ನೆಲ್ಯಾಡಿ: ಕೌಕ್ರಾಡಿ ಗ್ರಾಮಸಭೆ ಗ್ರಾ.ಪಂ.ಅಧ್ಯಕ್ಷ ಲೋಕೇಶ್ ಬಾಣಜಾಲು ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ.ಸಭಾಂಗಣದಲ್ಲಿ ಜು.30ರಂದು ನಡೆಯಿತು.
ಜಿ.ಪಂ.ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಸಹಾಯಕ ಇಂಜಿನಿಯರ್ ಕುಶಕುಮಾರ್ ಮಾರ್ಗದರ್ಶಿ ಅಧಿಕಾರಿಯಾಗಿದ್ದರು. ಸಭೆಯಲ್ಲಿ ಕೊಕ್ಕಡ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಂತ, ಕಣ್ಣಿನ ವೈದ್ಯರಿದ್ದು ಅವರನ್ನು ವಾರದಲ್ಲಿ ಮೂರು ದಿನ ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನಿಯೋಜನೆ ಮಾಡುವಂತೆ ಕೌಕ್ರಾಡಿ ಗ್ರಾ.ಪಂ.ಗ್ರಾಮಸಭೆಯಲ್ಲಿ ಗ್ರಾಮಸ್ಥರು ಒತ್ತಾಯಿಸಿದ್ದು ಈ ಬಗ್ಗೆ ಸಂಬಂಧಪಟ್ಟವರಿಗೆ ಬರೆಯಲು ನಿರ್ಣಯ ಕೈಗೊಳ್ಳಲಾಯಿತು. ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಿ ಎಲ್ಲಾ ಸೌಲಭ್ಯ ನೀಡುವಂತೆಯೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಗ್ರಾಮಸ್ಥರಾದ ರಫೀಕ್, ಇಸ್ಮಾಯಿಲ್ ಮತ್ತಿತರರು, ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಮರ್ಪಕ ವ್ಯವಸ್ಥೆ ಇಲ್ಲ. ಇದರಿಂದ ಬಡ ರೋಗಿಗಳಿಗೆ ತೊಂದರೆಯಾಗಿದೆ. ಆದ್ದರಿಂದ ವಾರದಲ್ಲಿ ಕನಿಷ್ಠ ಮೂರು ದಿನವಾದರೂ ತಜ್ಞ ವೈದ್ಯರು ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿರಬೇಕೆಂದು ಆಗ್ರಹಿಸಿದರು. ಆರೋಗ್ಯ ಕೇಂದ್ರ, ಪಶುಆಸ್ಪತ್ರೆ ಕೌಕ್ರಾಡಿ ಗ್ರಾಮದಲ್ಲಿದ್ದರೂ ಅದರ ಹೆಸರು ಮಾತ್ರ ನೆಲ್ಯಾಡಿ ಎಂದಿದೆ. ಇದನ್ನು ಕೌಕ್ರಾಡಿ-ನೆಲ್ಯಾಡಿ ಎಂದು ನಾಮಕರಣ ಮಾಡಬೇಕೆಂಬ ಒತ್ತಾಯವೂ ಸಭೆಯಲ್ಲಿ ಕೇಳಿಬಂತು.
ದ.ಕ.ಕ್ಕೆ ಮೆಡಿಕಲ್ ಕಾಲೇಜು ಕೊಡಿ:
ದ.ಕ.ಜಿಲ್ಲೆಯಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಆರಂಭಿಸಬೇಕೆಂದು ಗ್ರಾಮಸ್ಥರಾದ ಹನೀಫ್ ಕೆ.,ಸಿದ್ದೀಕ್ ಮತ್ತಿತರರು ಆಗ್ರಹಿಸಿದರು. ಇಚ್ಲಂಪಾಡಿಯಲ್ಲಿ ಹೈಸ್ಕೂಲ್ ಆಗಬೇಕೆಂದು ಜಾರ್ಜ್‍ಕುಟ್ಟಿ ಉಪದೇಶಿಸಿ ಆಗ್ರಹಿಸಿದರು. ಈ ಬಗ್ಗೆ ಸರಕಾರಕ್ಕೆ ಬರೆಯಲು ನಿರ್ಣಯಿಸಲಾಯಿತು.
