
ಉತ್ತರಪ್ರದೇಶ ಯೂನಿರ್ವಸಿಟಿಯ ಪದವಿ ಪ್ರಥಮ ವರ್ಷದ ವಿದ್ಯಾರ್ಥಿಯೊಬ್ಬ ಪರೀಕ್ಷೆಯ ವೇಳೆ ಉತ್ತರ ಪತ್ರಿಕೆಯಲ್ಲಿ “ಜೈ ಶ್ರೀರಾಮ್ ಮತ್ತು ಕೆಲವು ಕ್ರಿಕೆಟಿಗರ” ಹೆಸರನ್ನು ಬರೆದಿದ್ದು, ಈ ಉತ್ತರಪತ್ರಿಕೆಗೆ ಪ್ರೊಫೆಸರ್ ಅಂಕ ನೀಡಿ ಪಾಸ್ ಮಾಡಿರುವ ಘಟನೆ ನಡೆದಿದೆ ಎಂದು ವರದಿ ತಿಳಿಸಿದೆ.
ಹಾಡುಗಳು, ಸಂಗೀತ, ಧಾರ್ಮಿಕ ಘೋಷಣೆಗಳನ್ನು ಬರೆದ ಉತ್ತರಪತ್ರಿಕೆಗೆ ಅಂಕ ನೀಡಲು ವಿದ್ಯಾರ್ಥಿಗಳಿಂದ ಹಣ ವಸೂಲಿ ಮಾಡಿದ್ದ ಆರೋಪದ ಮೇಲೆ ಜೌನ್ ಪುರದ ವೀರ್ ಬಹದೂರ್ ಸಿಂಗ್ ಪೂರ್ವಾಂಚಲ್ ಯೂನಿರ್ವಸಿಟಿಯ ಇಬ್ಬರು ಪ್ರಾಧ್ಯಾಪಕರನ್ನು ಅಮಾನತುಗೊಳಿಸಲಾಗಿದೆ ಎಂದು ವರದಿ ಹೇಳಿದೆ.
ವಿಶ್ವವಿದ್ಯಾಲಯದ ಕೆಲವು ಅಧಿಕಾರಿಗಳ ಸಹಕಾರದಿಂದ ಶೂನ್ಯ ಅಂಕ ಪಡೆದ ವಿದ್ಯಾರ್ಥಿಗಳಿಗೂ ಶೇ.60ಕ್ಕಿಂತ ಹೆಚ್ಚು ಅಂಕ ನೀಡಿ ತೇರ್ಗಡೆ ಮಾಡಲಾಗಿದೆ ಎಂದು ಆರೋಪಿಸಿ ವಿದ್ಯಾರ್ಥಿ ಮುಖಂಡ ದಿವ್ಯಾಂಶು ಸಿಂಗ್ ಪ್ರಧಾನಿ, ಮುಖ್ಯಮಂತ್ರಿ, ಗವರ್ನರ್ ಹಾಗೂ ಉಪ ಕುಲಪತಿಗಳಿಗೆ ಪತ್ರ ಬರೆದಿರುವುದಾಗಿ ವರದಿ ವಿವರಿಸಿದೆ.
ಮರು ಮೌಲ್ಯಮಾಪನ ಸಂದರ್ಭದಲ್ಲಿ ಅಕ್ರಮಗಳು ಆರ್ ಟಿಐ ಮಾಹಿತಿ ಮೂಲಕ ಬಹಿರಂಗಗೊಂಡಿದೆ. ಕೆಲವು ವಿದ್ಯಾರ್ಥಿಗಳಿಗೆ ಹೆಚ್ಚು ಅಂಕ ನೀಡಲಾಗಿದೆ ಎಂಬ ಆರೋಪವಿದೆ. ನಾವು ಈ ಬಗ್ಗೆ ಸಮಿತಿಯನ್ನು ರಚಿಸಿದ್ದು, ವರದಿ ನೀಡುವಂತೆ ಸೂಚನೆ ನೀಡಲಾಗಿದೆ ಎಂದು ಉಪಕುಲಪತಿ ವಂದನಾ ಸಿಂಗ್ ತಿಳಿಸಿದ್ದಾರೆ.




