್ಷ ವೆಂಕಟರಮಣ.ಆರ್ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು. ಜ್ಞಾಹ್ನವಿ ಜೇಸಿವಾಣಿ ವಾಚಿಸಿದರು. ಜೇಸಿ ಪೂರ್ವಾಧ್ಯಕ್ಷ ಜಯಾನಂದ ಬಂಟ್ರಿಯಾಲ್ ವಂದಿಸಿದರು.

ಒಂದು ವಾರಗಳ ಕಾಲ ನಡೆಯುವ ಶಿಬಿರದಲ್ಲಿ ಪೇಪರ್ ಕ್ರಾಫ್ಟ್, ಹಳ್ಳಿಯ ಆಟಗಳು, ಗಾಳಿಪಟ, ಗೂಡುದೀಪ, ಸ್ಪೋಕನ್ ಇಂಗ್ಲೀಷ್, ಅಬಾಕಾಸ್, ಸ್ಲ್ಯಾಬ್ ಬುಕ್ ತಯಾರಿ, ಚಿತ್ರಕಲೆ, ಬೆಂಕಿಯಿಲ್ಲದೆ ಅಡುಗೆ, ಮೋಜಿನ ಆಟಗಳು, ಯೋಗ, ಡ್ಯಾನ್ಸ್, ಸಂಗೀತ ಮೊದಲಾದವುಗಳನ್ನು ಅನುಭವಿ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಗುತ್ತಿದೆ.

Leave a Reply

error: Content is protected !!