ಎಸೆಸೆಲ್ಸಿ ವಿದ್ಯಾರ್ಥಿ ಗಳಿಗೆ ವಿಶೇಷ ತರಗತಿ, ಅವರ ಮನೆಗೆ ಶಿಕ್ಷಕರ ಭೇಟಿ, ಡಿಸೆಂಬರ್ ಅಂತ್ಯದೊಳಗೆ ಪಾಠ ಮುಕ್ತಾಯ ಬಳಿಕ ಸರಣಿ ಪರೀಕ್ಷೆ, ಫಲಿತಾಂಶಗಳ ವಿಶ್ಲೇಷಣೆ, ಪೋಷಕರ ಸಭೆ, ಪ್ರಗತಿ ಪರಿಶೀಲನೆ ಸಭೆ…
– ಇದು ಎಸೆಸೆಲ್ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ನಿರಾಶಾದಾಯಕ ಪ್ರದರ್ಶನದಿಂದ ಎಚ್ಚೆತ್ತುಕೊಂಡಿ ರುವ ರಾಜ್ಯದ ಶಿಕ್ಷಣ ಇಲಾಖೆಯು ಈ ವರ್ಷ ಕೈಗೊಳ್ಳಲಿರುವ ಪ್ರಮುಖ ಕಾರ್ಯಕ್ರಮಗಳು.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಎಸೆಸೆಲ್ಸಿ ಪರೀಕ್ಷೆಯ ಪ್ರತೀ ಕೊಠಡಿಯಲ್ಲಿ ವೆಬ್ ಕಾಸ್ಟಿಂಗ್ ನಡೆಸಿ ಪರೀಕ್ಷಾ ಅಕ್ರಮ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ಅರ್ಧಕ್ಕರ್ಧ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಅನುತ್ತೀರ್ಣ ಆಗುವ ಸ್ಥಿತಿ ಸೃಷ್ಟಿಯಾಗಿದ್ದನ್ನು ಗಂಭೀರವಾಗಿ ತೆಗೆದುಕೊಂಡಿರುವ ಸರಕಾರವು ಫಲಿತಾಂಶ ಮುಖೀ ಚಟುವಟಿಕೆಗೆ ಒತ್ತು ನೀಡಲು ಮುಂದಾಗಿದೆ.
ಬೆಳಗಿನ ಪ್ರಾರ್ಥನಾ ಅವಧಿಗೆ ಮುನ್ನ ಗಣಿತ, ಇಂಗ್ಲಿಷ್ ಮತ್ತು ವಿಜ್ಞಾನ ವಿಷಯಗಳಿಗೆ ವಿಶೇಷ ತರಗತಿ ತೆಗೆದುಕೊಳ್ಳಬೇಕು. ಪ್ರತ್ಯೇಕ ವೇಳಾಪಟ್ಟಿ ತಯಾರಿಸಿ ವಿಶೇಷ ತರಗತಿಗಳ ಮೂಲಕ ಎಲ್ಲ ವಿಷಯಗಳ ಪಾಠಗಳನ್ನು ಡಿಸೆಂಬರ್ ಅಂತ್ಯಕ್ಕೆ ಪೂರ್ಣಗೊಳಿಸಬೇಕು ಎಂದು ಸೂಚಿಸಿದೆ.
