ತುಂಬಿದ ನೇತ್ರಾವತಿ ನದಿಯಲ್ಲಿ ತೇಲಿ ಬರುತ್ತಿದ್ದ ದನವೊಂದನ್ನು ಉಪ್ಪಿನಂಗಡಿಯಲ್ಲಿರುವ ಗೃಹರಕ್ಷಕದಳದವರನ್ನೊಳಗೊಂಡ ಪ್ರವಾಹ ರಕ್ಷಣಾ ತಂಡ ದೋಣಿಯ ಮೂಲಕ ನದಿ ಮಧ್ಯಕ್ಕೆ ಹೋಗಿ ರಕ್ಷಣೆ ಮಾಡಿ ದಡಕ್ಕೆ ಕರೆದುಕೊಂಡು ಬಂದ ಘಟನೆ ಉಪ್ಪಿನಂಗಡಿಯಲ್ಲಿ ಶುಕ್ರವಾರ ನಡೆದಿದೆ.
ನದಿಯ ಮಧ್ಯದಲ್ಲಿ ದನವೊಂದು ತೇಲಿಕೊಂಡು ಹೋಗುತ್ತಿರುವುದನ್ನು ನೋಡಿದ ಹಳೆಗೇಟು ಬಳಿಯ ದಡ್ಡು ಎಂಬಲ್ಲಿರುವ ಟಯರ್ ಅಂಗಡಿಯ ಮಾಲಕ ಚಂದಪ್ಪ ಅವರು ಕೂಡಲೇ ಪ್ರವಾಹ ರಕ್ಷಣಾ ತಂಡಕ್ಕೆ ಮಾಹಿತಿ ನೀಡಿದರು.
ತಕ್ಷಣವೇ ಕಾರ್ಯಪ್ರವೃತವಾದ ಈ ತಂಡ ತಮ್ಮಲ್ಲಿರುವ ರಬ್ಬರ್ ದೋಣಿಯ ಮೂಲಕ ತೆರಳಿ ದನದ ಮೂಗುದಾರಕ್ಕೆ ಹಗ್ಗವನ್ನು ಕಟ್ಟಿ ದಡಕ್ಕೆ ತಂದು ಕಟ್ಟಿ ಹಾಕಿದರು.
ಗೃಹ ರಕ್ಷಕದಳದ ಪ್ರಭಾರ ಘಟಕಾಧಿಕಾರಿ ದಿನೇಶ್ ಬಿ. ಅವರ ನೇತೃತ್ವದ ಈ ರಕ್ಷಣಾ ಕಾರ್ಯಾಚರಣೆ ತಂಡದಲ್ಲಿ ಎ.ಎಸ್.ಎಲ್. ಜನಾರ್ದನ, ಚರಣ್, ಸುದರ್ಶನ್, ಹಾರೀಸ್, ಸಮದ್ ಇದ್ದರು.