ಆಧುನಿಕ ಭಾರತದ ನಿರ್ಮಾತೃ ಎಂದೇ ಖ್ಯಾತರಾದ ಕೆಂಪಾಪುರದ ಕೆಂಪೇಗೌಡರ 518ನೇ ಜನ್ಮ ದಿನದ ಸವಿನೆನಪಿಗಾಗಿ ಈ ಲೇಖನ ಅರ್ಪಿಸುತ್ತಿರುವೆ.
ನಾಡು ನುಡಿ. ನೆಲ ಜಲ. ಸಂಸ್ಕಾರ ಸಂಸ್ಕೃತಿಯನ್ನು ಉಳಿಸಿ ಬೆಳಸಿದ ಅನೇಕ ಮಹನೀಯರಲ್ಲಿ ಕೆಂಪೇಗೌಡ ಅವರೂ ಒಬ್ಬರು. ಆಧುನಿಕ ಭಾರತದ ನಿರ್ಮಾತೃಗಳಲ್ಲಿ ಒಬ್ಬರಾದ ಶ್ರೀ ಕೃಷ್ಣದೇವರಾಯ ಅವರ ಗರಡಿಯಲ್ಲಿ ಬೆಳೆದ ಕೆಂಪುನಂಜೇಗೌಡರು ಅವರ ಕಾರ್ಯವೈಖರಿಯ ಪರಿಪಾಲಕರಾಗಿದ್ದರು. ಅವರನ್ನು ಅನುಸರಿಸಿ ಬಾಳುತ್ತಿದ್ದರು. ಸ್ವಾಭಿಮಾನದಿಂದ ಬುದುಕಬೇಕು ಎಂಬ ಧೀರೋದತ್ತ ಆಡಳಿತವನ್ನು ನಡೆಸಿದರು. ವಿಜಯನಗರ ಸಾಮ್ರಾಜ್ಯದ ಈ ಆಡಳಿತವು ನಾಡಿನಲ್ಲಿ ಕೆಂಪೇಗೌಡರಂತ ಅನೇಕ ಸಾಮಂತರನ್ನು ಬೆಳೆಸಿತು.
ಅನೇಕ ರಾಜಮಹಾರಾಜರ ಹುಟ್ಟಿಗೆ ಕಾರಣವಾಯ್ತು. ಜಗತ್ತಿನ ವಿವಿಧ ದೇಶಗಳನ್ನು ತನ್ನೆಡೆಗೆ ಸೆಳೆದು ತನ್ನ ನಾಡಭಕ್ತಿ. ಆಡಳಿತದ ವೈಖರಿ ಹಾಗೂ ಅಭ್ಯುದಯಕ್ಕೆ ಬೇಕಾದ ಮಾರ್ಗೋಪಾಯಗಳನ್ನು ತೋರಿಸಿಕೊಟ್ಟಿತು. ಅಂತಹ ವೈಭವಯುತ ಸಾಮ್ರಾಜ್ಯದ ಸಾಮಂತನಾಗಿ ದಕ್ಷಿಣ ಭಾರತದ ಬೆಂದಕಾಳೂರನ್ನು ಆಳಿದ ತೀಕ್ಷ್ಣಮತಿ. ಛಲಗಾರ. ಆಡಳಿತದ ಪರಿಣಿತ ಕೆಂಪೆಗೌಡರು ಈ ನಾಡು ಕಂಡ ಅಪ್ರತಿಮಾ ಆಡಳಿತಗಾರ ಎಂದು ಗುರುತಿಸುತ್ತದೆ. ನವ ಕರ್ನಾಟಕದ ನಿರ್ಮಾತೃವಾಗಿ ಮಾದರಿಯಾದ ಕೆಂಪೇಗೌಡ. ನಾಡಪ್ರಭು ಕೆಂಪೇಗೌಡ. ಆಧುನಿಕ ಭಾರತದ ನಿರ್ಮಾತೃ ಎಂದು ಕರೆಸಿಕೊಳ್ಳುವ ಕೆಂಪೇಗೌಡರು ಈ ನಾಡು ಕಂಡ ಅತ್ಯುತ್ತಮ ಆಡಳಿತಗಾರರು. ಎಂದು ಎಲ್ಲರ ಸ್ಮರಣೆಯಲ್ಲಿ ಉಳಿದಿದ್ದಾರೆ.
