ನೆಲ್ಯಾಡಿ: ಪರಸ್ಪರ ಹಲ್ಲೆ ಆರೋಪ ಹೊರಿಸಿ ಇತ್ತಂಡದವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿರುವ ಘಟನೆ ಕೌಕ್ರಾಡಿ ಗ್ರಾಮದ ಆಲಂಪಾಡಿ ಎಂಬಲ್ಲಿ ಜು.29ರಂದು ನಡೆದಿದೆ.
ಸಕಲೇಶಪುರ ತಾಲೂಕಿನ ಅಚಂಗಿ ನಿವಾಸಿ ಅಬ್ದುಲ್ ನಾಸೀರ್(33ವ.)ಎಂಬವರು ಪೊಲೀಸರಿಗೆ ದೂರು ನೀಡಿ ಜು.29ರಂದು ಬೆಳಿಗ್ಗೆ 10 ಗಂಟೆಗೆ ಕಡಬ ತಾಲೂಕು ಕೌಕ್ರಾಡಿ ಗ್ರಾಮದ ಆಲಂಪಾಡಿ ಎಂಬಲ್ಲಿದ್ದಾಗ ಕಾರಿನಲ್ಲಿ ಬಂದ ಹಂಝ, ನಪ್ಸೀರ್ ಮತ್ತು ಅಯಾನ್ ಎಂಬವರು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಹಲ್ಲೆಯಿಂದ ಗಾಯಗೊಂಡ ಅಬ್ದುಲ್ ನಾಸೀರ್ ಅವರು ಮಂಗಳೂರು ವೆನ್ಲಾನ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದೇ ಪ್ರಕರಣಕ್ಕೆ ಸಂಬಂಧಿಸಿ ಕೌಕ್ರಾಡಿ ಗ್ರಾಮದ ಆಲಂಪಾಡಿ ನಿವಾಸಿ ನಸೀಮಾ ಎಂಬವರು ಪೊಲೀಸರಿಗೆ ಪ್ರತಿ ದೂರು ನೀಡಿದ್ದು, ಜು.29ರಂದು ಮಧ್ಯಾಹ್ನ 1 ಗಂಟೆಗೆ ಗಂಡನ ಜೊತೆಯಲ್ಲಿ ನೆಲ್ಯಾಡಿಯಿಂದ ಮನೆ ಕಡೆಗೆ ಕಾರಿನಲ್ಲಿ ಹೋಗುತ್ತಿದ್ದು ಆಲಂಪಾಡಿ ಎಂಬಲ್ಲಿಗೆ ತಲುಪುತ್ತಿದ್ದಂತೆ ಆರೋಪಿ ಅಬ್ದುಲ್ ನಾಸೀರ್ ಏಕಾಏಕಿ ಕಾರು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿ ಕಾರಿನ ಡೋರ್‌ನ ಬಳಿ ಬಂದು ಅನುಚಿತವಾಗಿ ವರ್ತಿಸಿ ಸ್ಕ್ರೂ ಡ್ರೈವರ್ ನಿಂದ ಹಲ್ಲೆ ನಡೆಸಲು ಪ್ರಯತ್ನಿಸಿರುತ್ತಾನೆ. ಈ ವೇಳೆ ಕಾರಿನಿಂದ ಇಳಿದ ಗಂಡನನ್ನು ದೂಡಿಹಾಕಿ ಸ್ಕ್ರೂ ಡ್ರೈವರ್ ನಿಂದ ಹಲ್ಲೆ ನಡೆಸಲು ಮುಂದಾಗಿರುತ್ತಾನೆ ಎಂದು ಆರೋಪಿಸಿದ್ದಾರೆ.
ಉಪ್ಪಿನಂಗಡಿ ಪೊಲೀಸರು ಎರಡೂ ಕಡೆಯವರ ದೂರು ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ.