ನಿರ್ಮಾಣ ಹಂತದಲ್ಲಿದ್ದ ಮನೆ ಧ್ವಂಸ, ಕುಟುಂಬ ಬೀದಿಗೆ

ಶೇರ್ ಮಾಡಿ

ಉಪ್ಪಿನಂಗಡಿ: ಇಲ್ಲಿಗೆ ಸಮೀಪದ 34 ನೆಕ್ಕಿಲಾಡಿಯ ಸರ್ಕಾರಿ ಜಾಗದಲ್ಲಿ ಮಹಿಳೆಯೊಬ್ಬರು ನಿರ್ಮಿಸುತ್ತಿದ್ದ ಮನೆಯನ್ನು ಧ್ವಂಸಗೊಳಿಸಲಾಗಿದ್ದು, ಕುಟುಂಬ ಅಸಹಾಯಕ ಸ್ಥಿತಿಯಲ್ಲಿದೆ.

34-ನೆಕ್ಕಿಲಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಳಿ ಇರುವ, ಪುತ್ತೂರು ನಗರ ಸಭೆಗೆ ಸೇರಿದ ರೇಚಕ ಸ್ಥಾವರದ ಬಳಿ ಮಮತಾ ಎಂಬುವರು ನಿರ್ಮಿಸಿದ ಮನೆಯನ್ನು ಸಂಪೂರ್ಣವಾಗಿ ಕೆಡವಿ ಹಾಕಲಾಗಿದ್ದು, ಈ ಬಗ್ಗೆ ಮಮತಾ ಅವರು ಕನ್ನಡಿಗಾರ್ ನಿವಾಸಿ ಬಾಲಚಂದ್ರ ಗೌಡ ವಿರುದ್ಧ ಉಪ್ಪಿನಂಗಡಿ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

2024ರ ಏಪ್ರಿಲ್ 12ರಂದು ನಾವು ಮನೆ ಕಟ್ಟುತ್ತಿದ್ದ ಜಾಗದ ಸಮೀಪದ ಕನ್ನಡಿಗಾರ್ ನಿವಾಸಿ ಬಾಲಚಂದ್ರ ಗೌಡ, ‘ಇಲ್ಲಿ ನೀವು ಮನೆ ಕಟ್ಟಬಾರದು. ಇಲ್ಲಿ ನೀವು ವಾಸವಿರಬಾರದು ಎಂದು ಬೆದರಿಕೆ ಹಾಕಿ ಹೋಗಿದ್ದರು. ನನ್ನ ಗಂಡ ಕೆಲಸ ಕಳೆದುಕೊಂಡರೂ ಮಾನವೀಯ ನೆಲೆಯಲ್ಲಿ ನಗರ ಸಭೆಯ ವಸತಿ ಗೃಹದಲ್ಲಿ ನಮಗೆ ವಾಸಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಆದರೆ, ಆ ಬಳಿಕ ನಗರ ಸಭೆಯು ಮನೆ ಬಿಡುವಂತೆ ನೋಟಿಸ್‌ ನೀಡಿ, ನಮ್ಮನ್ನು ವಸತಿಗೃಹದಿಂದ ಎಬ್ಬಿಸಿತ್ತು. ಕಟ್ಟುತ್ತಿದ್ದ ಮನೆಯೂ ಪೂರ್ಣಗೊಳ್ಳದಿರುವುದರಿಂದ, ಬೇರೆ ಎಲ್ಲಿಯೂ ನಮಗೆ ಮನೆಯೂ ಇಲ್ಲದ್ದರಿಂದ ಸಂಬಂಧಿಕರ ಮನೆಯಲ್ಲಿ ವಾಸವಿದ್ದೆವು.

’34-ನೆಕ್ಕಿಲಾಡಿಯಲ್ಲಿರುವ ಪುತ್ತೂರು ನಗರ ಸಭೆಗೆ ಸೇರಿದ ರೇಚಕ ಸ್ಥಾವರ (ಕುಡಿಯುವ ನೀರು ಶುದ್ಧೀಕರಣ ಘಟಕ)ದಲ್ಲಿ 18 ವರ್ಷಗಳಿಂದ ನನ್ನ ಪತಿ ಆನಂದ ಕೆಲಸ ಮಾಡಿಕೊಂಡಿದ್ದರು. ಗುತ್ತಿಗೆದಾರರು ಬದಲಾಗಿದ್ದರಿಂದ ಅವರನ್ನು 2024ರ ಜನವರಿ 1ರಂದು ಕೆಲಸದಿಂದ ತೆಗೆಯಲಾಗಿತ್ತು. ಅಲ್ಲಿಯವರೆಗೆ ನಮಗೆ ಅಲ್ಲಿನ ಸರ್ಕಾರಿ ವಸತಿ ಗೃಹದಲ್ಲಿ ವಾಸಕ್ಕೆ ಅನುವು ಮಾಡಿಕೊಡಲಾಗಿತ್ತು. ‌ಈ ಮಧ್ಯೆ ಎಲ್ಲಿಯೂ ಜಾಗವಿಲ್ಲದ ನಾವು ಸುಮಾರು 15 ವರ್ಷಗಳ ಹಿಂದೆ ರೇಚಕ ಸ್ಥಾವರದ ಪಕ್ಕದಲ್ಲೇ ಸುಮಾರು 2 ಸೆಂಟ್ಸ್ ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡಿದ್ದು, ಅಲ್ಲಿ ಶೆಡ್ ನಿರ್ಮಿಸಿದ್ದೆವು. 2022ರಲ್ಲಿ ಅಲ್ಲೊಂದು ಮನೆ ನಿರ್ಮಿಸುವ ಉದ್ದೇಶದಿಂದ ಆ ಶೆಡ್ ಕೆಡವಿದ್ದೆವು. ಚಿನ್ನಾಭರಣ ಮಾರಿ, ಸಾಲ ಮಾಡಿದರೂ ಮನೆಯನ್ನು ಪೂರ್ತಿಗೊಳಿಸಲು ಸಾಧ್ಯವಾಗಿರಲಿಲ್ಲ.

ಈ ಬಾರಿ ಅದಕ್ಕೆ ಶೀಟ್ ಹಾಕಿ ಆ ಮನೆಯಲ್ಲಿ ವಾಸ್ತವ್ಯ ಮಾಡಬೇಕೆಂದು ಯೋಚನೆಯಲ್ಲಿದ್ದೆವು. ಆದರೆ, ಅಲ್ಲಿಗೆ ಬಂದು ನೋಡಿದಾಗ ಮನೆಯನ್ನು ಸಂಪೂರ್ಣವಾಗಿ ಕೆಡವಲಾಗಿತ್ತು. ಒಂದು ಕಡೆ ಕೆಲಸ ಕಳೆದುಕೊಂಡಿರುವ ಪತಿ, ಎಂಬಿಎ ಓದುತ್ತಿರುವ ಪುತ್ರ, ದ್ವಿತೀಯ ಪಿಯು ಓದುತ್ತಿರುವ ಪುತ್ರಿಯೊಂದಿಗೆ ನಾವೆಲ್ಲಾ ಈಗ ಬೀದಿಗೆ ಬೀಳುವಂತಾಗಿದೆ’ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಅಕ್ರಮ-ಸಕ್ರಮ, 94ಸಿ ಅಡಿ ಮಂಜೂರು ಆಗುವ ಭೂಮಿ ಸರ್ಕಾರದ್ದಾಗಿದ್ದು, ಅದನ್ನು ಕಾನೂನು ಪ್ರಕಾರ ಸಕ್ರಮ ಮಾಡಲಾಗುತ್ತದೆ. ವ್ಯಕ್ತಿಯೊಬ್ಬ ಸರ್ಕಾರಿ ಜಾಗ ಅತಿಕ್ರಮಿಸಿದ್ದರೆ ಅದನ್ನು ತೆರವು ಮಾಡಲು ಸರ್ಕಾರಿ ಇಲಾಖೆ ಇದೆ. ಹಣದ ಅಹಂಕಾರದಿಂದ ಬಡವರ ಮೇಲೆ ಈ ರೀತಿಯ ದೌರ್ಜನ್ಯವೆಸಗಿರುವುದು ಖಂಡನೀಯ ಎಂದು ಸ್ಥಳೀಯರು ತಿಳಿಸಿದ್ದಾರೆ.

Leave a Reply

error: Content is protected !!