ಜೆಜೆಎಂ ಅಪೂರ್ಣ:
ಜೆಜೆಎಂ ಕಾಮಗಾರಿ ಅಪೂರ್ಣವಾಗಿದ್ದು ನೀರು ಸರಿಯಾಗಿ ಬರುತ್ತಿಲ್ಲ. ಇದರಿಂದ ಸಮಸ್ಯೆಯಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಇಂಜಿನಿಯರ್ ಎಸ್.ಎಸ್.ಹುಕ್ಕೇರಿ ಅವರು, ಮಳೆನಿಂತ ಮೇಲೆ ಸರಿಮಾಡಿಕೊಡಲಾಗುವುದು ಎಂದು ಹೇಳಿದರು. ಇಚ್ಲಂಪಾಡಿಯಲ್ಲಿ ಟ್ಯಾಂಕ್ ಆಗಿದೆ. ಆದರೆ ಬೋರ್ ವೆಲ್, ಟಿ.ಸಿ.ಮಾಡಿಲ್ಲ. ಇಲ್ಲಿ ಬೋರ್ ವೆಲ್, ಟಿಸಿ ಮಾಡಿಕೊಡಬೇಕು. ಇಲ್ಲವಾದಲ್ಲಿ ಟ್ಯಾಂಕ್ ತೆರವುಗೊಳಿಸಿ ಎಂದು ವರ್ಗೀಸ್ ಅಬ್ರಹಾಂ ಒತ್ತಾಯಿಸಿದರು. ಈ ಬಗ್ಗೆ ಮಾತನಾಡಿದ ಅಧ್ಯಕ್ಷ ಲೋಕೇಶ್ ಬಾಣಜಾಲು ಅವರು ಜೆಜೆಎಂನ ಕಾಮಗಾರಿ ಸಂಪೂರ್ಣ ಆಗದೇ ಗ್ರಾಮ ಪಂಚಾಯತ್‍ಗೆ ಹ್ಯಾಂಡ್ ಒವರ್ ತೆಗೆದುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಕೌಕ್ರಾಡಿ ಗ್ರಾಮ ಪಂಚಾಯತ್‍ಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮಂಜೂರಾಗಿದೆ ಎಂದು ಎಸ್.ಎಸ್.ಹುಕ್ಕೇರಿ ತಿಳಿಸಿದರು.
ನೆಲ್ಯಾಡಿಯಲ್ಲಿ ಫ್ಲೈಓವರ್ ಮಾಡಿ:
ಚತುಷ್ಪಥ ಹೆದ್ದಾರಿ ಕಾಮಗಾರಿ ಕೆಲಸ ನಡೆಯುತ್ತಿದ್ದು ನೆಲ್ಯಾಡಿಯಲ್ಲಿ ಪಿಲ್ಲರ್ ಹಾಕಿ ಫ್ಲೈಓವರ್ ಮಾಡಬೇಕೆಂದು ವರ್ಗೀಸ್ ಅಬ್ರಹಾಂ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಲೋಕೇಶ್ ಬಾಣಜಾಲು ಅವರು, ಈ ವಿಚಾರಕ್ಕೆ ಸಂಬಂಧಿಸಿ ಹೋರಾಟ ಸಮಿತಿಯ ನಿಯೋಗ ಸಂಸದರ ಭೇಟಿ ಮಾಡಿ ಮಾತುಕತೆ ನಡೆಸಿದೆ. ಈ ವೇಳೆ ಹೆದ್ದಾರಿ ಇಲಾಖೆಯವರೂ ಇದ್ದರು. ನೆಲ್ಯಾಡಿಯಲ್ಲಿ ಫ್ಲೈಓವರ್ ಸಾಧ್ಯವಿಲ್ಲ ಎಂದಿದ್ದಾರೆ. ಅಲ್ಲದೇ ಫ್ಲೈಓವರ್ ವಿಚಾರದಲ್ಲಿ ನೆಲ್ಯಾಡಿಯಲ್ಲೂ ಬೇಕು, ಬೇಡ ಎಂಬ ಎರಡು ಗುಂಪು ಇದೆ. ಆದರೂ ಜನರಿಗೆ ತೊಂದರೆಯಾಗದಂತೆ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಸಂಸದರು ಭರವಸೆ ನೀಡಿದ್ದಾರೆ ಎಂದರು. ನೆಲ್ಯಾಡಿ ಪೇಟೆಯಲ್ಲಿ 55 ಮೀ. ಅಗಲಕ್ಕೆ ಜಾಗ ಕೊಡಬೇಕಿತ್ತು. ಆದರೆ 45 ಮೀ.ಮಾತ್ರ ಬಿಟ್ಟು ಕೊಡಲಾಗಿದೆ. ಇದರಿಂದಲೂ ಸಮಸ್ಯೆಯಾಗಿದೆ ಎಂದರು. ಬಳಿಕ ಮಾತನಾಡಿದ ಸದಸ್ಯ ಹನೀಫ್ ಅವರು, ನೆಲ್ಯಾಡಿ ಪೇಟೆಯಲ್ಲಿ ಜನರಿಗೆ ಬೇಕಾದ ರೀತಿಯಲ್ಲಿ ರಸ್ತೆ ಆಗಬೇಕು. ಜನರಿಗೆ ಸರಿಯಾದ ಮಾಹಿತಿಯೂ ಕೊಡದೇ, ಅವೈಜ್ಞಾನಿಕವಾಗಿ ಕಾಮಗಾರಿ ನಡೆದಿದೆ ಎಂದು ಹೇಳಿದರು. ಈ ಬಗ್ಗೆ ಚರ್ಚೆ ನಡೆದು ನೆಲ್ಯಾಡಿಯಲ್ಲಿ ಪಿಲ್ಲರ್ ಹಾಕಿ ಫ್ಲೈಓವರ್ ಮಾಡುವಂತೆ ಇಲಾಖೆಗೆ ಮನವಿ ಮಾಡಲು ನಿರ್ಣಯ ಕೈಗೊಳ್ಳಲಾಯಿತು.