ಜೂನ್ 17 ಕ್ರಿ ಶ 1510ರಲ್ಲಿ ಬೆಂಗಳೂರಿನ ಯಲಹಂಕದ ಉಪನಗರದಲ್ಲಿ ಮೊರಸು ವೊಕ್ಕಲಿಗ ಮನೆತನದಲ್ಲಿ ಕೆಂಪನಂಜೇಗೌಡ ಹಾಗೂ ಲಿಂಗಮಾಂಬೆ ದಂಪತಿಗಳಿಗೆ ಕೆಂಪೇಗೌಡ. ವೀರಗೌಡ. ಬಸವಯ್ಯಗೌಡ ಹಾಗೂ ಕೆಂಪಸೋಮಯ್ಯ ಗೌಡ ಎಂಬ ನಾಲ್ಕು ಜನ ಮಕ್ಕಳು ಜನಿಸಿದರು. ಹಿರಿಯ ಮಗನಾದ ಹಿರಿಯ ಕೆಂಪೇಗೌಡರನ್ನು ಬಾಲ್ಯದಲ್ಲಿ ಕೆಂಪ. ಕೆಂಪಯ್ಯ. ಕೆಂಪೆಗೌಡ ಎಂದು ಕರೆಯುತ್ತಿದ್ದರು. ಬೆಳೆಯುತ್ತಾ ತಂದೆಯ ಆಡಳಿತದಲ್ಲಿ ಸಹಕರಿಸುತ್ತಾ ಸಾಗಿದ್ದ ಇವರಿಗೆ 1528 ರಲ್ಲಿ ಹಳೆ ಬೆಂಗಳೂರಿನ ಚನ್ನಾಂಬೆ ಎಂಬ ಸೋದರ ಸೊಸೆಯನ್ನು ಮದುವೆಯಾದರು. ತಂದೆ ಕೆಂಪನಂಜೇಗೌಡರಿಗೆ ವಯೋವದ್ದತನ ಕಾಡುತ್ತಿದ್ದರಿಂದ ಮಗನಿಗೆ 1931ರಲ್ಲಿ ಪಟ್ಟಗಟ್ಟಿ ಯುವರಾಜನನ್ನಾಗಿ ಮಾಡಿದರು.
ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿ ಸುಮಾರು 70 ವರ್ಷಗಳ ಕಾಲ ಯಲಹಂಕವನ್ನು ಆಳಿದ ಕೆಂಪನಂಜೇಗೌಡರ ಮಗನಾಗಿ ತಂದೆಯಂತೆ ಉತ್ತಮವಾದ ಆಡಳಿತಕ್ಕೆ ಅಡಿಪಾಯ ಹಾಕಿದನು. ಜಾತಿ ಧರ್ಮದ ಭೇದಭಾವ ಮರೆತು ವಿಜಯನಗರದ ಅರಸರಂತೆ ಸರ್ವರ ಹಿತ ಕಾಯುವ ಆಡಳಿತ ನಡೆಸಲಾರಂಭಿಸಿದನು.
