ಭಾರತ ಕ್ರಿಕೆಟ್ ತಂಡವು ಟಿ20 ವಿಶ್ವಕಪ್ ಜಯಿಸಿದ ಬೆನ್ನಲ್ಲೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಘೋಷಿಸಿದ ಬಹುಮಾನ ಮೊತ್ತದಲ್ಲಿ ರಾಹುಲ್ ದ್ರಾವಿಡ್ ₹2.5 ಕೋಟಿಯನ್ನು ತಿರಸ್ಕರಿಸಿದ್ದಾರೆ. ದ್ರಾವಿಡ್ ಹೀಗೇಕೆ ಮಾಡಿದರು ಎಂಬ ಸುದ್ದಿ ಈಗ ಚರ್ಚೆಯಾಗುತ್ತಿದೆ.
2007ರ ಬಳಿಕ ಟಿ20 ವಿಶ್ವಕಪ್ ಗೆದ್ದ ತಂಡಕ್ಕೆ ಬಿಸಿಸಿಐ ಬರೋಬ್ಬರಿ ₹125 ಕೋಟಿ ಬಹುಮಾನ ಮೊತ್ತವನ್ನು ಘೋಷಿಸಿತು. ಇದರಲ್ಲಿ ಮುಖ್ಯ ಕೋಚ್, ಆಟಗಾರರು, ಇತರ ಸಿಬ್ಬಂದಿಗೆ ಮೊತ್ತ ಹಂಚಿಕೆ ಮಾಡಲಾಗಿತ್ತು. ಆದರೆ ತಂಡಕ್ಕೆ ಕಪ್ ಸಿಗುವಲ್ಲಿ ಮಹತ್ತರ ಪಾತ್ರ ವಹಿಸಿದ್ದ ನಿರ್ಗಮಿತ ಕೋಚ್ ದ್ರಾವಿಡ್ ಅವರು ತಮ್ಮ ಪಾಲಿನ ₹5 ಕೋಟಿಯಲ್ಲಿ ₹2.5 ಕೋಟಿಯನ್ನು ತಿರಸ್ಕರಿಸಿದ್ದಾರೆ. ಇದಕ್ಕೆ ಅವರು ನೀಡಿದ ಉತ್ತರ ಅವರ ಅಭಿಮಾನಿಗಳು ಮತ್ತೆ ಹೆಮ್ಮೆಪಡುವಂತೆ ಮಾಡಿದೆ.
‘ತಂಡಕ್ಕೆ ಬೆಂಬಲ ನೀಡುವ ಇತರ ಸಿಬ್ಬಂದಿಗೆ ನೀಡುವ ಮೊತ್ತವನ್ನೇ ತನಗೂ ನೀಡುವಂತೆ ರಾಹುಲ್ ದ್ರಾವಿಡ್ ಹೇಳಿದ್ದಾರೆ. ಬೌಲಿಂಗ್ ಕೋಚ್ ಪಾರಸ್ ಮಾಂಬ್ರೆ, ಫೀಲ್ಡಿಂಗ್ ಕೋಚ್ ಟಿ. ದಿಲೀಪ್ ಹಾಗೂ ಬ್ಯಾಟಿಂಗ್ ಕೋಚ್ ವಿಕ್ರಂ ರಾಥೋಡ್ ಅವರಿಗೆ ನೀಡಿದ ₹2.5 ಕೋಟಿ ಮೊತ್ತವನ್ನೇ ತಾನೂ ಪಡೆಯುವುದಾಗಿ ರಾಹುಲ್ ಹೇಳಿದ್ದಾರೆ’ ಎಂದು ಬಿಸಿಸಿಐ ಮೂಲಗಳು ಹೇಳಿರುವುದಾಗಿ ವರದಿಯಾಗಿದೆ.
ಬಹುಮಾನ ಮೊತ್ತವನ್ನು ಮಂಡಳಿ ಹಂಚಿಕೆ ಮಾಡಿರುವ ರೀತಿಯಲ್ಲಿ, ವಿಜೇತ ತಂಡದ 15 ಆಟಗಾರರು ಹಾಗೂ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ತಲಾ ₹5 ಕೋಟಿ. ನೆರವಾಗುವ ಸಿಬ್ಬಂದಿಗೆ ತಲಾ ₹2.5 ಕೋಟಿ. ಆಯ್ಕೆಗಾರರು ಹಾಗೂ ತಂಡದೊಂದಿಗೆ ಪ್ರಯಾಣಿಸಿದ ಇತರ ಸಿಬ್ಬಂದಿಗೆ ತಲಾ ₹1 ಕೋಟಿ ಬಹುಮಾನ ನಿಗದಿಯಾಗಿತ್ತು. ಆದರೆ ಈ ಸೂತ್ರವನ್ನು ರಾಹುಲ್ ತಿರಸ್ಕರಿಸಿದ್ದಾರೆ.
ರಾಹುಲ್ ಹೀಗೆ ಬಹುಮಾನ ಮೊತ್ತವನ್ನು ನಿರ್ದಿಷ್ಟ ಕಾರಣಕ್ಕೆ ತಿರಸ್ಕರಿಸುತ್ತಿರುವುದು ಇದು ಎರಡನೇ ಬಾರಿಗೆ. 19 ವರ್ಷದೊಳಗಿನವರ ವಿಶ್ವಕಪ್ ತಂಡವು 2018ರಲ್ಲಿ ಕಪ್ ಗೆದ್ದ ಸಂದರ್ಭದಲ್ಲಿ ರಾಹುಲ್ ದ್ರಾವಿಡ್ ಅವರಿಗೆ ₹50 ಲಕ್ಷ ಬಹುಮಾನ ಘೋಷಿಸಲಾಗಿತ್ತು. ಆದರೆ ಉಳಿದ ಸಿಬ್ಬಂದಿಗೆ ₹20 ಲಕ್ಷ ನೀಡಲು ನಿರ್ಧರಿಸಲಾಗಿತ್ತು. ಆಟಗಾರರಿಗೆ ತಲಾ ₹30 ಲಕ್ಷದಂತೆ ಬಹುಮಾನ ಮೊತ್ತ ನೀಡಲು ಬಿಸಿಸಿಐ ನಿರ್ಧರಿಸಿತ್ತು. ಆ ಸಂದರ್ಭದಲ್ಲೂ ರಾಹುಲ್ ಈ ಸೂತ್ರವನ್ನು ತಿರಸ್ಕರಿಸಿದ್ದರು.
ಬಿಸಿಸಿಐ ತನ್ನ ಸೂತ್ರವನ್ನೇ ಬದಲಿಸಿ, ಪರಿಷ್ಕೃತ ಪಟ್ಟಿ ಬಿಡುಗಡೆ ಮಾಡಿತು. ತರಬೇತಿ ತಂಡದ ಪ್ರತಿಯೊಬ್ಬ ಕೋಚ್‌ಗೂ ₹25 ಲಕ್ಷ ಬಹುಮಾನ ಘೋಷಿಸಲಾಯಿತು.