ಖಾಯಂ ಅಧಿಕಾರಿಗಳ ನೇಮಿಸಿ:
ಕೌಕ್ರಾಡಿ ಗ್ರಾ.ಪಂ.ಗೆ ಖಾಯಂ ಗ್ರಾಮ ಆಡಳಿತಾಧಿಕಾರಿ ಹಾಗೂ ಪಿಡಿಒ ನೇಮಕ ಮಾಡಬೇಕೆಂದು ಗ್ರಾಮಸ್ಥ ಸಿದ್ದೀಕ್ ಒತ್ತಾಯಿಸಿದರು. ಇಚ್ಲಂಪಾಡಿ ಗ್ರಾಮದಲ್ಲೂ ಪ್ರಭಾರ ಗ್ರಾಮ ಆಡಳಿತಾಧಿಕಾರಿ ಇರುವುದು. ಇಚ್ಲಂಪಾಡಿ ಗ್ರಾಮಕ್ಕೂ ಖಾಯಂ ಗ್ರಾಮ ಆಡಳಿತಾಧಿಕಾರಿ ನೇಮಕ ಮಾಡಬೇಕೆಂದು ಜಾರ್ಜ್‍ಕುಟ್ಟಿ ಉಪದೇಶಿ ಒತ್ತಾಯಿಸಿದರು. ಈ ಬಗ್ಗೆ ಇಲಾಖೆಗೆ ಮನವಿ ಮಾಡಲು ನಿರ್ಣಯ ಮಾಡಲಾಯಿತು.
ಜೆಇ ವರ್ಗಾವಣೆಗೆ ಆಕ್ಷೇಪ:
ನೆಲ್ಯಾಡಿ ಮೆಸ್ಕಾಂ ಶಾಖಾ ಕಚೇರಿಯ ಜೆಇ ರಮೇಶ್ ಅವರು ವಿದ್ಯುತ್ ಸಮಸ್ಯೆಗೆ ಹಗಲು-ರಾತ್ರಿ ಸ್ಪಂದನೆ ನೀಡುತ್ತಿದ್ದರು. ಇದೀಗ ಅವರ ಏಕಾಏಕಿ ವರ್ಗಾವಣೆ ಮಾಡಿರುವುದಕ್ಕೆ ಇಸ್ಮಾಯಿಲ್ ಅವರು ಆಕ್ಷೇಪ ಸೂಚಿಸಿ ಅವರನ್ನು ನೆಲ್ಯಾಡಿ ಶಾಖೆಗೆ ಮತ್ತೆ ನೇಮಕ ಮಾಡಬೇಕೆಂದು ಆಗ್ರಹಿಸಿದರು.
