ಕೊಕ್ಕಡ ಗ್ರಾಮ ಪಂಚಾಯಿತಿನ ವತಿಯಿಂದ ಸೈಬರ್ ಕ್ರೈಂ ತಡೆಗಟ್ಟುವ ಬಗ್ಗೆ ಜು.31ರಂದು ಅಂಬೇಡ್ಕರ್ ಭವನದಲ್ಲಿ ಗ್ರಾ.ಪಂ ಅಧ್ಯಕ್ಷೆ ಬೇಬಿಯವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಇತ್ತೀಚಿನ ದಿನಗಳಲ್ಲಿ ಗ್ರಾಹಕರ ಖಾತೆಯನ್ನು ಹ್ಯಾಕ್ ಮಾಡಿ ಹಣ ಕದಿಯುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದನ್ನು ಮನಗಂಡು ಗ್ರಾಹಕರ ಅನುಕೂಲಕ್ಕಾಗಿ ಕೊಕ್ಕಡ ಗ್ರಾಮ ಪಂಚಾಯಿತಿ ವತಿಯಿಂದ ಬ್ಯಾಂಕ್ ಹ್ಯಾಕರ್ ಗಳು ಹ್ಯಾಕ್ ಮಾಡಿ ಹಣ ಎಗರಿಸುವುದನ್ನು ತಡೆಯುವ ಸಲುವಾಗಿ ಬ್ಯಾಂಕ್‌ನ ಪ್ರತಿನಿಧಿಗಳೊಂದಿಗೆ ಸಭೆಯಲ್ಲಿ ನಡೆಸಿ ಚರ್ಚಿಸಲಾಯಿತು. ಬ್ಯಾಂಕ್ ನ ಗ್ರಾಹಕರಿಗೆ ಈ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕೆನರಾ ಬ್ಯಾಂಕ್ ಹಾಗೂ ಗ್ರಾ.ಪಂ. ಕರಪತ್ರ ಮುದ್ರಿಸಿ ಹಂಚುವುದಾಗಿ ಸಭೆಯಲ್ಲಿ ತಿಳಿಸಲಾಯಿತು.
ಇನ್ನು ಮುಂದೆ ಯಾರಾದರೂ ಗ್ರಾಹಕರು ಹಣ ಕಳೆದುಕೊಂಡ ತಕ್ಷಣ ಸಂಬಂಧಪಟ್ಟ ಬ್ಯಾಂಕ್, ಬೀಟ್ ಪೊಲೀಸರಿಗೆ ಮಾಹಿತಿ ನೀಡುವುದು ಹಾಗೂ ಗ್ರಾಮ ಪಂಚಾಯಿತಿಗೆ ತಿಳಿಸುವಂತೆ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ಕೊಕ್ಕಡ ಕೆನರಾ ಬ್ಯಾಂಕ್ ಪ್ರಬಂಧಕರು, ಕೊಕ್ಕಡ ವೆಂಕಟ್ರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಪ್ರಬಂಧಕರು, ಕೊಕ್ಕಡ ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಪ್ರಬಂಧಕರು, ಕೊಕ್ಕಡ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಪ್ರಬಂಧಕರು, ಧರ್ಮಸ್ಥಳ ಠಾಣೆಯ ಪೊಲೀಸ್ ಹಾಗೂ ಪಂಚಾಯಿತಿ ಉಪಾಧ್ಯಕ್ಷ ಪ್ರಭಾಕರ್ ಗೌಡ, ಸದಸ್ಯರು ಉಪಸ್ಥಿತರಿದ್ದರು.
ನಿಕಟಪೂರ್ವಾಧ್ಯಕ್ಷ ಯೋಗೀಶ್ ಆಲಂಬಿಲ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದೀಪಕ್ ರಾಜ್ ವಂದಿಸಿದರು.