ನೇಸರ ಫೆ.12: ಹೊಸನಗರ, ಸಾಗರದಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಇದರಲ್ಲಿ ಶಾಸಕ ಹರತಾಳು ಹಾಲಪ್ಪರಿಗೆ ಕಮಿಷನ್ ಇದೆ ಎಂದು ಕಾಂಗ್ರೆಸ್ ಮುಖಂಡ ಬೇಳೂರು ಗೋಪಾಲಕೃಷ್ಣ ಆರೋಪಿಸಿದ್ದು, ಮಾತಿನ ಸಮರವೇ ನಡೆದು, ಧರ್ಮಸ್ಥಳದಲ್ಲಿ ಆಣೆ ಪ್ರಮಾಣದವರೆಗೂ ಮುಂದಾಗಿದ್ದು. ಈ ಸಂಬಂಧ ಮಾಜಿ ಸಚಿವ ಹರತಾಳು ಹಾಲಪ್ಪ ಬೆಂಬಲಿಗರೊಂದಿಗೆ ಧರ್ಮಸ್ಥಳ ಕ್ಷೇತ್ರಕ್ಕೆ ಆಗಮಿಸಿ, ದೇವರ ದರ್ಶನ ಪಡೆದು, ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ತೆರಳಿದ್ದಾರೆ.
ಹರತಾಳು ಹಾಲಪ್ಪ ಮಾತನಾಡಿ, ಬೇಳೂರು ಗೋಪಾಲಕೃಷ್ಣ ಪಲಾಯನ ಮಾಡಿದ್ದಾರೆ. ನಮ್ಮನ್ನು ಕ್ಷೇತ್ರಕ್ಕೆ ಕರೆದು ತಪ್ಪಿಸಿಕೊಂಡಿದ್ದಾರೆ. ಮೊದಲು ನನ್ನ ವಿರುದ್ದ ಆರೋಪ ಮಾಡಿದವರು, ನಂತರ ನನ್ನ ಸ್ನೇಹಿತ ವಿನಾಯಕ ರಾವ್, ಸಂಬಂಧಿ ರವೀಂದ್ರರ ಮೇಲೆ ಆರೋಪ ಮಾಡಿದ್ದರು. ಆದುದರಿಂದ ನಾನು, ವಿನಾಯಕ ರಾವ್, ರವೀಂದ್ರ ಎಲ್ಲಾ ಸೇರಿ ಮಂಜುನಾಥನ ಸನ್ನಿಧಾನದಲ್ಲಿ ಮರಳುಗಾರಿಕೆ ಮಾಡುವವರಿಂದ ಯಾವುದೇ ಕಮಿಷನ್ ಪಡೆದಿಲ್ಲ ಎಂದು ಹೇಳಿದ್ದೇವೆ. ರಾಜಕೀಯ ಲಾಭ ಪಡೆಯಲು ಇಷ್ಟೆಲ್ಲ ಹರಸಾಹಸ ಮಾಡುತ್ತಿದ್ದಾರೆ ಎಂದರು.
ಧರ್ಮಸ್ಥಳ ಕ್ಷೇತ್ರಕ್ಕೆ 10.30ಕ್ಕೆ ಬೇಳೂರು ಗೋಪಾಲಕೃಷ್ಣ
ಹರತಾಳು ಹಾಲಪ್ಪ ಬಂದು ಹೋದ ನಂತರ ಬೇಳೂರು ಗೋಪಾಲಕೃಷ್ಣರವರು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ತಮ್ಮ ಬೆಂಬಲಿಗರೊಂದಿಗೆ ಬಂದು ದೇವರಲ್ಲಿ ಪ್ರಾರ್ಥಿಸಿದರು. ಮಾತನಾಡಿದ ಅವರು ಬೇಳೂರು ಕ್ಷೇತ್ರದಲ್ಲಿ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಎದುರು ಪ್ರಾರ್ಥಿಸಿದ್ದೇವೆ. ನಾವು 10 ಗಂಟೆಯಿಂದ 12 ಗಂಟೆಯೊಳಗೆ ಬರುವುದಾಗಿ ಹೇಳಿದ್ದೆವು. ಆದರೆ ನಾವು ಬರುವ ಮೊದಲೇ ಅವರು ಬಂದು ಹೋಗಿ ಪಲಾಯನ ಮಾಡಿದ್ದಾರೆ. ನನ್ನ ಜೊತೆಗೆ ಅವರಿಗೆ ಹಣ ಕೊಟ್ಟವರೂ ಕೂಡ ಇದ್ದಾರೆ. ದಾಖಲೆ ಪತ್ರಗಳನ್ನು ಬಿಡುಗಡೆ ಮಾಡುತ್ತೇನೆ ಎಂದರು. ಹರತಾಳು ಹಾಲಪ್ಪ ಮತ್ತು ಬೇಳೂರು ಗೋಪಾಲಕೃಷ್ಣ ಇಬ್ಪರೂ ಕೂಡ ಮಂಜುನಾಥ ಸ್ವಾಮಿಯ ದರ್ಶನ ಮಾಡಿದ ನಂತರ ಆರೋಪ ಪ್ರತ್ಯಾರೋಪ ಮಾಡಿದ್ದಾರೆ.