ಸರಕಾರಿ ಜಾಗ ಕಾದಿರಿಸಲು ಮನವಿ:
ಸರಕಾರಿ ಜಾಗವನ್ನು ನಿವೇಶನಕ್ಕೆ ಕಾದಿರಿಸಲು ಗ್ರಾಮಸ್ಥರ ಒತ್ತಾಯದಂತೆ ನಿರ್ಣಯಿಸಲಾಯಿತು. ಶಾಂತಿಬೆಟ್ಟುನಲ್ಲಿ ಅಂಗನವಾಡಿಗೂ ಜಾಗ ಕಾದಿರಿಸಲು ಗ್ರಾಮಸ್ಥರು ಒತ್ತಾಯಿಸಿದರು. ಇಚ್ಲಂಪಾಡಿಯಲ್ಲಿನ ರಾಜೀವಗಾಂಧಿ ಸೇವಾಕೇಂದ್ರದಲ್ಲೇ ಅಂಬೇಡ್ಕರ್ ಭವನ ಆಗಿದೆ. ಆದರೆ ಇದು ವೈಜ್ಞಾನಿಕವಾಗಿ ಇಲ್ಲ. ಒಂದೇ ಬಾಗಿಲು ಇದೆ. ಇದನ್ನು ಸರಿಪಡಿಸಬೇಕೆಂದು ವರ್ಗೀಸ್ ಅಬ್ರಹಾಂ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಇಂಜಿನಿಯರ್ ಹುಕ್ಕೇರಿ ಅವರು, ಪಂಚಾಯತ್‍ನಿಂದ ತಿಳಿಸಿದಂತೆ ಕಾಮಗಾರಿ ಮಾಡಿಕೊಡಲಾಗಿದೆ ಎಂದರು. ಈ ವೇಳೆ ಮಾತನಾಡಿದ ಅಧ್ಯಕ್ಷ ಲೋಕೇಶ್ ಬಾಣಜಾಲು ಅವರು, ಉಳಿಕೆ ಅನುದಾನದಲ್ಲಿ ಪ್ರತ್ಯೇಕ ಬಾಗಿಲು, ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡಲಾಗುವುದು ಎಂದರು.
ಮರ ತೆರವುಗೊಳಿಸಿ:
ಪೆರಿಯಶಾಂತಿಯಲ್ಲಿ ಹೆದ್ದಾರಿ ಬದಿ ಅಪಾಯಕಾರಿ ಮರಗಳಿವೆ. ಇವುಗಳನ್ನು ತೆರವುಗೊಳಿಸಬೇಕೆಂದು ಗ್ರಾಮಸ್ಥ ವರ್ಗೀಸ್ ಅಬ್ರಹಾಂ ಒತ್ತಾಯಿಸಿದರು. ಅರಣ್ಯ ಇಲಾಖೆಯ ಉಪ್ಪಿನಂಗಡಿ ವಲಯದ ಅಧಿಕಾರಿಗಳು ಮಾತ್ರ ಸಭೆಗೆ ಬಂದಿದ್ದು ಪಂಜ ವಲಯದ ಅರಣ್ಯ ಇಲಾಖೆಯ ಅಧಿಕಾರಿಗಳೂ ಸಭೆಗೆ ಬರಬೇಕೆಂದು ವರ್ಗೀಸ್ ಅಬ್ರಹಾಂ ಒತ್ತಾಯಿಸಿದರು. ಕಾಪಿನಬಾಗಿಲುನಲ್ಲಿ ಆನೆ ಕಂದಕ ನಿರ್ಮಾಣ ಮಾಡಿರುವಲ್ಲಿ ನೀರು ತುಂಬಿರುವುದರಿಂದ ರಸ್ತೆ ಸಂಪರ್ಕಕ್ಕೆ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ಅರಣ್ಯ ಇಲಾಖೆಯವರ ಗಮನಕ್ಕೆ ತಂದರು.
ಆದಾಯ ಮಿತಿ-ಚರ್ಚೆ:
ಬಿಪಿಎಲ್ ಕಾರ್ಡ್‍ಗೆ 1.20 ಲಕ್ಷ ರೂ.ಹಾಗೂ ಪಿಂಚಣಿಗೆ 32 ಸಾವಿರ ರೂ.ಆದಾಯ ಮಿತಿ ನಿಗದಿಗೊಳಿಸಲಾಗಿದೆ. ಆದರೆ ಗ್ರಾಮ ಆಡಳಿತಾಧಿಕಾರಿಯವರು ಹೆಚ್ಚಿನ ಬಿಪಿಎಲ್ ಕಾರ್ಡ್‍ದಾರರಿಗೆ 90 ಸಾವಿರ ರೂ.ಆದಾಯ ದಾಖಲು ಮಾಡುತ್ತಿದ್ದಾರೆ. ಇದರಿಂದ ಸಮಸ್ಯೆಯಾಗುತ್ತಿದೆ ಎಂದು ಗ್ರಾಮಸ್ಥ ರಫೀಕ್ ಹೇಳಿದರು. ಸರಕಾರದ ಆದೇಶದಂತೆ ಆದಾಯ ನಮೂದಿಸಲಾಗುತ್ತಿದೆ ಎಂದು ಗ್ರಾಮ ಆಡಳಿತಾಧಿಕಾರಿ ಸಿದ್ದಲಿಂಗಪ್ಪ ಜಂಗಮಶೆಟ್ಟಿ ಹೇಳಿದರು. ಪಿಂಚಣಿಗೂ ಇರುವ ಆದಾಯ ಮಿತಿಯನ್ನು ರೂ.1.20ಲಕ್ಷಕ್ಕೆ ಏರಿಸುವಂತೆ ಸರಕಾರಕ್ಕೆ ಮನವಿ ಮಾಡಲು ನಿರ್ಣಯಿಸಲಾಯಿತು.
