ನೆಲ್ಯಾಡಿ: ಮಂಗಳೂರು ವಿವಿ ನೆಲ್ಯಾಡಿ ಘಟಕ ಕಾಲೇಜು ಆರಂಭವಾಗಿ 6 ವರುಷವಾಗಿದ್ದು ಇದೀಗ ಶೈಕ್ಷಣಿಕ ವರುಷ ಪ್ರಥಮ ಬಿ.ಕಾಂ ಪದವಿಯಲ್ಲಿ 20ಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ಮಕ್ಕಳ ದಾಖಲಾತಿ ಆಗಿರುವುದೆಂಬ ನೆಪವೊಡ್ಡಿ ತರಗತಿ ನಡೆಸದೇ ಇರಲು ನಿರ್ಧರಿಸಿದ ಮಂಗಳೂರು ವಿವಿ.
ಈ ಬಗ್ಗೆ ಕಾಲೇಜಿನ ಅನುಷ್ಠಾನ ಸಮಿತಿ ವಿರುದ್ಧ ವ್ಯಕ್ತಪಡಿಸಿದ್ದು 20ಕ್ಕಿಂತ ಹೆಚ್ಚು ಮಕ್ಕಳನ್ನು ಸೇರ್ಪಡೆಗೊಳಿಸಲಾಗುವುದು ಹಾಗೂ ಬಿ.ಕಾಂ ತರಗತಿ ಮುಂದುವರಿಸುವಂತೆ ಆ.6ರಂದು ಅನುಷ್ಠಾನ ಸಮಿತಿಯ ಅಧ್ಯಕ್ಷೆ ಉಷಾ ಅಂಚನ್ ಅವರ ಅಧ್ಯಕ್ಷತೆಯಲ್ಲಿ ಇತರ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಕಾಲೇಜಿನಲ್ಲಿ ತುರ್ತು ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಯಿತು.
ಅನುಷ್ಠಾನ ಸಮಿತಿಯ ಅಧ್ಯಕ್ಷೆ ಉಷಾ ಅಂಚನ್ ಅವರು ಮಾತನಾಡಿ ಘಟಕ ಕಾಲೇಜು ಆರಂಭದಲ್ಲಿ ಕೇವಲ 9 ವಿದ್ಯಾರ್ಥಿಗಳಿಂದ ಆರಂಭವಾದ ಈ ಕಾಲೇಜು 6 ವರ್ಷವನ್ನು ಪೂರೈಸಿದ್ದು, ಇದೀಗ ಏಕಾಏಕಿಯಾಗಿ ಈ ವರ್ಷ 20ಕ್ಕಿಂತ ಕಡಿಮೆ ಮಕ್ಕಳ ಸಂಖ್ಯೆ ಇರುವ ತರಗತಿಗಳನ್ನು ಬಂದ್ ಮಾಡಲು ಸಿಂಡಿಕೇಟ್ ಸಭೆ ನಿರ್ಧರಿಸಿದೆ. ಪ್ರಥಮ ವರ್ಷದ ಬಿಎ ಗೆ 21 ಹಾಗೂ ಬಿ.ಕಾಂ ತರಗತಿಗೆ 16 ವಿದ್ಯಾರ್ಥಿಗಳು ಸೇರ್ಪಡೆಯಾಗಿದ್ದಾರೆ. ಬಿ.ಕಾಂ ತರಗತಿಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುವುದರಿಂದ ತರಗತಿ ನಡೆಸದೇ ಇರಲು ವಿ ವಿ ಆಡಳಿತ ಮಂಡಳಿ ಮುಂದಾಗಿದೆ. ದಾಖಲಾದ ವಿದ್ಯಾರ್ಥಿಗಳ ದಾಖಲಾತಿಗಳನ್ನು ಹಿಂತಿರುಗಿಸುತ್ತಿರುವುದರ ಬಗ್ಗೆ ಮಾಹಿತಿಯನ್ನು ಪಡೆದ ಅನುಷ್ಠಾನ ಸಮಿತಿ ತಕ್ಷಣ. ಕುಲಪತಿಗಳಿಗೂ ಹಾಗೂ ಪ್ರಾಂಶುಪಾಲರಿಗೂ ಹಿಂತಿರುಗಿಸದಂತೆ ಮನವಿ ಮಾಡಿಕೊಳ್ಳಲಾಗಿತ್ತು. ಇದೀಗ ಗ್ರಾಮೀಣ ಪ್ರದೇಶದಲ್ಲಿ ಘಟಕ ಕಾಲೇಜು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸದಸ್ಯರ ಹಾಗೂ ಸಾರ್ವಜನಿಕರ ಅಭಿಪ್ರಾಯದಂತೆ ಯಾವುದೇ ಕಾರಣಕ್ಕೂ ತರಗತಿಗಳನ್ನು ಸಗಿತಗೊಳಿಸಬಾರದು ಎಂದು ತೀರ್ಮಾನಿಸಲಾಯಿತು.