ಕೆಂಪೇಗೌಡರ ಪೂರ್ವಜರು ತೆಲುಗು ಪ್ರದೇಶದ ಮೂಲದವರೆಂದು ಹಲವು ವಿದ್ವಾಂಸರು ಅಭಿಪ್ರಾರಪಟ್ಟಿದ್ದಾರೆ ಮತ್ತು ಮೊರಸು ಮನೆತನವು ಆಂದ್ರಪ್ರದೇಶದ ಮೂಲದ್ದು ಎಂದು ಗುರುತಿಸಲಾಗಿದೆ. 14ನೇ ಶತಮಾನದಲ್ಲಿ ಇವರು ಕರ್ನಾಟಕಕ್ಕೆ ವಲಸೆ ಬಂದು ನೆಲಸಿ ಆಡಳಿತ ಮಾಡಿದ್ದರು ಎಂದು ಹೇಳಲಾಗುತ್ತಿದೆ. ಕೆಂಪನಂಜೇಗೌಡರ ಪೂರ್ವಜರು ತೆಲುಗು ಭಾಷೆಯಲ್ಲಿ ಪರಿಣಿತರಾದ್ದರಿಂದ ಇವರು ತೆಲುಗು ಮೂಲದವರೆಂದು ಹೇಳಲಾಗುತ್ತಿದೆ. 15ನೇ ಶತಮಾನದಲ್ಲಿ ಕರ್ನಾಟಕಕ್ಕೆ ಬಂದು ವಿಜಯನಗರ ಸಾಮ್ರಾಜ್ಯದ ಸೇನೆಯಲ್ಲಿ ಸೇವೆ ಸಲ್ಲಿಸಿದವರಾಗಿದ್ದಾರೆ.
ನಾಡಗೌಡ ಕೆಂಪೇಗೌಡರು ಬಾಲ್ಯದಲ್ಲಿಯೇ ಚುರುಕು ಸ್ವಭಾವದವರಾದ್ದರಿಂದ ನಾಯಕತ್ವದ ಕೌಶಲವನ್ನು ಕರಗತ ಮಾಡಿಕೊಂಡವರಾದ್ದರಿಂದ ಆಗಲೇ ತಮ್ಮ ಉತ್ತಮ ಆಡಳಿತದ ಗುಣಲಕ್ಷಣಗಳನ್ನು ಪ್ರದರ್ಶಿಸಿದ್ದಾರೆ. ಹೇಸರಘಟ್ಟ ಸಮೀಪದ ಐಗೊಂಡಪುರ ಎಂಬ ಗ್ರಾಮದಲ್ಲಿ ಗುರುಗಳಾದ ಮಾಧವ ಭಟ್ ಅವರಲ್ಲಿ ಗುರುಕುಲ ಶಿಕ್ಷಣವನ್ನು ಪೂರೈಸಿ ವಿಜಯನಗರ ಸಾಮಂತ ದೊರೆ ಜಯಗೌಡರ ಮೊಮ್ಮಗ ರಾಣಾ ಭೈರವೆ ಗೌಡರಿಂದ ಹಿಡಿದು ನಾಲ್ಕನೇ ಕೆಂಪೇಗೌಡರು ಈ ವಂಶದ ಪ್ರಸಿದ್ದ ದೊರೆ ಎನಿಸಿದ್ದಾರೆ.
ವಿಜಯನಗರ ಸಾಮ್ರಾಜ್ಯದ ವೈಭವವನ್ನು ಕಣ್ಣಾರೆ ಕಂಡಿದ್ದ ಕೆಂಪೇಗೌಡರು ತಾನಿರುವ ಜಾಗದಲ್ಲೇ ಇಂತಹದ್ದೇ ಒಂದು ನಗರವನ್ನು ಕಟ್ಟಬೇಕೆಂಬ ಹಂಬಲ ಹೊಂದಿದ್ದನು. ಅದನ್ನು ಸಾಕಾರಗೊಳಿಸಲು ಆಗಿನ ವಿಜಯನಗರದ ಅರಸ ಅಚ್ಚುತರಾಯರನ್ನು ಭೇಟಿಯಾಗಿ ಅನುಮತಿ ಪಡೆದನು ಮತ್ತು ದೊರೆಗಳಿಂದ ಹಣದ ಸಹಾಯವನ್ನು ಪಡೆದನು.
