ಪ್ರಧಾನಿ ನರೇಂದ್ರ ಮೋದಿ ಅವರಿಗೆ ಚೊಂಬು ತೋರಿಸಲು ಯತ್ನಿಸಿದ ಯುವ ಕಾಂಗ್ರೆಸ್ ಮುಖಂಡ ಮೊಹಮದ್ ನಲಪಾಡ್ ಅವರನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ನಡೆದಿದೆ.
ಬೆಂಗಳೂರು ಅರಮನೆ ಮೈದಾನದಲ್ಲಿ ನಡೆದ ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷದ ವಿಜಯ ಸಂಕಲ್ಪ ಸಮಾವೇಶದಲ್ಲಿ ಮೋದಿ ಪಾಲ್ಗೊಂಡಿದ್ದರು.
ಸಮಾವೇಶದ ಬಳಿಕ ಮೋದಿ ಹಿಂದಿರುಗುತ್ತಿದ್ದರು, ಈ ವೇಳೆ ಮೇಖ್ರಿ ಸರ್ಕಲ್ ಬಳಿ ಚೊಂಬು ಪ್ರದರ್ಶನಕ್ಕೆ ಕಾಂಗ್ರೆಸ್ ಮುಖಂಡರು ಯತ್ನಿಸಿದ್ದರು. ಯುವ ಕಾಂಗ್ರೆಸ್ ಮುಖಂಡ ನಲಪಾಡ್ ನೇತೃತ್ವದಲ್ಲಿ ಮೋದಿಗೆ ಚೊಂಬು ತೋರಿಸುವ ಮೂಲಕ ಪ್ರತಿಭಟನೆಗೆ ಮುಂದಾಗಿದ್ದರು. ಈ ವೇಳೆ ನಲಪಾಡ್ ಸೇರಿದಂತೆ ಇಬ್ಬರು ಕಾಂಗ್ರೆಸ್ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದರು. ಈ ವೇಳೆ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದ ನಲಪಾಡ್ ಚೊಂಬು ಪ್ರದರ್ಶನ ಮಾಡೋದು ತಪ್ಪಾ ಅಂತಾ ಆಕ್ರೋಶ ಹೊರಹಾಕಿದ್ರು.
ನಂಬರ್ ಪ್ಲೇಟ್ ಇಲ್ಲದ ಕಾರಿನಲ್ಲಿ ಕುಳಿತಿದ್ದ ನಲಪಾಡ್ & ಗ್ಯಾಂಗ್:
ಮೋದಿ ತೆರಳುವ ರಸ್ತೆ ಮಾರ್ಗದಲ್ಲಿ (ಮೇಖ್ರಿ ಸರ್ಕಲ್) ಅರ್ಧಗಂಟೆ ಮುಂಚೆಯೇ ಬಂದಿದ್ದ ನಲಪಾಡ್ ನಂಬರ್ ಇಲ್ಲದ ಕಾರಿನಲ್ಲಿ ಕಾದು ಕುಳಿತಿದ್ದರು. ಕಪ್ಪು ಬಣ್ಣದ ಲ್ಯಾಂಡ್ರೋವರ್ ಡಿಫೆಂಡರ್ ಕಾರಿನಲ್ಲಿ ನಲಪಾಡ್ ಜೊತೆಗೆ 8 ಜನ ಇದ್ದರು. ಮೋದಿ ತೆರಳುವ ಸಂದರ್ಭದಲ್ಲೇ ಚೊಂಬು ಪ್ರದರ್ಶನಕ್ಕೆ ಮುಂದಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.