ಸಭೆ ನಡೆಸುತ್ತಿದ್ದ ಶಾಸಕರ ಕಚೇರಿಗೆ ದಾಳಿ ನಡೆಸಿದ ಚುನಾವಣಾ ಅಧಿಕಾರಿ

ಶೇರ್ ಮಾಡಿ

ಲೋಕಸಭಾಚುನಾವಣ ನೀತಿ ಸಂಹಿತೆಯನ್ನು ಉಲ್ಲಂಘಿಸಿ ಶಾಸಕರ ಕಚೇರಿ ಸಭಾಂಗಣದಲ್ಲಿ ಶಾಸಕರ ಉಪಸ್ಥಿತಿ ಯಲ್ಲಿ ಜಲಸಿರಿ ಅಧಿಕಾರಿಗಳ ಸಭೆ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದ ಚುನಾವಣ ಅಧಿಕಾರಿ ತಹಶೀಲ್ದಾರ್‌ ನೇತೃತ್ವದ ತಂಡ ಸ್ಥಳಕ್ಕೆ ದಾಳಿ ನಡೆಸಿ ಸಭೆ ನಿಲ್ಲಿಸಿ ಕಚೇರಿಗೆ ಬೀಗ ಜಡಿದ ಘಟನೆ ಮೇ 13ರಂದು ಸಂಭವಿಸಿದೆ.
ಕಳೆದ 15 ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ತೀವ್ರ ಸ್ವರೂಪ ಪಡೆದಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ದೂರಿನ ಅನ್ವಯ ಶಾಸಕ ಅಶೋಕ್‌ ಕುಮಾರ್‌ ರೈ ನೇತೃತ್ವದಲ್ಲಿ ಸೋಮವಾರ ಬೆಳಗ್ಗೆ ನಗರಸಭಾ ಕಟ್ಟಡದ ಶಾಸಕರ ಸಭಾಂಗಣದಲ್ಲಿ ಜಲಸಿರಿ ಅಧಿಕಾರಿಗಳ ಸಭೆ ಕರೆಯಲಾಗಿತ್ತು.

ಸಭೆಯಲ್ಲಿ ಜಲಸಿರಿ ಎಂಜಿನಿಯರ್‌ ಮಾದೇಶ, ಪಂಪ್‌ ಆಪರೇಟರ್‌ಗಳು ಸೇರಿದಂತೆ ವಿವಿಧ ಸಿಬಂದಿ ಭಾಗವಹಿಸಿದ್ದರು. ಸಭೆಗೆ ನಗರಸಭೆಯ ಪೌರಯುಕ್ತ, ಎಂಜಿನಿಯರ್‌ ಅವರನ್ನು ಕರೆಸುವಂತೆ ಶಾಸಕರು ಸೂಚಿಸಿದ ಮೇರೆಗೆ ಅವರಿಗೆ ದೂರವಾಣಿ ಕರೆ ಮಾಡಲಾಗಿತ್ತು. ಕೆಲವು ಹೊತ್ತಿನಲ್ಲಿ ಪೌರಯುಕ್ತ ಬದ್ರುದ್ದೀನ್‌ ಸೌಧಾಗಾರ್‌ ಅವರು ಆಗಮಿಸಿದ್ದರೂ ನೀತಿ ಸಂಹಿತೆಯ ಕಾರಣ ಹೇಳಿ ಸಭೆಯಿಂದ ನಿರ್ಗಮಿಸಿದರು. ಅದಾದ ಬಳಿಕವೂ ಜಲಸಿರಿಯ ಪ್ರಗತಿಯ ಬಗ್ಗೆ ಸಭೆ ನಡೆದು ಮಾದೇಶ ಅವರು ಸಭೆಗೆ ಮಾಹಿತಿ ನೀಡಿದರು.

ತಹಶೀಲ್ದಾರ್‌ ಆಗಮನ:
ಸಭೆ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದ ಚುನಾವಣಾಧಿಕಾರಿ ಹಾಗೂ ತಹಶೀಲ್ದಾರ್‌ ಕುಂಞಿ ಅಹ್ಮದ್‌ ನೇತೃತ್ವದ ತಂಡ ಆಗಮಿಸಿ ಸಭೆ ನಡೆಸದಂತೆ ಶಾಸಕರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ನಗರದಲ್ಲಿ ನೀರಿನ ಸಮಸ್ಯೆ ಉದ್ಭವಿಸಿದೆ. ಪರಿಹಾರ ಹೇಳಲು ಅಧಿಕಾರಿಗಳು ಇಲ್ಲ, ನೀತಿ ಸಂಹಿತೆ ನೆಪ ಹೇಳಿದರೆ ನೀರು ಕೊಡುವವರು ಯಾರು ಎಂದು ಪ್ರಶ್ನಿಸಿದರು. ಆದರೆ ಈ ವಾದವನ್ನು ತಹಶೀಲ್ದಾರ್‌ ಒಪ್ಪದೆ ನೀತಿ ಸಂಹಿತೆಯನ್ನು ಪಾಲನೆ ಮಾಡಲೇಬೇಕು. ನೀವು ಸಭೆ ನಡೆಸುವುದು ಸರಿಯಲ್ಲ. ಕಾನೂನಿನಲ್ಲಿ ಇದಕ್ಕೆ ಅವಕಾಶ ಇಲ್ಲ ಎಂದರು. ಕೆಲ ಹೊತ್ತು ಈ ಬಗ್ಗೆ ಚರ್ಚೆ ಮುಂದುವರಿಯಿತು.

