ನೆಲ್ಯಾಡಿ: ಜೇಸಿಐ ಉಪ್ಪಿನಂಗಡಿ ಘಟಕ ಮತ್ತು ಜೇಸಿಐ ಉಪ್ಪಿನಂಗಡಿ ಚಾರಿಟೇಬಲ್ ಟ್ರಸ್ಟ್ (ರಿ.), ಕಾಂಚನ ವೆಂಕಟಸುಬ್ರಹ್ಮಣ್ಯಂ ಸ್ಮಾರಕ ಪ್ರೌಢಶಾಲೆ, ಶ್ರೀ ಲಕ್ಷ್ಮೀನಾರಾಯಣ ಹಿರಿಯ ಪ್ರಾಥಮಿಕ ಶಾಲೆ ಹಾಗೂ ವಿಕ್ರಂ ಯುವಕ ಮಂಡಲ ಆಶ್ರಯದಲ್ಲಿ “ಸ್ಪಂದನ” ಮಕ್ಕಳ ಬೇಸಿಗೆ ಶಿಬಿರ ಕಾಂಚನ ಪ್ರೌಢ ಶಾಲೆ ಸಭಾಂಗಣದಲ್ಲಿ ಮೂರು ದಿನಗಳ ತನಕ ನಡೆಯಿತು.
ಶಿಬಿರದಲ್ಲಿ ಚಿತ್ರ ಕಲೆ, ಮುಖವಾಡ ತಯಾರಿಕೆ, ನೃತ್ಯ, ಹಾಡು, ಭಾಷಣ ಕಲೆ, ಕ್ರಾಫ್ಟ್, ವ್ಯಕ್ತಿತ್ವ ವಿಕಸನ ತರಬೇತಿ, ರಂಗ ಅಭಿನಯ ಮತ್ತು ಜೀವನ ಕೌಶಲ್ಯ ತರಬೇತಿ ನಡೆಯಿತು.
ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿ, ರಂಗಕರ್ಮಿ ನಿನಾಸಂ ಶೀನಾ ನಾಡೋಳಿ ಮತ್ತು ಚಿತ್ರ ಕಲಾ ಶಿಕ್ಷಕ ಮೋಹನ್ ಗೌಡ ನಿಂತಿಕಲ್ಲು ನೇತೃತ್ವದಲ್ಲಿ ತರಬೇತಿ ನಡೆಸಲಾಯಿತು. ಶಿಬಿರದಲ್ಲಿ 37 ಮಕ್ಕಳ ಭಾಗವಹಿಸಿದ್ದರು. ಈ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಜೇಸಿಐ ಉಪ್ಪಿನಂಗಡಿ ಘಟಕದ ಅಧ್ಯಕ್ಷೆ ಜೇಸಿ ಲವೀನಾ ಪಿಂಟೊ ವಹಿಸಿದ್ದರು. ಜೇಸಿಐ ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಜೇಸಿ ಆನಂದ ರಾಮಕುಂಜ, ಶಿಬಿರಾರ್ಥಿಗಳ ಪೋಷಕರಾದ ಯಾದವ ಗೌಡ ನೆಕ್ಕರೆ, ವಿಕ್ರಂ ಯುವಕ ಮಂಡಲ ಗೌರವ ಅಧ್ಯಕ್ಷ ಅನಿಲ್ ಪಿಂಟೊ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜೇಸಿಐ ಮೌನ ಸಾಧಕ ಗೌರವ ಪುರಸ್ಕಾರ ಪ್ರದಾನ ಈ ಸಮಾರಂಭದಲ್ಲಿ 35 ವರ್ಷದಿಂದ ಅಡಿಕೆ ಮತ್ತು ತೆಂಗಿನ ಮರ ಹತ್ತುವ ಕಠಿನ ಶ್ರಮದಾಯಕ ಕೆಲಸವನ್ನು ನಿಷ್ಠೆಯಿಂದ ನಿರ್ವಹಿಸಿಕೊಂಡು ಬಂದ ಪದಕ ಕೊರಗಪ್ಪ ಗೌಡರಿಗೆ ಜೇಸಿಐ ಮೌನ ಸಾಧಕ ಗೌರವ ಪುರಸ್ಕಾರ ನೀಡಲಾಯಿತು. ಹಾಗೆಯೇ ಸ್ಥಳೀಯ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆದು ಸಾಧನೆ ಮಾಡಿದ ಶ್ರವಣ ಕೆ.ಎ.(601),ನೇಹಾ (540) ಮತ್ತು ನವ್ಯ ಶ್ರೀ (527) ಮತ್ತು ಶಾಲೆಯ ನೂರು ಶೇಕಡಾ ಫಲಿತಾಂಶದ ಸಾಧನೆಯನ್ನು ಗುರುತಿಸಿ ಶಾಲಾ ಮುಖ್ಯಗುರು ರಮೇಶ್ ಮಯ್ಯರಿಗೆ ಸನ್ಮಾನ ಮಾಡಲಾಯಿತು.
ಶಿಬಿರ ನಿರ್ದೇಶಕ ಜೇಸಿ ಮೋಹನ್ ಚಂದ್ರ ತೋಟದ ಮನೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಭವಿತ ತೋಟದ ಮನೆ ಸಹಕರಿಸಿದರು. ಶಿಬಿರಕ್ಕೆ ಆಹಾರ ತಯಾರಿಸಿ ಕೊಟ್ಟು ಸಹಕರಿಸಿದ ರಾಧಾಕೃಷ್ಣ ಭಟ್ ಮತ್ತು ಆರತಿ ಯವರಿಗೆ ಕಿರು ಕಾಣಿಕೆ ನೀಡಿಲಾಯಿತು. ಶಿಬಿರದ 37 ಮಕ್ಕಳಿಗೆ ಕಿಟ್ ವಿತರಣೆ ಮಾಡಲಾಯಿತು. ಶಿಬಿರ ಗೀತೆಯೊಂದಿಗೆ ಶಿಬಿರ ಕೊನೆಗೊಂಡಿತು.