ಉಜಿರೆ: “ಯುವಜನತೆ ಕ್ಷುಲ್ಲಕ ಕಾರಣಗಳಿಗಾಗಿ ಅತಿರೇಕದ ಕ್ರಮಗಳನ್ನು ಕೈಗೊಳ್ಳುವುದು ಬಹಳ ನೋವಿನ ಸಂಗತಿ.ವೈಫಲ್ಯ ಮತ್ತು ಒತ್ತಡವನ್ನು ನಿಭಾಯಿಸಲು ಕಲಿಯಿರಿ, ಇದರಿಂದ ಭವಿಷ್ಯ ರೂಪಿಸಲು ಸಾಧ್ಯ” ಎಂದು ಮಂಗಳೂರು ಉತ್ತರ ವಲಯದ ಸಹಾಯಕ ಪೊಲೀಸ್ ಆಯುಕ್ತ, ಉಜಿರೆ ಎಸ್.ಡಿ.ಎಂ. ಪದವಿಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿ ಮನೋಜ್ ಕುಮಾರ್ ನಾಯಕ್ ಹೇಳಿದರು.
ಉಜಿರೆ ಶ್ರೀ ಧ.ಮಂ. ಸ್ವಾಯತ್ತ ಕಾಲೇಜಿನಲ್ಲಿ 2024-25ನೇ ಸಾಲಿನ ವಿದ್ಯಾರ್ಥಿ ಸಂಘ, ವಿವಿಧ ವಿದ್ಯಾರ್ಥಿ ಚಟುವಟಿಕೆ ವೇದಿಕೆ ಉದ್ಘಾಟಿಸಿ ಅವರು ಮಾತನಾಡಿದರು. “ಯಶಸ್ವಿಯಾಗಲು ವಿಫಲವಾದ ಕೂಡಲೇ ಎಲ್ಲವೂ ಮುಗಿಯಿತು ಎಂದರ್ಥವಲ್ಲ. ಪ್ರಸ್ತುತ ಯುವಜನತೆ ಪರೀಕ್ಷೆಯಲ್ಲಿ ಅನುತ್ತೀರ್ಣರಾದೆವೆಂದು, ಪೋಷಕರು ಫೋನ್ ಕೊಡಿಸಲಿಲ್ಲ ಎಂಬಿತ್ಯಾದಿ ಸಣ್ಣ ಸಣ್ಣ ಕಾರಣಗಳಿಗೆ ಆತ್ಮಹತ್ಯೆಯಂತಹ ಅತಿರೇಕದ ಕ್ರಮಕ್ಕೆ ಮುಂದಾಗುವುದನ್ನು ಕಂಡಾಗ ನೋವಾಗುತ್ತದೆ. ಯಾವುದೇ ರೀತಿಯ ದುಶ್ಚಟಗಳಿಗೆ ಬಲಿಯಾಗದೆ ಕಾಲೇಜಿಗೆ, ಹುಟ್ಟಿದ ಊರಿಗೆ, ರಾಜ್ಯಕ್ಕೆ ಮತ್ತು ದೇಶಕ್ಕೆ ಒಳ್ಳೆಯ ಪ್ರಜೆಗಳಾಗಿ, ಪೋಷಕರಿಗೆ ಉತ್ತಮ ಮಕ್ಕಳಾಗಿ. ದ್ವಿಚಕ್ರ ವಾಹನ ಓಡಿಸುವಾಗ ತಪ್ಪದೆ ಹೆಲ್ಮೆಟ್ ಧರಿಸಿ” ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಎಸ್ ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಮಾತನಾಡಿ “ನಾಯಕತ್ವವೆಂಬುದು ರಾಜಕೀಯಕ್ಕೆ ಸೀಮಿತವಲ್ಲ. ಜೀವನದಲ್ಲಿ ನಾಯಕತ್ವ ಮುಖ್ಯ. ಶಿಕ್ಷಣದ ಸಂದರ್ಭದಲ್ಲಿ ನಾಯಕತ್ವ ಗುಣ ಬೆಳೆಸಿಕೊಳ್ಳಲು ವಿದ್ಯಾರ್ಥಿ ಸಂಘಗಳು ನೆರವಾಗುತ್ತವೆ” ಎಂದು ಅವರು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಿನ್ಸಿಪಾಲ್ ಡಾ.ಬಿ.ಎ.ಕುಮಾರ ಹೆಗ್ಡೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿ ಮಾತನಾಡಿ “ವಿದ್ಯಾರ್ಥಿ ಸಂಘಗಳಿಂದ ವಿದ್ಯಾರ್ಥಿಗಳು ವಿವಿಧ ರಾಜಕೀಯ ಪಕ್ಷಗಳ ಸಿದ್ಧಾಂತಗಳಿಂದ ಪ್ರೇರಿತರಾಗಿ ಪರಸ್ಪರ ಹೊಡೆದಾಟ, ವೈಷಮ್ಯದಿಂದ ಇರುವುದರ ಬರಲು ಪರಸ್ಪರ ಪ್ರೀತಿ, ವಿಶ್ವಾಸದಿಂದಿದ್ದು, ವ್ಯಕ್ತಿತ್ವ ವಿಕಸನ ಹೊಂದಬೇಕು ಎಂಬ ಉದ್ದೇಶದಿಂದ ಅಂದಿನ ಪ್ರಿನ್ಸಿಪಾಲ್ ಡಾ. ಬಿ. ಯಶೋವರ್ಮ ಅವರ ಪರಿಕಲ್ಪನೆಯಂತೆ ವಿಭಿನ್ನ ರೀತಿಯಲ್ಲಿ ನಮ್ಮ ಕಾಲೇಜಿನ ವಿದ್ಯಾರ್ಥಿ ಸಂಘ ಕಾರ್ಯನಿರ್ವಹಿಸುತ್ತಿದೆ ಎಂದರು.
ಪತ್ರಿಕೋದ್ಯಮ ವಿದ್ಯಾರ್ಥಿಗಳ ಪ್ರಾಯೋಗಿಕ ಪತ್ರಿಕೆ ‘ಚಿಗುರು’ ಬಿಡುಗಡೆಗೊಂಡಿತು. ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಶ್ರೇಯಸ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿಜ್ಞಾನ ಸಂಘದ ಅಧ್ಯಕ್ಷ, ತೃತೀಯ ಬಿಸಿಎ ವಿದ್ಯಾರ್ಥಿ ಸುದೇಶ್ ಸ್ವಾಗತಿಸಿದರು. ವೈದೇಹಿ ಮತ್ತು ತಂಡದವರು ಪ್ರಾರ್ಥಿಸಿದರು. ಧರಿತ್ರಿ ಭಿಡೆ ಅತಿಥಿ ಪರಿಚಯ ನೀಡಿದರು. ವೀಕ್ಷಾ ವಂದಿಸಿದರು. ಮಾನಸ ಅಗ್ನಿಹೋತ್ರಿ ಮತ್ತು ರುಚಿರಾ ನಿರೂಪಿಸಿದರು.