ಧರ್ಮಸ್ಥಳ 52ನೇ ವರ್ಷದ ಸಾಮೂಹಿಕ ವಿವಾಹದಲ್ಲಿ 117ಜೋಡಿಗಳು ದಾಂಪತ್ಯ ಜೀವನಕ್ಕೆ

ಶೇರ್ ಮಾಡಿ

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಬುಧವಾರ ಜರಗಿದ 52ನೇ ವರ್ಷದ ಸಾಮೂಹಿಕ ವಿವಾಹ ದಲ್ಲಿ ಒಟ್ಟು 117 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿದವು. 12,900ನೇ ಜೋಡಿಯಾದ ಗದಗದ ಪ್ರವೀಣ್ ಬನ್ನೂರು ಹಾಗೂ ಕವಿತಾ ಗಿಡ ಕೆಂಚಣ್ಣನವರ್ ವಧು- ವರ ಜೋಡಿಯನ್ನು ವಿಶಿಷ್ಟ ಜೋಡಿಯನ್ನಾಗಿ ಗುರುತಿಸಲಾಯಿತು.

ಅಪಘಾತವೊಂದರಲ್ಲಿ ಕಾಲು ಕಳೆದುಕೊಂಡಿರುವ ವರ ಪ್ರವೀಣ್ ಟ್ರಾವೆಲ್ ಏಜೆನ್ಸಿ ನಡೆಸುತ್ತಿದ್ದು, ತನ್ನ ಮಾವನ ಮಗಳನ್ನು ವರಿಸಿದರು. ಮದುವೆ ದಿಬ್ಬಣದ ಮೆರವಣಿಗೆ ದೇವಸ್ಥಾನದ ಮುಂಭಾಗದಿಂದ ಅಮೃತ ವರ್ಷಿಣಿ ಸಭಾಭವನದವರೆಗೆ ಜರಗಿತು. ಮೆರವಣಿಗೆಯು ಬ್ಯಾಂಡ್, ವಾಲಗ, ನಂದಿ, ಆನೆಗಳು, ಹಕ್ಕಿ ನಿಶಾನೆ, ತಟ್ಟಿರಾಯ ಮೊದಲಾದ ವಿಶೇಷ ಆಕರ್ಷಣೆಗಳನ್ನು ಒಳಗೊಂಡಿತ್ತು.
ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಹೇಮಾವತಿ ವೀ.ಹೆಗ್ಗಡೆ, ಹರ್ಷೇಂದ್ರ ಕುಮಾರ್, ಚಿತ್ರ ನಟ ದೊಡ್ಡಣ್ಣ ಮತ್ತಿತರರು ಪಾಲ್ಗೊಂಡಿದ್ದರು.

ಈ ಹಿಂದೆ ಕ್ಷೇತ್ರದ ಸಾಮೂಹಿಕ ವಿವಾಹದಲ್ಲಿ ಮದುವೆಯಾದವರ ಮಕ್ಕಳು, ಮೊಮ್ಮಕ್ಕಳ ಮದುವೆಗಳು ನಡೆದವು. ರಾಜ್ಯದ ಹೆಚ್ಚಿನ ಎಲ್ಲಾ ಜಿಲ್ಲೆಗಳ, ತಮಿಳುನಾಡು ರಾಜ್ಯದ ವಧು-ವರರು ಸತಿ ಪತಿಗಳಾದರು. ಕೂಲಿ, ಬೇಸಾಯ, ವ್ಯಾಪಾರ, ಚಾಲಕ, ಖಾಸಗಿ ಉದ್ಯೋಗ, ಸರಕಾರಿ ಉದ್ಯೋಗ, ಮರದ ಕೆಲಸ, ಮೀನುಗಾರಿಕೆ ಮೊದಲಾದ ವೃತ್ತಿಯಲ್ಲಿ ತೊಡಗಿಗೊಂಡಿರುವ ಜೋಡಿಗಳು ಸಂಜೆ 6.45ರ ಗೋಧೂಳಿ ಮುಹೂರ್ತದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.

ಶ್ರೀ ಕ್ಷೇತ್ರದಲ್ಲಿ ಮಂಗಳ ಮುಹೂರ್ತದಲ್ಲಿ ವಧೂ ವರರಾಗಿ ಪವಿತ್ರ ಭಾಂದವ್ಯ ಹೊಂದಿರುವ ನಾವು ಮುಂದೆ ಜೀವನದುದ್ದಕ್ಕೂ ಧರ್ಮ, ಅರ್ಥ, ಕಾಮಗಳಲ್ಲಿ ಸಹಚರರಾಗಿ ಪರಸ್ಪರ ಪ್ರೀತಿ ವಿಶ್ವಾಸದಿಂದ ಒಬ್ಬರಿಗೊಬ್ಬರು ವಂಚನೆ ಮಾಡಲಿ ಯಾವುದೇ ದುರಭ್ಯಾಸಗಳಿಗೆ ತುತ್ತಾಗದೆ ಬದುಕುತ್ತೇವೆ ಎಂಬುದಾಗಿ ಭಗವಾನ್ ಶ್ರೀ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ಮತ್ತು ಪೂಜ್ಯ ಹೆಗ್ಗಡೆಯವರ ಸಮಕ್ಷಮದಲ್ಲಿ ಪ್ರಮಾಣವಚನ ಬದ್ಧರಾಗುತ್ತಿದ್ದೇವೆ ಎಂದು ಪ್ರಮಾಣ ವಚನ ಸ್ವೀಕರಿಸಿದರು.

Leave a Reply

error: Content is protected !!