ಪ್ರತಿಭಟನೆಗೆ ನಾನೇ ಕೂರುವೇ!
ಶಾಸಕ ಅಶೋಕ್‌ ಕುಮಾರ್‌ ರೈ ಈ ವೇಳೆ ತಹಶೀಲ್ದಾರ್‌ ಜತೆ ಮಾತನಾಡಿ, ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಅಧಿಕಾರಿಗಳೇ ಮುಂದಾಗಬೇಕಿತ್ತು. ಆ ಕೆಲಸ ಆಗದ ಕಾರಣ ಜನರ ಸಮಸ್ಯೆಗೆ ಸ್ಪಂದಿಸುವುದು ನನ್ನ ಕರ್ತವ್ಯವಾಗಿದೆ. ಆ ನಿಟ್ಟಿನಲ್ಲಿ ಸಭೆ ನಡೆಸುತ್ತಿದ್ದೇನೆ. ನಾನು ನೀತಿ ಸಂಹಿತೆಯನ್ನು ವಿರೋಧಿಸುತ್ತಿಲ್ಲ. ಅಧಿಕಾರಿಗಳು ನಗರದ ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಮಳೆಗಾಲದಲ್ಲಿ ಉಂಟಾದ ತೊಂದರೆಗಳನ್ನು ಮುಂದಿನ ಎರಡು ದಿನದೊಳಗೆ ಬಗೆಹರಿಸಬೇಕು. ಇಲ್ಲದಿದ್ದರೆ ನಗರಸಭೆ, ತಾಲೂಕು ಸೌಧದ ಮುಂದೆ ನಾನೇ ಧರಣಿ ಕೂರುವೆ ಎಂದರು. ಸಮಸ್ಯೆಗಳ ಬಗ್ಗೆ ನಮಗೆ ತಿಳಿಸಿ, ನಾವು ಪರಿಹಾರಕ್ಕಾಗಿ ಕ್ರಮ ಕೈಗೊಳ್ಳುತ್ತೇವೆ. ಈ ಸಭೆಯನ್ನು ಮೊಟಕುಗೊಳಿಸಿ ಎಂದು ತಹಸೀಲ್ದಾರ್‌ ಅವರು ಶಾಸಕರಿಗೆ ತಿಳಿಸಿದರು. ಅದರಂತೆ ಶಾಸಕರು ಸಭೆಯನ್ನು ರದ್ದುಗೊಳಿಸಿದರು.
ಕಚೇರಿ, ಗೇಟಿಗೆ ಬೀಗ: ಚುನಾವಣ ನೀತಿ ಸಂಹಿತೆ ಪ್ರಕಾರ ಶಾಸಕರ ಅಧಿಕೃತ ಕಚೇರಿಯನ್ನು ತೆರೆಯುವಂತಿಲ್ಲ. ನೀತಿ ಸಂಹಿತೆ ಜಾರಿ ಬಳಿಕ ನಗರಸಭೆಗೆ ಸೇರಿದ್ದ ಕಟ್ಟಡದಲ್ಲಿದ್ದ ಕಚೇರಿಗೆ ಬೀಗ ಹಾಕಿ ಬಂದ್‌ ಮಾಡಲಾಗಿತ್ತು. ಆದರೆ ಕೆಲವು ದಿನಗಳಿಂದ ಶಾಸಕರ ಕಚೇರಿ ತೆರೆದಿತ್ತು. ಮೇ.13ರಂದು ನೂರಾರು ಮಂದಿ ವಿವಿಧ ಕೆಲಸಗಳಿಗೆ ಶಾಸಕರ ಕಚೇರಿಗೆ ಬಂದಿದ್ದರು. ಕಚೇರಿಯಲ್ಲಿದ್ದ ಸಿಬಂದಿ ಸಹಿತ ಎಲ್ಲರನ್ನೂ ಹೊರಗೆ ಕಳುಹಿಸಿ ಕಚೇರಿ ಕಟ್ಟಡಕ್ಕೆ, ಪ್ರವೇಶ ದ್ವಾರಕ್ಕೆ ಬೀಗ ಜಡಿದರು.

ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ: ನೋಟಿಸ್‌ ಜಾರಿ
ಚುನಾವಣ ನೀತಿ ಸಂಹಿತೆ ಉಲ್ಲಂಘನೆಯಡಿ ಶಾಸಕ ಅಶೋಕ್‌ ಕುಮಾರ್‌ ರೈ, ಪ್ರದೀಪ್‌, ನಗರಸಭೆ ಪೌರಯುಕ್ತ ಬದ್ರುದ್ದೀನ್‌, ಜಲಸಿರಿ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅಧಿಕಾರಿಗಳಿಗೆ ಶೋಕಾಸ್‌ ನೋಟಿಸ್‌ ಹೊರಡಿಸಲಾಗುವುದು ಎಂಬ ಮಾಹಿತಿ ಲಭಿಸಿದೆ.

Leave a Reply

error: Content is protected !!