ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸತತವಾಗಿ 7ನೇ ಬಾರಿ ಬಜೆಟ್ ಮಂಡನೆ ಮಾಡಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರ ಮೂರನೇ ಬಾರಿ ಅಧಿಕಾರಕ್ಕೆ ಬಂದ ಮೇಲೆ ಇದು ಮೊದಲನೇ ಬಜೆಟ್ ಆಗಿದ್ದು, ಇಂದಿನ ಬಜೆಟ್‍ನಲ್ಲಿ ಯಾವುದರ ಬೆಲೆ ಕಡಿಮೆಯಾಗಿದೆ? ಯಾವುದರ ಬೆಲೆ ಏರಿಕೆ ಆಗಿದೆ ಎಂಬ ಮಾಹಿತಿ ಇಲ್ಲಿದೆ.
ಯಾವೆಲ್ಲ ವಸ್ತುಗಳ ಬೆಲೆ ಅಗ್ಗ?
ಇಂದಿನ ಬಜೆಟ್‍ನಲ್ಲಿ ಚಿನ್ನ ಮತ್ತು ಬೆಳ್ಳಿಯ ಮೇಲಿನ ಕಸ್ಟಮ್ ಸುಂಕವನ್ನು 6%ಗೆ ಇಳಿಸಲಾಗಿದೆ. ಇದರಿಂದ ಚಿನ್ನ ಅಗ್ಗವಾಗಲಿದೆ. ಅಲ್ಲದೇ ಪ್ಲಾಟಿನಂ ಮೇಲಿನ ಕಸ್ಟಮ್ ಸುಂಕವನ್ನು 6.4%ಕ್ಕೆ ಇಳಿಸುವ ವಿಚಾರ ಪ್ರಸ್ತಾಪಿಸಿದ್ದಾರೆ. ಕೇಂದ್ರದಿಂದ ಈ ನಿರ್ಧಾರ ಜಾರಿಯಾದ ನಂತರ ಚಿನ್ನ, ಬೆಳ್ಳಿ, ಪ್ಲಾಟಿನಂ ಬೆಲೆಯಲ್ಲಿ ಇಳಿಕೆಯಾಗಲಿದೆ.
ಮೊಬೈಲ್ ಫೋನ್-ಚಾರ್ಜರ್ ಅಗ್ಗ: ಮೊಬೈಲ್ ಫೋನ್ ಮತ್ತು ಚಾರ್ಜರ್‌ಗಳ ಮೇಲಿನ ಮೂಲ ಕಸ್ಟಮ್ ಸುಂಕವನ್ನು 15%ರಷ್ಟು ಕಡಿಮೆ ಮಾಡಲಾಗುತ್ತದೆ. ಈ ಕಾರಣದಿಂದಾಗಿ, ಈಗ ಮೊಬೈಲ್ ಫೋನ್‍ಗಳ ಬೆಲೆಯಲ್ಲಿ ಇಳಿಕೆಯಾಗಲಿದೆ.
ಅಗ್ಗದ ಲಿಥಿಯಂ ಬ್ಯಾಟರಿಗಳಿಂದಾಗಿ ಇವಿಗಳಿಗೆ ಉತ್ತೇಜನ ಸಿಗಲಿದೆ. ಅಲ್ಲದೇ ಸೌರ ಫಲಕಗಳು ಮತ್ತು ಲಿಥಿಯಂ ಬ್ಯಾಟರಿಗಳ ದರ ಇಳಿಯಲಿದೆ.
ಇ-ಕಾಮರ್ಸ್ ಕಂಪನಿಗಳಿಗೆ ಮೂಲದಲ್ಲಿ ತೆರಿಗೆ ಕಡಿತಗೊಳಿಸಲಾಗಿದೆ ಅಂದರೆ ಟಿಡಿಎಸ್ ದರವನ್ನು 1% ರಿಂದ 0.1%ಕ್ಕೆ ಇಳಿಸಲಾಗಿದೆ.
ಕ್ಯಾನ್ಸರ್ ಔಷಧಿ ಬೆಲೆ ಇಳಿಕೆ
ಕ್ಯಾನ್ಸರ್ ಚಿಕಿತ್ಸೆಗಾಗಿ ಬಳಸಲ್ಪಡುವ ಮೂರು ಔಷಧಿಗಳಿಗೆ ಮೂಲ ಕಸ್ಟಮ್ಸ್ ಸುಂಕದಿಂದ ವಿನಾಯಿತಿ ನೀಡಲಾಗುವುದು ಎಂದು ಹಣಕಾಸು ಸಚಿವರು ಘೋಷಿಸಿದ್ದಾರೆ. ಎಕ್ಸ್-ರೇ ಟ್ಯೂಬ್‍ಗಳು ಮತ್ತು ಎಕ್ಸ್-ರೇ ಯಂತ್ರಗಳಲ್ಲಿ ಬಳಸುವ ಫ್ಲಾಟ್ ಪ್ಯಾನೆಲ್ ಡಿಟೆಕ್ಟರ್‍ಗಳ ಮೇಲಿನ ಮೂಲ ಕಸ್ಟಮ್ ಸುಂಕದಲ್ಲಿ ಬದಲಾವಣೆ ಮಾಡಲಾಗಿದೆ. ಘೋಷಣೆ ಜಾರಿಯಾದ ನಂತರ ಅವುಗಳ ಬೆಲೆಯೂ ಕಡಿಮೆಯಾಗಲಿದೆ. ಇದಲ್ಲದೆ, ಫೆರೋನಿಕಲ್ ಮತ್ತು ಬ್ಲಿಸ್ಟರ್ ತಾಮ್ರದ ಮೇಲಿನ ಮೂಲ ಕಸ್ಟಮ್ ಸುಂಕವನ್ನು ಸರ್ಕಾರ ತೆಗೆದುಹಾಕಿದೆ.
ಯಾವ ವಸ್ತುಗಳು ದುಬಾರಿ?
ಅಮೋನಿಯಂ ನೈಟ್ರೇಟ್ ಮೇಲಿನ ಕಸ್ಟಮ್ ಸುಂಕವನ್ನು 10% ರಿಂದ 25%ಕ್ಕೆ ಹೆಚ್ಚಿಸುವುದಾಗಿ ಹಣಕಾಸು ಸಚಿವರು ಘೋಷಿಸಿದ್ದಾರೆ. ಜೊತೆಗೆ ವಿದೇಶದಿಂದ ಆಮದು ಮಾಡುವ ಟೆಲಿಕಾಂ ಉಪಕರಣಗಳ ಮೇಲಿನ ಮೂಲ ಕಸ್ಟಮ್ ಸುಂಕವನ್ನು 10% ನಿಂದ 15% ಪ್ರತಿಶತಕ್ಕೆ ಹೆಚ್ಚಿಸಲಾಗಿದೆ. ಆಮದು ಮಾಡಿಕೊಳ್ಳುವ ಬಟ್ಟೆಯ ದರ ಸಹ ಏರಿಕೆಯಾಗಲಿದೆ.