ಡಿಸೆಂಬರ್ ಬಳಿಕ ಶಾಲಾ ಹಂತದಲ್ಲೇ ಪರೀಕ್ಷೆಗಳನ್ನು ನಡೆಸುತ್ತ ಹೋಗಬೇಕು. ಬೆಳಗ್ಗೆ ಪರೀಕ್ಷೆ ನಡೆಸಿದರೆ, ಅಪರಾಹ್ನ ಆ ಪ್ರಶ್ನೆಪತ್ರಿಕೆಯನ್ನು ಮಕ್ಕಳ ಸಮ್ಮುಖದಲ್ಲಿ ಬಿಡಿಸಬೇಕು. ಸಂಜೆ ಗುಂಪು ಚರ್ಚೆ ನಡೆಸಿ, ಗುಂಪಿನ ನಾಯಕರ ಮೂಲಕ ಪ್ರತೀ ವಿದ್ಯಾರ್ಥಿಗೆ ಕೇಳಿಸಿ ಉತ್ತರ ಪಡೆಯಬೇಕು. ಇದೇ ಪ್ರಶ್ನೆಗಳಿಗೆ ರಸಪ್ರಶ್ನೆ ಕಾರ್ಯಕ್ರಮ ಏರ್ಪಡಿಸಬೇಕು. ಪೂರ್ವ ಸಿದ್ಧತಾ ಪರೀಕ್ಷೆಗೆ ಮುನ್ನ ಹಿಂದಿನ 3 ಅಥವಾ 4 ವರ್ಷಗಳ ಎಲ್ಲ ವಿಷಯಗಳ ವಾರ್ಷಿಕ ಪರೀಕ್ಷೆಯ ಪ್ರಶ್ನೆಪತ್ರಿಕೆಗಳನ್ನು ಬಿಡಿಸಬೇಕು ಎಂದು ಸಲಹೆ ನೀಡಲಾಗಿದೆ.
ವಿದ್ಯಾರ್ಥಿಗಳ ಮನೆಗೆ ಶಿಕ್ಷಕರು
ಶಿಕ್ಷಕರು ಆಗಾಗ್ಗೆ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ, ಹೇಗೆ ಓದಬೇಕು? ವೇಳಾಪಟ್ಟಿ ಹೇಗಿರಬೇಕು? ಇತ್ಯಾದಿ ಮಾರ್ಗದರ್ಶನ ನೀಡಬೇಕು. ಸೇತುಬಂಧ ಕಾರ್ಯಕ್ರಮದ ಅಂತ್ಯದಲ್ಲಿ ಸಾಫಲ್ಯ ಪರೀಕ್ಷೆಯ ಫಲಿತಾಂಶ ವಿಶ್ಲೇಷಿಸಿ ಕಲಿಕೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ಪರಿಹಾರ ಬೋಧನೆ ಮಾಡಬೇಕು.
ಸೇತುಬಂಧ, ಘಟಕ ಪರೀಕ್ಷೆಗಳು, ರೂಪಣಾತ್ಮಕ ಮೌಲ್ಯಮಾಪನ 1, 2, 3 ಮತ್ತು 4 ಹಾಗೂ ಸಂಕಲನಾತ್ಮಕ ಮೌಲ್ಯಮಾಪನ 1ರ ಫಲಿತಾಂಶವನ್ನು ವಿಶ್ಲೇಷಿಸಿ ವಿದ್ಯಾರ್ಥಿವಾರು ಕ್ರಿಯಾ ಯೋಜನೆ ರೂಪಿಸಬೇಕು, ವಿದ್ಯಾರ್ಥಿಗಳ ಆಸಕ್ತಿಗೆ ಅನುಗುಣವಾಗಿ ಸ್ಪರ್ಧೆಗಳನ್ನು ಏರ್ಪಡಿಸಬೇಕು, ವಿಜ್ಞಾನ, ಗಣಿತಕ್ಕೆ ಪ್ರಾಯೋಗಿಕ ಪಾಠ, ಪಠ್ಯಕ್ಕೆ ಸಂಬಂಧಿಸಿದಂತೆ ಕಿರು ಪ್ರವಾಸ, ವಿಜ್ಞಾನ ಮೇಳ, ಕಲಿಕೋಪಕರಣಗಳ ಪ್ರದರ್ಶನ, ಇಂಗ್ಲಿಷ್ ಫೆಸ್ಟ್, ಚರ್ಚಾ ಸ್ಪರ್ಧೆ ಆಯೋಜಿಸುವುದು ಮತ್ತು ಮಕ್ಕಳೇ ಶಿಕ್ಷಕರಾಗಿ ವಿಷಯ ಮಂಡನೆ ಮಾಡಲು ಅವಕಾಶ ಕಲ್ಪಿಸುವುದು ಮುಂತಾದ ಚಟುವಟಿಕೆ ನಡೆಸುವಂತೆ ಸೂಚಿಸಲಾಗಿದೆ. ಅಲ್ಲದೆ ಮುಖ್ಯ ಶಿಕ್ಷಕರು ಪ್ರತೀ ವಾರ ಶಿಕ್ಷಕರ ಸಭೆ ಕರೆದು ಮೇಲುಸ್ತುವಾರಿ ವಹಿಸಬೇಕು.