21 ವಿದ್ಯಾರ್ಥಿಗಳು ಈ ಸಲದ ಶೈಕ್ಷಣಿಕ ವರ್ಷದ ಪ್ರಥಮ ಬಿ.ಕಾಂ ತರಗತಿಗೆ ಅರ್ಜಿ ಫಾರಂ ಪಡೆದುಕೊಂಡಿದ್ದು. ಇವರ ಪೈಕಿ 16 ವಿದ್ಯಾರ್ಥಿಗಳು ದಾಖಲಾತಿಯನ್ನು ಸಲ್ಲಿಸಿ ಪ್ರವೇಶವನ್ನು ಪಡೆದುಕೊಂಡಿದ್ದರು. ಕಾಲೇಜಿನವರು ವಿವಿ ಆಡಳಿತ ಮಂಡಳಿಯವರ ನಿರ್ಣಯದಂತೆ ದಾಖಲಾದ ವಿದ್ಯಾರ್ಥಿಗಳಿಗೆ ದಾಖಲಾತಿಯನ್ನು ಹಿಂಪಡೆಯುವಂತೆ ತಿಳಿಸಿದ ಪ್ರಕಾರ 16 ವಿದ್ಯಾರ್ಥಿಗಳ ಪೈಕಿ 10 ವಿದ್ಯಾರ್ಥಿಗಳು ದಾಖಲಾತಿಯನ್ನು ಹಿಂಪಡೆದುಕೊಂಡಿದ್ದಾರೆ. ದಾಖಲಾದ ಎಲ್ಲಾ ವಿದ್ಯಾರ್ಥಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಅವರನ್ನು ಪುನಃ ಕಾಲೇಜಿಗೆ ಸೇರ್ಪಡೆಯಾಗಲು ತಿಳಿಸಲಾಯಿತು. ಆರ್ಥಿಕವಾಗಿ ಹಿಂದುಳಿದವರಿಗೆ ಆರ್ಥಿಕ ನೆರವು ನೀಡಿ ಕಾಲೇಜಿಗೆ ಸೇರ್ಪಡೆಗೊಳಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು.
ನೆಲ್ಯಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಲಾಂ ಬಿಲಾಲ್, ಕಾಲೇಜು ಅನುಷ್ಠಾನ ಸಮಿತಿ ಕಾರ್ಯದರ್ಶಿ ಶಿವಪ್ರಸಾದ್, ಕೋಶಾಧಿಕಾರಿ ವಿಶ್ವನಾಥ್ ಶೆಟ್ಟಿ.ಕೆ, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅನುಷ್ಠಾನ ಸಮಿತಿ ಗೌರವಾಧ್ಯಕ್ಷ ಕೆ.ಪಿ.ತೋಮಸ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಸರ್ವೋತ್ತಮ ಗೌಡ, ಪಿ.ಪಿ.ವರ್ಗಿಸ್, ನೆಲ್ಯಾಡಿ ವರ್ತಕ ಸಂಘದ ಅಧ್ಯಕ್ಷ ಸತೀಶ್.ಕೆ.ಎಸ್, ಗೌರವಾಧ್ಯಕ್ಷ ರಫೀಕ್ ಸೀಗಲ್, ನೆಲ್ಯಾಡಿ ಗ್ರಾಮ ಪಂಚಾಯಿತಿ ಸದಸ್ಯ ಮೊಹಮ್ಮದ್ ಇಕ್ಬಾಲ್, ಮಾಜಿ ಸದಸ್ಯ ಅಬ್ರಹಾಂ ಕೆ.ಪಿ, ಕಾಲೇಜಿನ ಕಟ್ಟಡ ಮಾಲಕ ರವಿಚಂದ್ರ ಹೊಸವಕ್ಲು, ಗಣೇಶ್ ರಶ್ಮಿ, ರವಿ ಸುರಕ್ಷಾ, ಗಣೇಶ್, ನಾಜೀಮ್ ಸಾಹೇಬ್ ಉಪಸ್ಥಿತರಿದ್ದರು. ಶಿವಪ್ರಸಾದ್ ಸ್ವಾಗತಿಸಿದರು.