ಬೆಂಗಳೂರು ನಿರ್ಮಾಣ
ಅಲ್ಲಿಂದ ಮರಳಿ ಬಂದ ಕೆಂಪೇಗೌಡರು ತನ್ನ ಅಮಾತ್ಯನಾದ ವೀರಯ್ಯ ಹಿರಿಯ ಮಗ ಗಿಡ್ಡೆ ಗೌಡ ಮತ್ತು ಹಲವು ಸೈನಿಕರೊಂದಿಗೆ ಯಲಹಂಕದಿಂದ ಶಿವನಸಮುದ್ರದ ಕಡೆಗೆ ಸೂಕ್ತ ಸ್ಥಳವನ್ನು ಹುಡುಕಲು ವಿಹಾರ ಹೊರಟನು. ಅಲ್ಲಾಯೇ ವಿಶಾಲವಾದ ಕಾಡು ಮತ್ತು ಪ್ರಸ್ತಭೂಮಿಯನ್ನು ನೋಡಿದನು. ಮತ್ತು ಇಲ್ಲಿಯೇ ನವನಗರ ಕಟ್ಟಬೇಕೆಂದು ತೀರ್ಮಾನಿಸಿದನು.
ಈಗಿನ ಚಿಕ್ಕಪೇಟೆ ಮತ್ತು ದೊಡ್ಡಪೇಟೆ ಸೇರುವ ಸ್ಥಳದಿಂದ ಪೂರ್ವಕ್ಕೆ ಅಲಸೂರು ಹೆಬ್ಬಾಗಿಲು. ಪಶ್ಚಿಮದಲ್ಲಿ ಅಳಪೇಟೆ. ಉತ್ತರದಲ್ಲಿ ಯಲಹಂಕ ಹಾಗೂ ದಕ್ಷಿಣದಲ್ಲಿ ಆನೇಕಲ್ ವರೆಗೂ ನಾಲ್ಕು ಜನ ರೈತರಿಂದ ಎತ್ತುಗಳು ನಿಲ್ಲುವತನಕ ನೇಗಿಲು ಹೊಡೆಸಿದನು. ಅತ್ಯುತ್ತಮ ಆಡಳಿತಗಾರನಾದ ಕೆಂಪೇಗೌಡರು 1526 ರಲ್ಲಿ ಬೆಂಗಳೂರು ಪುಣೆ ಹೆದ್ದಾರಿಯಲ್ಲಿ ಬೆಂಗಳೂರಿನಿಂದ ನಲವತ್ತೆಂಟು ಕಿಲೋಮೀಟರ್ ಉದ್ದದ ಶಿವಗಂಗಾ ಸಂಸ್ಥಾನವನ್ನು ವಶಪಡಿಸಿಕೊಂಡನು. ನಂತರ ದೊಮ್ಮಲೂರು (ಈಗಿನ ವಿಮಾನ ನಿಲ್ದಾಣ) ನ್ನು ವಶಪಡಿಸಿಕೊಂಡನು. ಈ ವಿಶಾಲವಾದ ಅರಣ್ಯ ಜಾಗದಲ್ಲಿ ವಿಜಯನಗರದ ಚಕ್ರವರ್ತಿ ಅಚ್ಚುತರಾಯರ ಅನುಮತಿಯೊಂದಿಗೆ 1537 ರಲ್ಲಿ ಬೆಂಗಳೂರು ಕೋಟೆ ಮತ್ತು ಪಟ್ಟಣವನ್ನು ನಿರ್ಮಿಸಿದನು. ಯಲಹಂಕದಿಂದ ಹೊಸ ಬೆಂಗಳೂರು ಪೇಟೆಗೆ ರಾಜಧಾನಿ ಬದಲಾಯಿಸಿದನು. ಮುಂದೆ ಹಲಸೂರು. ಬೇಗೂರು. ವರ್ತೂರು. ಜಿಗಣಿ. ತಲಗಟ್ಟಪುರ. ಕುಂಬರಗೋಳು ಕೆಂಗೇರಿ. ಬಾಣಾವರಗಳನ್ನು ವಶಪಡಿಸಿಕೊಂಡು ಆಡಳಿತ ಗಟ್ಟಿಗೊಳಿಸುತ್ತಾನೆ. 64 ಪೇಟೆಗಳನ್ನು ನಿರ್ಮಾಣ ಮಾಡಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಡುತ್ತಾನೆ. ಉದಾಹರಣೆಗೆ ಅಕ್ಕಿಪೇಟೆ. ರಾಣಿಪೇಟೆ. ಉಪ್ಪಾರಪೇಟೆ. ದೊಡ್ಡಪೇಟೆ. ಚಿಕ್ಕಪೇಟೆ. ಬಳೆಪೇಟೆ ಬಳ್ಳಾಪುರ ಪೇಟೆ. ಹಲಸೂರು ಪೇಟೆ. ಮಾನವರ್ಥೆ ಪೇಟೆ. ಮುತ್ಯಾಲಪೇಟೆ. ಕುಂಬಾರಪೇಟೆ. ಕುರುಬರ ಪೇಟೆ. ಗಾಣಿಗ ಪೇಟೆ. ತರಗುಪೇಟೆ. ಹೀಗೆ ಸುಮಾರು 64 ಪೇಟೆಗಳನ್ನು ನಿರ್ಮಿಸಿದನು.
