ಧರ್ಮಸ್ಥಳದಲ್ಲಿ ಮೇ 1ರಂದು ಸಂಜೆ 6.45ರ ಗೋಧೂಳಿ ಲಗ್ನದಲ್ಲಿ 52ನೇ ವರ್ಷದ ಉಚಿತ ಸಾಮೂಹಿಕ ವಿವಾಹ ನಡೆಯಲಿದೆ.
ಈಗಾಗಲೇ 123 ಜತೆ ವಧು- ವರರು ಹೆಸರು ನೋಂದಾಯಿಸಿದ್ದು, ಅವರು ನೀಡಿದ ದಾಖಲೆಗಳು ಕ್ರಮಬದ್ಧವಾಗಿದ್ದರೆ ಮದುವೆಗೆ ಸಾಮೂಹಿಕ ವಿವಾಹದಲ್ಲಿ ಅವಕಾಶ ನೀಡಲಾಗುವುದು. ಅಂದು ಬೆಳಿಗ್ಗೆಯಿಂದಲೇ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರು ವಧು-ವರರಿಗೆ ಸೀರೆ, ರವಿಕೆ ಕಣ, ಧೋತಿ ಮತ್ತು ಶಾಲು ವಿತರಿಸುವರು.
ಸಂಜೆ 5 ಗಂಟೆಗೆ ವಧು- ವರರು ಮೆರವಣಿಗೆಯಲ್ಲಿ ದೇವಸ್ಥಾನಕ್ಕೆ ಪ್ರದಕ್ಷಿಣೆ ಬಂದು, ಅಮೃತವರ್ಷಿಣಿ ಸಭಾಭವನಕ್ಕೆ ತೆರಳುವರು. ಅಲ್ಲಿ ಅವರವರ ಸಂಪ್ರದಾಯದಂತೆ ಒಂದೇ ಮುಹೂರ್ತದಲ್ಲಿ ವಿವಾಹ ನಡೆಯುವುದು. ಸಿನಿಮಾ ನಟ ದೊಡ್ಡಣ್ಣ, ಜನಪ್ರತಿನಿಧಿಗಳು ಭಾಗವಹಿಸುವರು.
ಬಳಿಕ ನೂತನ ದಂಪತಿ ದೇವರ ದರ್ಶನ ಮಾಡಿ, ಅನ್ನಪೂರ್ಣ ಭೋಜನಾಲಯದಲ್ಲಿ ಊಟ ಸ್ವೀಕರಿಸಿ ಊರಿಗೆ ತೆರಳುವರು. ಸಾಮೂಹಿಕ ವಿವಾಹದಲ್ಲಿ ಮದುವೆ ಆದವರಿಗೆ ಸರ್ಕಾರದ ವತಿಯಿಂದ ವಿವಾಹ ನೋಂದಣಿ ಪ್ರಮಾಣ ಪತ್ರ ನೀಡಲಾಗುವುದು.
ವರದಕ್ಷಿಣೆ ಹಾಗೂ ದುಂದುವೆಚ್ಚ ತಡೆಯಲು ಧರ್ಮಸ್ಥಳದಲ್ಲಿ 1972ರಿಂದ ಉಚಿತ ಸಾಮೂಹಿಕ ವಿವಾಹ ನಡೆಯುತ್ತಿದೆ. ಕಳೆದ ವರ್ಷದವರೆಗೆ 12,777 ವಿವಾಹಗಳು ನಡೆದಿವೆ.