ತಾಯಂದಿರಿಗೆ ಸಲಹೆ
ತಾಯಂದಿರು ಮಕ್ಕಳಿಗೆ ಓದುವಂತೆ ಪ್ರೇರೇಪಿಸಬೇಕು. ಅಲ್ಲದೆ ಮಕ್ಕಳ ಚಲನ ವಲನದ ಮೇಲೆ ಕಣ್ಣಿಡಬೇಕು ಎಂದು ತಾಯಂದಿರ ಸಭೆ ಕರೆದು ತಿಳಿಸಲು ಹೇಳಲಾಗಿದೆ.
ಅಧಿಕಾರಿಗಳಿಗೆ ಪ್ರೌಢಶಾಲೆ ದತ್ತು
ಆಯಾ ಜಿಲ್ಲೆಯಲ್ಲಿರುವ ಎಲ್ಲ ಸರಕಾರಿ ಪ್ರೌಢಶಾಲೆಗಳನ್ನು ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಗೆ ದತ್ತು ನೀಡಬೇಕು. ಅವರು ಕನಿಷ್ಠ 15 ದಿನಕ್ಕೊಮ್ಮೆ ದತ್ತು ಪಡೆದ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳ ಕಲಿಕಾ ಪ್ರಗತಿ ಪರಿಶೀಲಿಸಬೇಕು.
“ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯು ಫಲಿತಾಂಶ ಸುಧಾರಣೆಗೆ ಕೈಗೊಳ್ಳಬೇಕಾದ ಕ್ರಮಗಳ ಸಲಹಾತ್ಮಕ ಚಟುವಟಿಕೆಯನ್ನು ನೀಡಿದ್ದು ತಮ್ಮ ಶಾಲೆಗೆ ಸರಿಹೊಂದುವ ಅಂಶಗಳನ್ನು ಆಯ್ಕೆ ಮಾಡಿಕೊಂಡು ಅಥವಾ ಇದಕ್ಕಿಂತ ಉತ್ತಮ ಚಟುವಟಿಕೆಯಿದ್ದಲ್ಲಿ ಅಳವಡಿಸಿಕೊಳ್ಳಬೇಕು.” – ವಿ. ಸುಮಂಗಲಾ, ಡಿಎಸ್‌ಇಆರ್‌ಟಿ ನಿರ್ದೇಶಕಿ
ಹೊಸ ಕ್ರಮಗಳೇನು?
- ಪ್ರಾರ್ಥನಾ ಅವಧಿಗೆ ಮುನ್ನ ಗಣಿತ, ವಿಜ್ಞಾನ, ಇಂಗ್ಲಿಷ್ ವಿಶೇಷ ತರಗತಿ
- ಡಿಸೆಂಬರ್ ಬಳಿಕ ಶಾಲಾ ಹಂತದಲ್ಲೇ ಪರೀಕ್ಷೆ, 4 ವರ್ಷದ ಪ್ರಶ್ನೆ ಪತ್ರಿಕೆ ಬಿಡಿಸಬೇಕು
- ವಿದ್ಯಾರ್ಥಿಗಳ ಮನೆಗೆ ನಿಯಮಿತವಾಗಿ ಶಿಕ್ಷಕರ ಭೇಟಿ, ಓದಿನ ಪರಿಶೀಲನೆ
- ಮುಖ್ಯ ಶಿಕ್ಷಕರು ಪ್ರತೀ ವಾರ ಶಿಕ್ಷಕರ ಸಭೆ ಕರೆದು ಮೇಲುಸ್ತುವಾರಿ ವಹಿಸಬೇಕು