ಮತಗಟ್ಟೆ ಕೊಠಡಿ ಬದಲಾಯಿಸಿ:
ಕೌಕ್ರಾಡಿ ಚರ್ಚ್ ಶಾಲೆಯಲ್ಲಿನ ಮತಗಟ್ಟೆಯಲ್ಲಿನ ಕೊಠಡಿ ತುಂಬಾ ಇಕ್ಕಟ್ಟಿನಿಂದ ಇದೆ. ಒಳಗೆ ಕುಳಿತುಕೊಳ್ಳಲು ಆಗುತ್ತಿಲ್ಲ. ಈ ಕೊಠಡಿಯ ಬದಲಾವಣೆ ಮಾಡುವಂತೆ ಗ್ರಾಮಸ್ಥ ಜಾನ್ಸನ್ ಗಲ್ಭಾವೋ ಒತ್ತಾಯಿಸಿದರು. ಈ ಬಗ್ಗೆ ಮನವಿ ಮಾಡಲು ನಿರ್ಣಯಿಸಲಾಯಿತು.
ಮಳೆಗಾಲಕ್ಕೆ ಮೊದಲು ಚರಂಡಿ ದುರಸ್ತಿಗೊಳಿಸಿ:
ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೇ ಮಳೆಯ ನೀರು ರಸ್ತೆಯಲ್ಲಿಯೇ ಹರಿದುಹೋಗುತ್ತಿದೆ. ಮಳೆಗಾಲ ಆರಂಭಕ್ಕೆ ಮೊದಲೇ ಚರಂಡಿ ದುರಸ್ತಿ ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು. ಶಾಂತಿಬೆಟ್ಟು, ಗೌಡಸಾಗ್ ರಸ್ತೆಗೆ ಅನುದಾನವೇ ಬಳಕೆಯಾಗಿಲ್ಲ ಎಂದು ಗ್ರಾಮಸ್ಥರು ಹೇಳಿದರು.
ಬಸ್ಸಿನ ವ್ಯವಸ್ಥೆ ಮಾಡಿ:
ಶಾಲೆ ಮಕ್ಕಳಿಗೆ ಅನುಕೂಲವಾಗುವಂತೆ ನೆಲ್ಯಾಡಿ-ಇಚ್ಲಂಪಾಡಿ ಮಾರ್ಗವಾಗಿ ಕಡಬಕ್ಕೆ ಸರಕಾರಿ ಬಸ್ಸಿನ ಸೌಲಭ್ಯ ಕಲ್ಪಿಸಬೇಕೆಂದು ಜಾರ್ಜ್‍ಕುಟ್ಟಿ ಉಪದೇಶಿ, ವರ್ಗೀಸ್ ಅಬ್ರಹಾಂ ಅವರು ಒತ್ತಾಯಿಸಿದರು. ನೆಲ್ಯಾಡಿ-ಕಡಬ ನಡುವೆಯೂ ಬಸ್ಸಿನ ಓಡಾಟಕ್ಕೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು. ಈ ಬಗ್ಗೆ ಕೆಎಸ್‍ಆರ್‍ಟಿಸಿಯವರಿಗೆ ಮನವಿ ಮಾಡಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಕೆ ಎಸ್ ಆರ್ ಟಿ ಸಿ ಬಸ್ಸುಗಳು ನೆಲ್ಯಾಡಿಯಲ್ಲಿರುವ ಬಸ್ ನಿಲ್ದಾಣಕ್ಕೆ ಬಂದೇ ಹೋಗಬೇಕೆಂದು ವಾಸುದೇವ ಅವರು ಒತ್ತಾಯಿಸಿದರು.