ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಂದುಕೊಂಡಿದ್ದಕ್ಕಿಂತ ಕಡಿಮೆ ಸ್ಥಾನಗಳನ್ನು ಗಳಿಸಿದೆ. ಇದರ ಬೆನ್ನಲ್ಲೇ ಆಡಳಿತಕ್ಕೆ ಬಂದ ನಂತರ ಜಾರಿಗೆ ತಂದಿರುವ ಪಂಚ ಗ್ಯಾರಂಟಿಗಳ ಮೇಲೆ ಪ್ರಭಾವ ಬೀರಲಿದೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ. ಅದರಲ್ಲೂ ಉಚಿತ ಬಸ್ ಪ್ರಯಾಣ ನೀಡುವ ಶಕ್ತಿ ಯೋಜನೆಯ ಸ್ಥಗೀತದ ಬಗ್ಗೆ ವದಂತಿಗಳಿವೆ.
ಈಗಾಗಲೇ ಹಲವಾರು ಬಾರಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ಗ್ಯಾರಂಟಿ ಯೋಜನೆಗಳು ಸ್ಥಗಿತವಾಗುವುದಿಲ್ಲ ಎಂದು ಹೇಳುತ್ತಲೆ ಇದ್ದಾರೆ. ಆದರೂ ಕೂಡ ಆಗ್ಗಾಗೆ ಕೇಳಿ ಬರುವ ವದಂತಿಗಳಿಗೆ ಸ್ಪಷ್ಟನೆ ನೀಡುತ್ತಾರೆ. ಸಾರಿ ಸಚಿವ ರಾಮಲಿಂಗ ರೆಡ್ಡಿ ಕೂಡ ಶಕ್ತಿ ಯೋಜನೆ ಇರುತ್ತಾ ಇಲ್ವಾ ಎನ್ನುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
“ಮತ ಪಡೆಯೋದಕ್ಕಾಗಿ ಗ್ಯಾರಂಟಿಗಳನ್ನು ನೀಡಿಲ್ಲ’: ರಾಮಲಿಂಗ ರೆಡ್ಡಿ
ಊಹಾಪೋಹಗಳ ಬೆನ್ನಲ್ಲೇ ಈ ಬಗ್ಗೆ ಟ್ವೀಟ್ ಮಾಡಿರುವ ಅವರು, “ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳನ್ನು ಮತ ಪಡೆಯೋದಕ್ಕಾಗಿ ನೀಡಿಲ್ಲ. ಲೋಕಸಭಾ ಚುನಾವಣೆಯವರೆಗೆ ಅಂತ ನಿಗದಿ ಮಾಡಿಲ್ಲ. ಯಾವುದೇ ಕಾರಣಕ್ಕೂ ಶಕ್ತಿ ಯೋಜನೆಯನ್ನು ನಿಲ್ಲಿಸುವುದಿಲ್ಲ” ಎಂದು ಭರವಸೆ ನೀಡಿದ್ದಾರೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ 5900 ಕೋಟಿ ಸಾಲದ ಹೊರೆ ನಮ್ಮ ತಲೆ ಮೇಲೆ : ರಾಮಲಿಂಗಾರೆಡ್ಡಿ
“ಶ್ರೀ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾಡಿದ್ದ ಬೆಲೆ ಏರಿಕೆಯಿಂದ ಜನರು ತತ್ತರಿಸಿದ್ದರು. ಅವರಿಗೆ ಸಹಾಯ ಮಾಡೋದಕ್ಕಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗಿತ್ತು. ಇದರಿಂದ ಬಡ, ಮಧ್ಯಮ ವರ್ಗದವರಿಗೆ ಸಹಾಯ ಆಗಿದೆ” ಎಂದು ತಮ್ಮ ಗ್ಯಾರಂಟಿಗಲು ಬಡವರಿಗೆ ತಲುಪುತ್ತಿದೆ ಎಂಬುದನ್ನು ಹೇಳಿದ್ದಾರೆ.
“ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ಶಕ್ತಿ ಯೋಜನೆಗಾಗಿ ಬಜೆಟ್ ನಲ್ಲಿ ಸುಮಾರು 5,500 ಕೋಟಿ ರೂಪಾಯಿ ಮೀಸಲಿಟ್ಟಿದ್ದಾರೆ. ಶಕ್ತಿ ಯೋಜನೆಗೆ ಯಾವುದೇ ಸಮಸ್ಯೆ ಇಲ್ಲ. ನಮ್ಮ ಕಾಂಗ್ರೆಸ್ ಸರ್ಕಾರ ಇರುವವರೆಗೂ ಶಕ್ತಿ ಯೋಜನೆ ಇರುತ್ತೆ. ಯಾರಿಗೂ ಅನುಮಾನ ಬೇಡ. ಮುಂದೆಯೂ ಸಹ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಆಗಲೂ ಶಕ್ತಿ ಯೋಜನೆ ಇರುತ್ತದೆ.” ಎಂದು ಕನ್ನಡಿಗರಿಗೆ ಭರವಸೆ ನೀಡಿದ್ದಾರೆ.
ಬಸ್ ಟಿಕೆಟ್ ದರ ಏರಿಕೆ!
ಇತ್ತ, ಹೆಚ್ಚುತ್ತಿರುವ ಡೀಸೆಲ್ ಬೆಲೆ ಮತ್ತು ಇತರ ಘಟಕಗಳ ಬೆಲೆ ಏರಿಕೆಯಾಗಿರುವ ಜೊತೆಗೆ ನೌಕರರ ವೇತನವೂ ಏರಿಕೆಯಾಗಿದ್ದು, ರಸ್ತೆ ಸಾರಿಗೆ ನಿಗಮದ (ಆರ್‌ಟಿಸಿ) ಬಸ್‌ಗಳ ನಿರ್ವಹಣಾ ವೆಚ್ಚವು ಹೆಚ್ಚಾಗಿದೆ. ಹೀಗಾಗಿ ಬಸ್ ಟಿಕೆಟ್ ದರ ಏರಿಕೆ ಪ್ರಸ್ತಾವನೆ ಸರ್ಕಾರದ ಮುಂದಿದೆ. ಟಿಕೆಟ್ ದರ ಹೆಚ್ಚಳದ ಪ್ರಸ್ತಾವನೆಯು ಶೇಕಡಾ 25-30 ಆಗಿದ್ದರೆ, ಸರ್ಕಾರವು 15-20 ಶೇಕಡಾ ಹೆಚ್ಚಳವನ್ನು ಒಪ್ಪಿಕೊಳ್ಳಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.