ಎಸ್‍ಎಸ್‍ಎಲ್‍ಸಿಯಲ್ಲಿ ಶಿಕ್ಷಣ ಇಲಾಖೆ ಈ ವರ್ಷ ನೀಡಿದ 20% ಗ್ರೇಸ್ ಅಂಕಗಳಿಗೆ ಖುದ್ದು ಸಿಎಂ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದಿನ ವರ್ಷದಿಂದ ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕಗಳನ್ನು ನೀಡಲಾಗುವುದಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ವಿಧಾನಸೌಧದಲ್ಲಿಂದು ಇಲಾಖಾವಾರು ಪ್ರಗತಿ ಪರಿಶೀಲನೆ ಸಭೆ ನಡೆದ ವೇಳೆ ಗ್ರೇಸ್ ಅಂಕ ಕೊಟ್ಟ ವಿಚಾರ ಚರ್ಚೆಗೆ ಬಂತು. ಈ ವೇಳೆ ಗ್ರೇಸ್ ಮಾರ್ಕ್ಸ್ ಹೆಚ್ಚಳಕ್ಕೆ ಗರಂ ಆದ ಸಿಎಂ, ಗ್ರೇಸ್ ಮಾರ್ಕ್ಸ್ ಹೆಚ್ಚಳಕ್ಕೆ ಶಿಕ್ಷಣ ತಜ್ಞರು ಸೇರಿ ಹಲವರಿಂದ ವಿರೋಧ ಬಂದಿದೆ. ಗ್ರೇಸ್ ಮಾರ್ಕ್ಸ್ ಕೊಡೋದು ಅವೈಜ್ಞಾನಿಕ ಎಂಬ ಬಗ್ಗೆ ಅಭಿಪ್ರಾಯಗಳು ಬರುತ್ತಿವೆ.
ಎಸ್‍ಎಸ್‍ಎಲ್‍ಸಿಯಲ್ಲಿ (SSLC) ಗ್ರೇಸ್ ಮಾರ್ಕ್ಸ್ ಕೊಡೋದು ಅಗತ್ಯ ಇತ್ತಾ? ಪರೀಕ್ಷೆಯಲ್ಲಿ ಈ ಬಾರಿ ಕಠಿಣ ಕ್ರಮ ಕೈಗೊಂಡಿದ್ದು ಸರಿ. ಆದರೆ ಗ್ರೇಸ್ ಮಾರ್ಕ್ಸ್ ಕೊಟ್ಟಿದ್ದು ಸರಿ ಇತ್ತಾ ಎಂದು ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಸಿಎಂ ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ಮುಂಬರುವ ಶೈಕ್ಷಣಿಕ ವರ್ಷದಿಂದ ಗ್ರೇಸ್ ಮಾರ್ಕ್ಸ್ ಕೊಡುವ ಬಗ್ಗೆ ಮರುಪರಿಶೀಲನೆ ಮಾಡುವಂತೆ ಸಿಎಂ ಸೂಚನೆ ನೀಡಿದ್ದಾರೆ.
ಸಭೆ ಬಳಿಕ ಮಾತಾಡಿದ ಮಧು ಬಂಗಾರಪ್ಪ, ಈ ವರ್ಷ ಕೊಟ್ಟಿರುವ ಗ್ರೇಸ್ ಮಾರ್ಕ್ಸ್ ನಲ್ಲಿ ಯಾವುದೂ ಬದಲಾವಣೆ ಇಲ್ಲ. ಮುಂದಿನ ವರ್ಷದಿಂದ 20% ಗ್ರೇಸ್ ಮಾರ್ಕ್ಸ್ ಕೊಡುವ ಪದ್ಧತಿ ಇರಲ್ಲ. ಇನ್ನು ಮುಂದೆ ಹಿಂದಿನ ಪದ್ಧತಿಯೇ ಮುಂದುವರಿಯಲಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಪರೀಕ್ಷಾ ನಡವಳಿಕೆ ಸರಿ ಮಾಡಲು ಮುಂದಾಗಿದ್ದೆವು. ಈ ವರ್ಷ ಮಾತ್ರ ಗ್ರೇಸ್ ಮಾರ್ಕ್ಸ್ ಕೊಡುವ ತೀರ್ಮಾನ ಮಾಡಲಾಗಿತ್ತು. ಯಾವಾಗಲೂ 5% ಗ್ರೇಸ್ ಅಂಕ ಇರ್ತಿತ್ತು. ಕೋವಿಡ್ ವೇಳೆ 10% ಮಾಡಲಾಗಿತ್ತು. ಇದೀಗ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಿ ಪಾಸಾಗುವಂತೆ ಮಾಡಲು 20% ಗ್ರೇಸ್ ಮಾರ್ಕ್ಸ್ ನೀಡಲಾಗಿತ್ತು. ಇದು ಈ ವರ್ಷಕ್ಕೆ ಯಾವ ಸಮಸ್ಯೆ ಇಲ್ಲ. ಮುಂದಿನ ವರ್ಷದಿಂದ ಇದು ಇರಲ್ಲ ಅಂತ ಮಧು ಬಂಗಾರಪ್ಪ ತಿಳಿಸಿದರು.