ರೆಖ್ಯ: ವಿಪರೀತ ಮಳೆಯಿಂದಾಗಿ ಬೆಳ್ತಂಗಡಿ ತಾಲೂಕಿನ ರೆಖ್ಯ ಗ್ರಾಮದ ಕೊಲಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಹಿಂಬದಿಯ ಗುಡ್ಡ ಹಾಗೂ ತಡೆಗೋಡೆ ಜರಿದು ದೇವಸ್ಥಾನ ಗರ್ಭಗುಡಿ ಹಾಗೂ ಸುತ್ತು ಪೌಳಿಗೆ ಹಾನಿಯಾದ ಘಟನೆ ಜು.31ರಂದು ರಾತ್ರಿ ನಡೆದಿದೆ.
3 ವರ್ಷದ ಹಿಂದೆ ಬ್ರಹ್ಮಕಲಶೋತ್ಸವ ವಿಜೃಂಭಣೆಯಿಂದ ಜರುಗಿತು. ಗುಡ್ಡ ಜರಿದ ಪರಿಣಾಮ ಗುಡ್ಡದ ಮೇಲಿದ್ದ ರಬ್ಬರ್ ಮರಗಳು ಮಣ್ಣಿನೊಂದಿಗೆ ಬಿದ್ದಿವೆ. ಕಳೆದ ವರುಷ ಕೂಡ ಇದೇ ರೀತಿ ಮಣ್ಣು ಕುಸಿದಿದ್ದು ಬೆಳ್ತಂಗಡಿ ತಾಲೂಕಿನ ಶಾಸಕ ಹರೀಶ್ ಪೂಂಜ ಅವರ 1ಕೋಟಿ ರೂ ಅನುದಾನದಲ್ಲಿ ತಡೆಗೋಡೆಯನ್ನು ನಿರ್ಮಿಸಲಾಗಿತ್ತು. ಇದೀಗ ಗುಡ್ಡೆ ಜಾರಿತದಿಂದಾಗಿ ತಡೆಗೋಡೆಯ ಒಂದು ಪಾರ್ಶ್ವವು ಜರಿದು ಬಿದ್ದಿದೆ.
ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಅರಸಿನಮಕ್ಕಿ ಗ್ರಾ.ಪಂ.ಮಾಜಿ ಅಧ್ಯಕ್ಷ ನವೀನ್. ಕೆ., ಭೇಟಿ ನೀಡಿ ಪರಿಶೀಲಿಸಿ ತಹಶೀಲ್ದಾರ್ ಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.