ಹಿಂದೂ ಸ್ವಾಮೀಜಿಯೊಬ್ಬರ ಫೋಟೋ ತಿರುಚಿ ಸ್ಟೇಟಸ್‌; ಪ್ರಕರಣಕ್ಕೆ ಕ್ಷಮೆ ಯಾಚನೆ

ಶೇರ್ ಮಾಡಿ

ಕಡಬ: ಹಿಂದೂ ಸ್ವಾಮೀಜಿಯೊಬ್ಬರ ಫೋಟೋಗೆ ತಮಿಳುನಾಡು ಬಿಜೆಪಿ ಮುಖಂಡ ಅಣ್ಣಾ ಮಲೈ ಅವರ ಮುಖವನ್ನು ಎಡಿಟ್‌ ಮಾಡಿ ವಿಕೃತಿ ಮೆರೆದು ಅದನ್ನು ವಾಟ್ಸಾಪ್‌ ಸ್ಟೇಟಸ್‌ ಹಾಕಿದ್ದ ಅನ್ಯ ಕೋಮಿನ ವ್ಯಕ್ತಿ ದೇವಸ್ಥಾನಕ್ಕೆ ಬಂದು ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರಲ್ಲಿ ಕ್ಷಮೆ ಯಾಚಿಸಿದ ಬಳಿಕ ಪ್ರಕರಣಕ್ಕೆ ತೆರೆ ಎಳೆದ ಘಟನೆ ಕಡಬದಲ್ಲಿ ನಡೆದಿದೆ.

ಕಡಬದ ವರ್ತಕ ಅನ್ವರ್‌ ಎಂಬ ವ್ಯಕ್ತಿ ಸ್ವಾಮೀಜಿಯ ಅವಹೇಳನಕಾರಿ ರೀತಿಯಲ್ಲಿ ತಿರುಚಿದ ಫೋಟೋವನ್ನು ತನ್ನ ಮೊಬೈಲ್‌ ಸ್ಟೇಟಸ್‌ನಲ್ಲಿ ಹಾಕುವ ಮೂಲಕ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದ್ದ. ಸಾಮಾಜಿಕ ಜಾಲತಾಣಗಳ ಮೂಲಕ ಆ ಸುದ್ದಿ ಹರಡಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.

ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿರುವುದನ್ನು ಮನಗಂಡ ಅನ್ವರ್‌ ಸ್ಟೇಟಸ್‌ ಅನ್ನು ಅಳಿಸಿಹಾಕಿದ್ದರು. ಅನ್ವರ್‌ ವಿರುದ್ಧ ಪೊಲೀಸರಿಗೆ ದೂರು ನೀಡುವ ಕುರಿತು ತೀರ್ಮಾನಿಸಿ ಶುಕ್ರವಾರ ಕಡಬದ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ಬಳಿ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಜಮಾಯಿಸಿದ್ದರು. ಆಗ ದೇವಸ್ಥಾನದ ಬಳಿ ಬಂದ ಅನ್ವರ್‌ ಹಿಂದೂ ಸಂಘಟನೆಗಳ ಕಾರ್ಯಕರ್ತರು ಹಾಗೂ ಮುಖಂಡರಲ್ಲಿ ನನ್ನದು ತಪ್ಪಾಗಿದೆ. ನಾನು ಇನ್ನು ಮುಂದೆ ಇಂತಹ ಕೃತ್ಯ ಮಾಡುವುದಿಲ್ಲ ಎಂದು ತಪ್ಪೊಪ್ಪಿಕೊಂಡರು.

ಆ ಸಂದರ್ಭದಲ್ಲಿ ಜಿ.ಪಂ. ಮಾಜಿ ಸದಸ್ಯ ಕೃಷ್ಣ ಶೆಟ್ಟಿ ಹಾಗೂ ಹಿಂದೂ ಮುಖಂಡ ರಘುರಾಮ ನಾೖಕ್‌ ಕುಕ್ಕೆರೆಬೆಟ್ಟು ಅವರು ಮಾತನಾಡಿ ಹಿಂದೂಗಳ ಕ್ಷಮಾ ಗುಣವನ್ನು ದೌರ್ಬಲ್ಯ ಎಂದು ತಿಳಿದು ಈ ರೀತಿ ಮಾಡಿದ್ದೀರಿ ಎಂದು ಅನ್ವರ್‌ ವಿರುದ್ಧ ತೀವ್ರವಾಗಿ ಹರಿಹಾಯ್ದರು. ಅನ್ವರ್‌ ಮತ್ತೆ ಈ ರೀತಿಯ ತಪ್ಪು ಮಾಡುವುದಿಲ್ಲ ಎಂದು ತಪ್ಪೊಪ್ಪಿಕೊಂಡು ತಪ್ಪಿಗಾಗಿ ಕ್ಷಮೆ ಕೇಳಿದ ಹಿನ್ನೆಲೆಯಲ್ಲಿ ಕಾರ್ಯಕರ್ತರ ಜತೆಗೆ ಮಾತುಕತೆ ನಡೆಸಿದ ಪ್ರಮುಖರು ಪೊಲೀಸರಿಗೆ ದೂರು ನೀಡುವ ತೀರ್ಮಾನವನ್ನು ಹಿಂಪಡೆದು ಮುಂದೆ ಈ ರೀತಿಯ ತಪ್ಪೆಸಗದಂತೆ ಅನ್ವರ್‌ಗೆ ಎಚ್ಚರಿಕೆ ನೀಡಿ ಪ್ರಕರಣಕ್ಕೆ ತೆರೆ ಎಳೆದರು.

Leave a Reply

error: Content is protected !!