- ಹಳ್ಳಿಯ ಸೊಗಡು ಹೊಂದಿರುವ ಶಾಲಾ ಪರಿಸರ * ಶಿಕ್ಷಣದೊಂದಿಗೆ ಪಠ್ಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹ
ನೆಲ್ಯಾಡಿ:ಮೂವತ್ತೇಳನೇ ಶೈಕ್ಷಣಿಕ ವರ್ಷ ಆರಂಭಿಸುತ್ತಿರುವ ನೆಲ್ಯಾಡಿಯ ಬೆಥನಿ ವಿದ್ಯಾಸಂಸ್ಥೆ ಗುಣಮಟ್ಟದ ಶಿಕ್ಷಣಕ್ಕೆ ಹೆಸರಾಗಿದ್ದು, ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಸತತ ಶೇ.100 ಫಲಿತಾಂಶ ದಾಖಲಿಸುವ ಮೂಲಕ ಮೈಲುಗಲ್ಲು ಸ್ಥಾಪಿಸಿದೆ.
1987ರಲ್ಲಿ ಆರಂಭಗೊಂಡು, ಪರಿಸರದ ಶಿಕ್ಷಣ ಪ್ರೇಮಿಗಳ ಪಾಲಿಗೆ ವಿದ್ಯಾದೇಗುಲವೆಂದೇ ಆದರ ಪಡೆಯುತ್ತಿರುವ ಬೆಥನಿ ವಿದ್ಯಾಸಂಸ್ಥೆಯನ್ನು 37 ವರ್ಷಗಳ ಹಿಂದೆ ಧರ್ಮಗುರುಗಳಾದ ರೆ.ಫಾ.ಝಕರಿಯಾಸ್ ನಂದಿಯಾಟ್ ಒಐಸಿ ಸ್ಥಾಪಿಸಿದ್ದರು. ನೆಲ್ಯಾಡಿ ಆಸುಪಾಸಿನ ಮಕ್ಕಳಿಗೆ ಗುಣಮಟ್ಟದ ಆಂಗ್ಲ ಮಾಧ್ಯಮ ಶಿಕ್ಷಣ ನೀಡಬೇಕೆನ್ನುವ ಉದ್ದೇಶದಿಂದ ಸ್ಥಾಪಿಸಲಾದ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ.
ನಡೆದು ಬಂದ ಹಾದಿ:
1997ರಲ್ಲಿ ಮೊದಲ ಎಸ್‌ಎಸ್‌ಎಸ್‌ಎಲ್‌ಸಿ ಬ್ಯಾಚ್ ಇಲ್ಲಿಂದ ಹೊರ ಬಂತು. 2007ರಲ್ಲಿ ಪದವಿಪೂರ್ವ ವಿಜ್ಞಾನ ವಿಭಾಗ, 2012ರಲ್ಲಿ ವಾಣಿಜ್ಯ ವಿಭಾಗ ಆರಂಭಗೊಂಡಿತು. ಪ್ರಸ್ತುತ 1200 ಕಿಂತಲೂ ಅಧಿಕ ವಿದ್ಯಾರ್ಥಿಗಳು ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಸೌಲಭ್ಯಗಳು:
ಸರಕಾರದ ನಿಯಮದಂತೆ 3 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಶಿಶು ಕೇಂದ್ರ, 4 ವರ್ಷ ಮೇಲ್ಪಟ್ಟ ಮಕ್ಕಳಿಗೆ ಎಲ್‌ಕೆಜಿಗೆ ದಾಖಲಾತಿ ನೀಡಲಾಗುತ್ತಿದೆ. ಸುಸಜ್ಜಿತ ವಿಶಾಲ ಕೊಠಡಿ, ಸರಕಾರದ ನಲಿಕಲಿ ಆಧರಿತ ಶಿಶು ಶಿಕ್ಷಣ, ಸ್ಮಾರ್ಟ್ ಕ್ಲಾಸ್, ಒಳಾಂಗಣ ಹಾಗೂ ಹೊರಾಂಗಣ ಆಟಿಕೆ, ಗೋಡೆಗಳ ಮೇಲೆ ಮಕ್ಕಳ ಮನಸ್ಸನ್ನು ಉಲ್ಲಾಸಗೊಳಿಸುವ ಭಿತ್ತಿ ಚಿತ್ರ ವಿಶೇಷ ಇಲ್ಲಿದೆ. ಪ್ರತ್ಯೇಕ ವಿಶ್ರಾಂತಿಯ ಕೊಠಡಿ. ಆಂಗ್ಲ ಭಾಷಾ ಬೆಳವಣಿಗೆಗಾಗಿ ಭಾಷಾ ಸಂವಹನ ಕಾರ್ಯಕ್ರಮ, ಆಧುನಿಕ ಶೈಲಿಯ ಪಠ್ಯಕ್ರಮದ ಮೂಲಕ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸಲಾಗುತ್ತಿದೆ.
ಹಳ್ಳಿಯ ಸೊಗಡು ಹೊಂದಿರುವ ಶಾಲಾ ಪರಿಸರವು ಮಕ್ಕಳ ಕಲಿಕೆಗೆ ಪ್ರೋತ್ಸಾಹ ನೀಡುವುದರ ಜತೆಗೆ ಪಠ್ಯೇತರ ಚಟುವಟಿಕೆಗಳಾದ ಕ್ರೀಡೆ, ಸಂಸ್ಕೃತಿಕ, ಸಾಹಿತಿಕ ಇತ್ಯಾದಿ ಚಟುವಟಿಕೆಗಳಿಗೆ ಇಂಬು ನೀಡುತ್ತಿದೆ. ಶಾಲಾ ಪತ್ರಿಕೆಯ ಮೂಲಕ ವಿದ್ಯಾರ್ಥಿಗಳ ಸೃಜನಾತ್ಮಕ ಚಟುವಟಿಕೆಗಳಿಗೆ ಅವಕಾಶ ನೀಡಲಾಗುತ್ತಿದೆ.
