ಆನ್ಲೈನ್ ಶಾಪಿಂಗ್ ಇತ್ತೀಚಿನ ವರ್ಷಗಳಲ್ಲಿ ಸಖತ್ ಟ್ರೆಂಡ್ ಆಗುತ್ತಿದ್ದು, ಕುಳಿತಲ್ಲಿಯೇ ಏನು ಬೇಕಾದರೂ ಆರ್ಡರ್ ಮಾಡಿ ತೆಗೆದುಕೊಳ್ಳಬಹುದಾಗಿದೆ. ನಾವು ಆರ್ಡರ್ ಮಾಡಿದ ವಸ್ತು ನಮ್ಮ ಕೈಸೇರಿದ ನಂತರ ಅದನ್ನು ಒಮ್ಮೆ ತೆಗೆದು ಪರಿಶೀಲಿಸುತ್ತೇವೆ.
ಕೆಲವೊಮ್ಮೆ ಬೇರೆ ವಸ್ತು ಬಂದಿರುತ್ತದೆ. ಇನ್ನೂ ಕೆಲವೊಮ್ಮೆ ವಸ್ತುವಿನ ಕ್ವಾಲಿಟಿ ಚೆನ್ನಾಗಿರುವುದಿಲ್ಲ ಎಂಬ ಕಾರಣಕ್ಕೆ ಹಿಂತಿರುಗಿಸುತ್ತೇವೆ. ಆದರೆ, ಆರ್ಡರ್ ಮಾಡಿದ ವಸ್ತುವಿನ ಬದಲು ಹಾವು ಬಂದರೆ ಆಗೇನು ಮಾಡುವುದು. ಈ ಬಗ್ಗೆ ಬೆಂಗಳೂರು ಮೂಲದ ದಂಪತಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಬೆಂಗಳೂರಿನ ಸರ್ಜಾಪುರ ನಿವಾಸಿಗಳಾದ ದಂಪತಿಗಳು ಆನ್ಲೈನ್ ಶಾಪಿಂಗ್ ದೈತ್ಯ ಅಮೆಜಾನ್‌ನಲ್ಲಿ ಎಕ್ಸ್‌ಬಾಕ್ಸ್ ಕಂಟ್ರೋಲರ್ ಬುಕ್ ಮಾಡಿದ್ದಾರೆ. ಪಾರ್ಸೆಲ್ ತೆರೆಯುತ್ತಿದ್ದಂತೆ ಹಾವನ್ನು ನೋಡಿ ಬೆಚ್ಚಿಬಿದ್ದ ದಂಪತಿಯು ತಮಗಾದ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಸಖತ್ ವೈರಲ್ ಆಗಿದ್ದು, ಇದಕ್ಕೆ ಸಂಬಂಧಿಸಿದಂತೆ ಕಂಪನಿ ಸ್ಪಷ್ಟನೆ ನೀಡಿದೆ.
ಸಾಫ್ಟ್‌ವೇರ್ ಉದ್ಯೋಗದಲ್ಲಿರುವ ಈ ದಂಪತಿ ವಾರದ ಹಿಂದೆಯಷ್ಟೇ ಅಮೆಜಾನ್‌ನಲ್ಲಿ ಎಕ್ಸ್‌ಬಾಕ್ಸ್ ಕಂಟ್ರೋಲರ್ ಆರ್ಡರ್ ಮಾಡಿದ್ದರು. ಅದರಂತೆ ಪಾರ್ಸೆಲ್ ಮನೆ ಬಾಗಿಲಿಗೆ ಬಂದು ತಲುಪಿದೆ. ಪಾರ್ಸೆಲ್ ಓಪನ್ ಮಾಡುತ್ತಿದ್ದಂತೆ ಅದರೊಳಗೆ ಎಕ್ಸ್‌ಬಾಕ್ಸ್ ಕಂಟ್ರೋಲರ್ ಬದಲಾಗಿ ನಾಗರಹಾವು ಎಡೆ ಎತ್ತಿ ನಿಂತಿರುವುದನ್ನು ಕಂಡು ದಂಗಾಗಿದ್ದಾರೆ. ಹಾವನ್ನು ಕಂಡು ಕೂಡಲೇ ಬಾಕ್ಸ್ ಮುಚ್ಚಿರುವ ದಂಪತಿ ತಮಗಾದ ಅನುಭವವನ್ನು ವಿಡಿಯೋ ಸಂದೇಶದ ಮೂಲಕ ಹಂಚಿಕೊಂಡಿದ್ದಾರೆ.
ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪ್ರತಿಕ್ರಿಯಿಸಿರುವ ಕಂಪನಿಯು ದಂಪತಿಗೆ ಎಕ್ಸ್ ಬಾಕ್ಸ್ನ ಸಂಪೂರ್ಣ ಹಣವನ್ನು ವಾಪಸ್ ನೀಡಿದ್ದಾರೆ. ಆದರೆ, ಆ ಪಾರ್ಸೆಲ್ನೊಳಗೆ ಹಾವು ಹೇಗೆ ಸೇರಿಕೊಂಡಿತ್ತು ಎಂಬುದರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಬದಲಾಗಿ ತಪ್ಪಾಗಿ ಪಾರ್ಸೆಲ್ ಬಂದಿರುವುದಕ್ಕೆ ವಿಷಾದ ವ್ಯಕ್ತಪಡಿಸುವುದಾಗಿ ಹೇಳಿಕೊಂಡಿದೆ. ಆದರೆ ಪಾರ್ಸೆಲ್ ಒಳಗಡೆ ಜೀವಂತ ಹಾವು ಹೇಗೆ ಬಂತು ಎಂಬುದು ಸದ್ಯ ಪ್ರಶ್ನೆಯಾಗಿ ಉಳಿದಿದೆ.