ರಜೆ ಸರಿದೂಗಿಸಲು ವಿಶೇಷ ತರಗತಿ ಆಯೋಜನೆ? ರವಿವಾರವೂ ತರಗತಿ?

ಶೇರ್ ಮಾಡಿ

ಕರಾವಳಿಯಾದ್ಯಂತ ಮುಂಗಾರು ಅಬ್ಬರಿಸಿದ ಪರಿಣಾಮ ಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳ ರಜೆ ವಿಸ್ತರಣೆಯಾಗುತ್ತಲೇ ಇದ್ದು, ಆಗಿರುವ ತರಗತಿ ನಷ್ಟವನ್ನು ಸರಿದೂ ಗಿಸಲು ಎರಡೂ ಜಿಲ್ಲೆಯಲ್ಲಿ ಕೆಲವೇ ದಿನಗಳಲ್ಲಿ ವಿಶೇಷ ತರಗತಿ ಆರಂಭವಾಗುವ ನಿರೀಕ್ಷೆ ಇದೆ.

ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡ ಜಿಲ್ಲೆಯ ಶಾಲೆಗಳಿಗೆ ಒಂದು ತಿಂಗಳಿನಲ್ಲಿ ಬೇರೆ ಬೇರೆ ತಾಲೂಕುವಾರು ಸೇರಿ 15ಕ್ಕೂ ಅಧಿಕ ರಜೆ ನೀಡಲಾಗಿದೆ. ಆ ದಿನಗಳ ಕಡಿತವಾಗುವ ಪಾಠವನ್ನು ಮುಗಿಸುವುದು ಹೇಗೆ ಎಂಬುದೇ ಈಗಿನ ಚಿಂತೆ.

ಪಿಯು ಮಕ್ಕಳಿಗೆ ಮೊದಲ ಪರೀಕ್ಷೆಗೆ ಈಗ ಸಿದ್ಧತೆ ಮಾಡಬೇಕಿತ್ತು.ಆದರೆ ರಜೆ ಕಾರಣದಿಂದ ಪಾಠ ಆಗದೆ ಪರೀಕ್ಷೆ ಕಷ್ಟ ಎನ್ನುತ್ತಾರೆ ಪಿಯು ಶಿಕ್ಷಕರು. ಆ.12ಕ್ಕೆ ನಡೆಯಬೇಕಿದ್ದ ಮೊದಲ ಪರೀಕ್ಷೆಯನ್ನು ದ.ಕ.ಜಿಲ್ಲೆಯಲ್ಲಿ ಆ.21ಕ್ಕೆ ಮುಂದೂಡಲಾಗಿದೆ.

ರಜೆ ಕಾರಣದಿಂದ ಬಹುತೇಕ ಬಾಕಿಯಾಗಿದ್ದು, ಇದನ್ನು ಸರಿಹೊಂದಿಸುವ ಸವಾಲಿದೆ. ಶನಿವಾರ ಪೂರ್ಣ ದಿನ, ರವಿವಾರ ಪಾಠ ಮಾಡುವ ಸಾಧ್ಯತೆಯೂ ಇದೆ ಎಂದಿದ್ದಾರೆ.

ಮಳೆ ಕಾರಣದಿಂದ ತರಗತಿ ನಷ್ಟ ಆಗಿರುವುದನ್ನು ಸರಿದೂಗಿಸಲು ದ.ಕ., ಉಡುಪಿಯಲ್ಲಿ ಶಿಕ್ಷಣ ಇಲಾಖೆಗಳು ವಿವಿಧ ಆಯಾಮದ ಚಿಂತನೆ ನಡೆಸಿವೆ. ಎರಡೂ ಜಿಲ್ಲೆಯಲ್ಲಿ ಪಿಯು ತರಗತಿ ನಷ್ಟವನ್ನು ಸರಿಹೊಂದಿಸಲು ಶನಿವಾರ ಪೂರ್ಣ ದಿನ ಹಾಗೂ ರವಿವಾರವೂ ತರಗತಿ ನಡೆಸುವ ಬಗ್ಗೆ ಸದ್ಯ ಮಾತುಕತೆ ನಡೆಸುತ್ತಿದ್ದಾರೆ. ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಉಡುಪಿಯಲ್ಲಿ ರವಿವಾರ ತರಗತಿ ಬಗ್ಗೆ ಮಾತುಕತೆ ನಡೆಯುತ್ತಿದ್ದರೆ, ದಕ್ಷಿಣ ಕನ್ನಡದಲ್ಲಿ ರವಿವಾರ ತರಗತಿಗೆ ಒಲವು ಇದ್ದಂತಿಲ್ಲ! ಈ ನಡುವೆ ಕೆಲವು ಖಾಸಗಿ ಮತ್ತು ಅನುದಾನಿತ ಶಾಲೆಗಳು ಈಗಾಗಲೇ ವಿಶೇಷ ತರಗತಿ ಆರಂಭಿಸಿವೆ.

ಮಳೆ ಕಾರಣದಿಂದ ರಜೆಯಾಗಿ ಈಗ ಪಾಠ ಸರಿದೂಗಿಸುವ ಸವಾಲು ನಮಗಿದೆ. ಆದರೆ ರವಿವಾರ ತರಗತಿ ಮಾಡುವುದು ಮಕ್ಕಳು ಹಾಗೂ ಶಿಕ್ಷಕರಿಗೂ ಹಿತವಲ್ಲ. ಅದರ ಬದಲು ದಿನದಲ್ಲಿ ಹೆಚ್ಚುವರಿ ತರಗತಿ ಮಾಡುವ ಬಗ್ಗೆ ಯೋಚಿಸುವುದು ಉತ್ತಮ ಎನ್ನುವುದು ಶಿಕ್ಷಕರೊಬ್ಬರ ಅಭಿಪ್ರಾಯ.

ಕೆಲವು ಖಾಸಗಿ ಶಾಲೆಗಳು ಕೊರೊನಾ ಕಾಲದಲ್ಲಿ ಇದ್ದಂತೆ ಈಗಾಗಲೇ ಆನ್‌ಲೈನ್‌ ತರಗತಿ ಆರಂಭಿಸಿವೆ. ಆದರೆ ಕೆಲವು ಪೋಷಕರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಸರಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಆನ್‌ಲೈನ್‌ ತರಗತಿ ಸದ್ಯಕ್ಕಿಲ್ಲ.

Leave a Reply

error: Content is protected !!