ವಿದ್ಯಾರ್ಥಿಗಳಿಗಿರುವ ಅವಕಾಶಗಳು:
ಮಾನವೀಯ ಮೌಲ್ಯಗಳಾದ ನಂಬಿಕೆ, ಸಹಕಾರ, ಸೌಹಾರ್ದತೆ, ಕರುಣೆ, ಶಾಂತಿ, ಭಾವೈಕ್ಯತೆ ಬೆಳೆಸುವಲ್ಲಿ ಶಿಕ್ಷಕರು ಅವಿರತ ಶ್ರಮಿಸುತ್ತಿದ್ದಾರೆ. ಒಳಾಂಗಣ ಕ್ರೀಡೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸುಸಜ್ಜಿತ ಒಳಾಂಗಣ ಕ್ರೀಡಾಂಗಣ ಅನುಷ್ಠಾನದಲ್ಲಿದೆ.
ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ಸುಸಜ್ಜಿತ ವಿಜ್ಞಾನ ಪ್ರಯೋಗಾಲಯ, ಸಿಇಟಿ, ನೀಟ್, ಜೆಇ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿಶೇಷ ತರಬೇತಿ, ಸ್ಮಾರ್ಟ್ ಕ್ಲಾಸ್‌ಗಳು, ದೂರದಿಂದ ಬರುವ ವಿದ್ಯಾರ್ಥಿಗಳಿಗೆ ಶಾಲಾ ಬಸ್ ವ್ಯವಸ್ಥೆ, ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿ, ಬಡ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ಯೋಜನೆ ಇಲ್ಲಿದೆ.
ನುರಿತ 46 ಬೋಧಕ ಸಿಬ್ಬಂದಿಗಳು ಹಾಗೂ 19 ಬೋಧಕೇತರ ಸಿಬ್ಬಂದಿಗಳು ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಹಳ್ಳಿಯಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಪಟ್ಟಣದಲ್ಲಿ ದೊರೆಯುವಂತಹ ಶಿಕ್ಷಣ ನೀಡುವ ಉದ್ದೇಶದಿಂದಾಗಿ ಉತ್ತಮ ಇಂಗ್ಲಿಷ್ ಶಿಕ್ಷಣವನ್ನು ನೀಡುವ ಸಂಸ್ಥೆಯಾಗಿ ನೆಲ್ಯಾಡಿ ಬೆಥನಿ ವಿದ್ಯಾ ಸಂಸ್ಥೆಯು ಬೆಳೆಯುತ್ತಿದೆ. ಪ್ರತಿವರ್ಷ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಶೇಕಡ 100 ಫಲಿತಾಂಶ ಬರುತ್ತಿದೆ. ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಕಮ್ಯುನಿಕೇಶನ್, ಆರ್ಟಿಫಿಷಿಯಲ್ ಇಂಟಲಿಜೆಂಟ್ ಮತ್ತು ಸೆಮ್ ಎಜುಕೇಶನ್ ಅನ್ನು ಎಲ್ಲ ವಿದ್ಯಾರ್ಥಿಗಳಿಗೆ ನೀಡುವುದರೊಂದಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದ್ದೇವೆ.
– ಡಾ.ವರ್ಗೀಸ್ ಕೈಪನಡ್ಕ ಒಐಸಿ, ಪ್ರಾಂಶುಪಾಲರು ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆ , ನೆಲ್ಯಾಡಿ
ಮೂರು ದಶಕಗಳ ಹಿಂದಿನಿಂದ ನೆಲ್ಲ್ಯಾಡಿ ಸುತ್ತಮುತ್ತಲಿನ ನೂರಾರು ಮಕ್ಕಳಿಗೆ ಶಿಕ್ಷಣ ದೀವಿಗೆಯನ್ನು ಒದಗಿಸಿ ಅವರ ಬಾಳನ್ನು ಹಸನಾಗಿಸಿದ ಶಾಲೆಯೇ ಜ್ಞಾನೋದಯ ಬೆಥನಿ. ಇವತ್ತು ನಾನು ಏನಾಗಿದ್ದೇನೆಯೋ ಅದಕ್ಕೆ ಕಾರಣ ನನ್ನ ಕಲಿಕೆಗೆ ಸರಿಯಾದ ಅಡಿಪಾಯ ನೀಡಿದ ಇದೇ ಶಾಲೆ ಹಾಗು ಇಲ್ಲಿಯ ನನ್ನ ಗೌರವಾನ್ವಿತ ಶಿಕ್ಷಕರು. ಸೇವಾ ಮನೋಭಾವನೆಯಿಂದ ಬೆಥನಿ ಸನ್ಯಾಸ ಸಭೆಯ ಗುರುಗಳು ಮುನ್ನಡೆಸುತ್ತಿರುವ ಈ ಸಂಸ್ಥೆಯು ಗುಣಮಟ್ಟದ ಶಿಕ್ಷಣದ ಮೂಲಕ ಭಾರತ ದೇಶದ ಸಾವಿರಾರು ಸತ್ಪ್ರಜೆಗಳನ್ನು ಈ ಸಂಸ್ಥೆ ರೂಪಿಸಿದೆ.
ಪೂರ್ವ ವಿದ್ಯಾರ್ಥಿ – ಡಾ ಸುಪ್ರೀತ್ ಜೆ.ಲೋಬೊ M.S(Ay)PhD ಜೋಸ್ಸಿಸ್ ಆಯುರ್ವೇದ ಆಸ್ಪತ್ರೆ, ಉಪ್ಪಿನಂಗಡಿ