ಕೋಟೆ. ಪೇಟೆ. ಗುಡಿ. ಕೆರೆ. ಮತ್ತು ಉದ್ಯಾನ ಎಂಬ ಐದು ಅಂಶಗಳನ್ನು ಮನದಲ್ಲಿಟ್ಟುಕೊಂಡು 1537ರಲ್ಲಿ ರಾಜಧಾನಿ ನಿರ್ಮಾಣದ ಕಾರ್ಯವನ್ನು ಆರಂಭಿಸುತ್ತಾನೆ. ಎಂಟು ದ್ವಾರಗಳಿರುವ ಕೋಟೆಯನ್ನು ಮತ್ತು ಕಂದಕವನ್ನೂ ನಿರ್ಮಿಸುತ್ತಾನೆ. ಅಗಲವಾದ ರಸ್ತೆಗಳನ್ನು. ನಿರ್ಮಾಣ ಮಾಡುತ್ತಾನೆ.
ತಂದೆಯಂತೆ ಕೃಷಿ ಮತ್ತು ಗೃಹ ಬಳಕೆಯ ಅಗತ್ಯ ವಸ್ತುವಾದ ನೀರಿನ ಪೂರೈಕೆಯ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದ ಕೆಂಪೇಗೌಡರು ಹಲವಾರು ಕೆರೆಗಳನ್ನು ಕಟ್ಟಿಸಿದ್ದರು. ಉದಾಹರಣೆಗೆ. ಕೆಂಪಾಂಬುದಿ ಕೆರೆ. ಧರ್ಮಾಂಬುದಿ ಕೆರೆ. ಸಂಪಂಗಿರಾಯ ಕೆರೆ. ಚನ್ನಮ್ಮಕೆರೆ. ಲಾಲ್ ಬಾಗ್ ಕಾರಂಜಿಕೆರೆ. ಅಲಸೂರು ಕೆರೆ. ಬೆಣ್ಣೆ ಹೊನ್ನಮ್ಮನ ಕೆರೆ ಮುಂತಾದವುಗಳನ್ನು ಕಟ್ಟಿಸಿ ರೈತರ ಕೃಷಿ ಚಟುವಟಿಕೆಗಳನ್ನು ಉತ್ತೇಜಿಸಿದರು.
ದೇವಾಲಯ ನಿರ್ಮಾಣ ಅಲ್ಲದೆ ಹಿಂದೂ ಧರ್ಮ ಉಳಿಸುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ ವಿಜಯನಗರ ಅರಸರ ಸಾಮಂತನಾಗಿದ್ದ ಈತನು ಅವರಂತೆ ದೈವದ ಆರಾಧಕನಾಗಿ ಧರ್ಮ ರಕ್ಷಣೆಯ ಕಾರ್ಯದಿಂದ ಹತ್ತಾರು ದೇವಾಲಯಗಳನ್ನು ನಿರ್ಮಿಸಿದನು. ಅಂದರೆ ದೊಡ್ಡಬಸವನ ಗುಡಿ. ಆಂಜಿನೇಯ ದೇವಸ್ಥಾನ. ಅಲಸೂರಿನ ಸೋಮೇಶ್ವರ ದೇಗುಲ. ನಗರದ ಅಣ್ಣಮ್ಮದೇವಿ ದೇವಾಲಯ. ಗವಿಗಂಗಾಧರ ಗುಹಾಂತರ ದೇವಾಲಯ ಮುಂತಾದವುಗಳನ್ನು ಕಟ್ಟಿಸಿ ಜೀರ್ಣೋದ್ಧಾರ ಮಾಡಿದನು. ಬಸವನಗುಡಿಯ ಹನ್ನೊಂದು ಅಡಿ ಎತ್ತರದ ಬಸವಣ್ಣನನ್ನು ಕೆತ್ತಿಸಿದ್ದೂ ಇವರೆ.
ಕೋಟೆ ನಿರ್ಮಾಣ
ನಾಡಿನ ಸುರಂಕ್ಷತೆಗಾಗಿ ಹಲವಾರು ಕೋಟೆಗಳನ್ನು ಕಟ್ಟಿಸುತ್ತಾನೆ. ಉದಾಹರಣೆಗೆ ಬೆಂಗಳೂರು ಕೋಟೆ. ಮಾಗಡಿಕೋಟೆ. ಹುಲಿಯೂರ ದುರ್ಗ ಕೋಟೆ. ಶಿವಗಂಗಾ ಕೋಟೆ. ರಾಮನಗರದ ರಾಮದುರ್ಗ ಕೋಟೆ. ಇನ್ನೂ ಹಲವು ಕೋಟೆಗಳನ್ನು ಕಟ್ಟಿ ನಗರವನ್ನು ರಕ್ಷಣೆ ಮಾಡುತ್ತಾರೆ. ಕಾವಲು ಕಾಯುವುದಕ್ಕಾಗಿ ಹತ್ತಾರು ಗೋಪುರಗಳನ್ನೂ ಕಟ್ಟಿಸಿದ್ದಾನೆ. ಅವುಗಳನ್ನು ನಾವು ಈಗಲೂ ಕಾಣಬಹುದು. ನಗರ ಪ್ರದೇಶಗಳನ್ನು ನಿರ್ಮಾಣ ಮಾಡಿ ಜನರ ವಾಸಕ್ಕೆ ಅನುಕೂಲ ಮಾಡಿದರು. ನಗರದ ನೀರು ಸರಬರಾಜು ಆಗಲು ಕೋಟೆಯ ಪಕ್ಕದಲ್ಲಿ ಕಂದಕಗಳನ್ನು ಮಾಡಿಸಿದರು. ಕೆರೆಗಳನ್ನು ಕಾಲುವೆಗಳನ್ನು ನಿರ್ಮಿಸಿದ್ದಾರೆ. ಬೂಳೆಗಳಿಗೆ ನೀರಾವರಿಯ ತೊಟ್ಟಿಗಳನ್ನು ನಿರ್ಮಿಸಿದರು. ಹೀಗೆ ಬೆಂಗಾಡಾಗಿದ್ದ ಬೆಂದಕಾಳೂರನ್ನು ಒಂದು ಸುಸಜ್ಜಿತ ನಗರವನ್ನಾಗಿ ನಿರ್ಮಾಣ ಮಾಡಿ ಇಂದಿನ ಬೆಂಗಳೂರು ಖ್ಯಾತಿಗೆ ಕಾರಣರಾದರು. ಅವರು ನಿರ್ಮಿಸಿದ ಕೋಟೆಗಳು ಪೇಟೆಗಳು. ಗುಡಿಗಳು ಕೆರೆಗಳು ಮತ್ತು ಉದ್ಯಾನವನಗಳು ಇಂದಿಗೂ ಸಾಕ್ಷಿಯಾಗಿ ನೋಡಲು ಸಿಗುತ್ತವೆ. ಆಧುನಿಕ ಭಾರತ ನಿರ್ಮಾಣದ ಕಾರ್ಯದಲ್ಲಿ ನಾಡಪ್ರಭು ಕೆಂಪೇಗೌಡರ ಪಾತ್ರ ಪ್ರಮುಖವಾದುದು ಎಂಬುದರಲ್ಲಿ ಸಂದೇಹವೇ ಇಲ್ಲ. ಇಂತಹ ದಕ್ಷ ಮತ್ತು ದೂರದೃಷ್ಠಿಯುಳ್ಳ ಜನಪರ ಆಡಳಿತವು ಇಂದು ವಿಶ್ವವಿಖ್ಯಾತಿಗೆ ಕಾರಣವಾಗಿದೆ. ಇಡೀ ಜಗತ್ತಿನ ಜನ ಬಂದು ನೆಲಸಿ ನೆಮ್ಮದಿಯನ್ನು ಕಾಣುವಂತಾಗಿದೆ.
ಸುಮಾರು 46 ವರ್ಷಗಳ ಕಾಲ ಆಡಳಿತ ನಡೆಸಿದ ಕೆಂಪೇಗೌಡರು ಮಾಗಡಿಯ ಕುಣಿಗಲ್ ನಿಂದ ಬೆಂಗಳೂರಿಗೆ ಹಿಂತಿರುಗುವ ಮಾರ್ಗಮಧ್ಯೆ ಕೆಂಪಾಪುರದಲ್ಲಿ 1569 ರಲ್ಲಿ ಮರಣ ಹೊಂದಿದರು. ಇದಕ್ಕೆ ಸಾಕ್ಷಿ ಎಂಬಂತೆ ಇತ್ತೀಚಿನ ದಿನಗಳಲ್ಲಿ ಕೆಂಪಾಪುರದಲ್ಲಿ ಕೆಂಪೇಗೌಡರ ಸಮಾಧಿ ಸ್ಥಳ ದೊರೆಕಿರುವುದು ಪುಷ್ಠಿ ನೀಡಿದೆ. ನಂತರ ಅವರ ಹಿರಿಯ ಮಗ ಗಿಡ್ಡೇಗೌಡರು 1578 ರ ತನಕ ಯಲಹಂಕ ಸಂಸ್ಥಾನವನ್ನೂ ಆಡಳಿತ ಮಾಡಿದರು ಎಂದು ಇತಿಹಾಸದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇಂತಹ ಅದ್ಭುತ ಆಡಳಿತಗಾರನ ಸ್ಮರಣೆಗಾಗಿ ಮತ್ತು ಅವರ ಸಾಧನೆಗಳು ಸಾಕ್ಷಿಯಾಗಿರಲಿ ಎಂಬುದಕ್ಕಾಗಿ 1609 ರಲ್ಲಿ ಗವಿಗಂಗಾಧರ ದೇವಸ್ಥಾನದಲ್ಲಿ ಕೆಂಪೇಗೌಡರ ಮೂರ್ತಿಯನ್ನು ಸ್ಥಾಪಿಸಲಾಯಿತು. 1964 ರಲ್ಲಿ ಕಾರ್ಪೂರೇಷನ್ ಕಛೇರಿ ಎದುರು ಮತ್ತೊಂದು ಮೂರ್ತಿಯನ್ನು ಸ್ಥಾಪಿಸಲಾಯಿತು. ಅವರ ಗೌರವಾರ್ಥ ಬೆಂಗಳೂರಿನ ಬಸ್ ನಿಲ್ದಾಣಕ್ಕೆ ಅಂತರಾಷ್ಟೀೃ ವಿಮಾನ ನಿಲ್ದಾಣಕ್ಕೆ. ಬಡಾವಣೆಗಳಿಗೆ. ಮೆಜೆಸ್ಟಿಕ್ ಮೆಟ್ರೋ ನಿಲ್ದಾಣಕ್ಕೆ. ರೇಲ್ವೆ ನಿಲ್ದಾಣ. ಪೋಲೀಸ್ ಸ್ಟೇಷನ್ . ಬಸ್ ನಿಲ್ದಾಣ. ಉದ್ಯಾನವನ. ನಗರಪಾಲಿಕೆ. ಹಾಗೂ ಶಿಕ್ಷಣ ಕ್ಷೇತ್ರದ ಹಲವು ಸ್ಥಳಗಳಿಗೆ ಅವರ ಹೆಸರನ್ನೇ ಇಡಲಾಗಿದೆ. ಉದಾಹರಣೆಗೆ ಕೆಂಪೇಗೌಡ ಇನ್ಸ್ಟಿಟ್ಯೂಟ್ ಆಫ್ ಫಿಜಿಯೋಥೆರಪಿ. ಮೆಡಿಕಲ್ ಸೈನ್ಸ್ . ನರ್ಸಿಂಗ್ ಕಾಲೇಜುಗಳು. ಮುಂತಾದವುಗಳಿಗೆ ಕೆಂಪೇಗೌಡರ ಹೆಸರನ್ನೇ ಇಡಲಾಗಿದೆ. ಅಲ್ಲದೆ 2017 ರಿಂದ ಈಚೆಗೆ ಅವರ ವಾರ್ಷಿಕೋತ್ಸವ ಮತ್ತು ಜಯಂತಿಯನ್ನು ಆಚರಿಸುತ್ತಿದೆ. ಅವರ ಹೆಸರಿನಲ್ಲಿ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಜೂನ್ 27. 2020 ರಂದು ಕೆಂಪೇಗೌಡರ 511ನೇ ಜನ್ಮ ದಿನದ ಸ್ಮರಣಾರ್ಥ 108 ಅಡಿ ಎತ್ತರದ ಕೆಂಪೇಗೌಡರ ಕಂಚಿನ ಮೂರ್ತಿಯನ್ನು ಮತ್ತು ಪ್ರತಿಮೆಯ ಸುತ್ತಲೂ 23 ಎಕರೆ ಉದ್ಯಾನವನವನ್ನು ನಿರ್ಮಿಸಲಾಯಿತು. ಆಧುನಿಕ ಬೆಂಗಳೂರಿನ ಗಲ್ಲಿ ಗಲ್ಲಿಗಳೂ ಕೆಂಪೇಗೌಡರ ಹೆಸರನ್ನು ಹೇಳಿ ಹೆಮ್ಮೆಪಡುತ್ತಿವೆ. ಸಾರಿಗೆ. ನೀರಾವರಿ. ವ್ಯಾಪಾರ. ಧರ್ಮಾಚರಣೆ. ಕೋಟೆಗಳು. ಕೆರೆಗಳು. ಪೇಟೆಗಳು ಹಾಗೂ ಉದ್ಯಾನವನಗಳು ಕೆಂಪೇಗೌಡರ ಆಡಳಿತದ ವೈಖರಿಯನ್ನು ಜನಪರ ಕಾಳಜಿಯನ್ನು ಮತ್ತು ಆಧೀನಿಕತೆಯ ದೂರದೃಷ್ಠಿಯನ್ನು ಬಿಂಬಿಸುತ್ತವೆ. ಜ್ಞಾನ. ವಿಜ್ಞಾನ. ತಂತ್ರಜ್ಞಾನ. ಆಡಳಿತ. ಸಾಮಾಜಿಕ ಸ್ಥಾನಮಾನ. ಹಾಗೂ ಸಂಸ್ಕತಿಯ ಹೆಚ್ಚುಗಾರಿಕೆಯಿಂದ ಇಡೀ ಜಗತ್ತಿನ ದೃಷ್ಠಿಯನ್ನು ತನ್ನೆಡೆಗೆ ಸೆಳೆದು ನಾಡಿನ ಹೆಮ್ಮೆಯನ್ನು ಹೆಚ್ಚಿಸಿದೆ. ಇದೆಕ್ಕೆಲ್ಲಾ ಕೆಂಪೇಗೌಡರ ಆ ಕಾರ್ಯಗಳೇ ಕಾರಣವೆಂದರೆ ಅತಿಶಯೋಕ್ತಿಯಾಗಲಾರದು. ಆ ಗೌರವದ ಭಾಗವಾಗಿರುವ ನಾವುಗಳೆಲ್ಲರೂ ನಿಜವಾಗಲೂ ಧನ್ಯರು.