ನೆಲ್ಯಾಡಿ: ಕಡಬ ತಾಲೂಕಿನ ನೆಲ್ಯಾಡಿ ಗ್ರಾಮ ಪಂಚಾಯಿತಿಗೆ ಒಳಪಟ್ಟಿರುವ ಮಾದೇರಿ ಸಮೀಪದ ಪಲ್ಲಸ್ತಡ್ಕ-ಎರುಕಡಪು ರಸ್ತೆಯು ಸುಮಾರು 1ಕಿಮಿ ರಸ್ತೆ ಸಂಚಾರಕ್ಕೆ ಯೋಗ್ಯವಿಲ್ಲದಂತಾಗಿದೆ. ಕೆಸರಿನಲ್ಲಿಯೇ ಸಾರ್ವಜನಿಕರು ಪ್ರಯಾಣಿಸುವ ದುಸ್ಥಿತಿ ಉಂಟಾಗಿದೆ.
ಈ ಕಚ್ಛಾ ರಸ್ತೆಯ ಬದಿಯಲ್ಲಿ ಮಳೆನೀರು ಹರಿದುಹೋಗಲು ಚರಂಡಿಗಳಿಲ್ಲದೇ ಇರುವುದರಿಂದಾಗಿ ರಸ್ತೆಯಲ್ಲಿಯೇ ಮಳೆನೀರು ಹರಿದು ರಸ್ತೆಯ ಮಣ್ಣು ಕೊಚ್ಚಿಕೊಂಡು ಹೋಗಿ ರಸ್ತೆ ಸಂಪೂರ್ಣ ಕೆಸರುಮಯವಾಗಿದೆ.
ಶಾಲಾ ಮಕ್ಕಳ ಪರದಾಟ:
ಈ ಪ್ರದೇಶದಿಂದ ನೆಲ್ಯಾಡಿ, ಮಾದೇರಿ, ಕೋಣಾಲು, ಉಪ್ಪಿನಂಗಡಿ ಮೊದಲಾದ ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳು ಪ್ರತಿ ದಿನ ಇದೇ ರಸ್ತೆಯಲ್ಲಿ ಹೋಗುತ್ತಿದ್ದಾರೆ. ಕೆಸರು ಗದ್ದೆಯತ್ತಾದ ಈ ರಸ್ತೆಯಲ್ಲಿ ಸಂಚಾರವೇ ಕಷ್ಟವಾಗಿದ್ದು. ಎಂಡೋಸಲ್ಫಾನ್ ಪೀಡಿತ ಮನೆಗಳು ಈ ಪ್ರದೇಶದಲ್ಲಿ ಇದ್ದು ಅನಾರೋಗ್ಯದಂತ ತುರ್ತು ಪರಿಸ್ಥಿತಿ ಎದುರಾದಾಗ ವಾಹನಗಳು ಬರಲು ಕಷ್ಟವಾಗಿರುವುದರಿಂದ ಹಿಂದೇಟು ಹಾಕುತ್ತಿದ್ದಾರೆ ಎಂಬುದು ಗ್ರಾಮಸ್ಥರ ಅಳಲಾಗಿದೆ.
ಸ್ಪಂದಿಸಿದ ಪಂಚಾಯಿತಿ ಸದಸ್ಯ:
ಗ್ರಾಮಸ್ಥರಿಗೆ ಆಗುತ್ತಿರುವ ತೊಂದರೆಯನ್ನು ತಿಳಿದು ಪಂಚಾಯಿತಿ ಸದಸ್ಯ ಆನಂದ ಪಿಲವೂರು ಅವರು ಖುದ್ದು ಸ್ಥಳಕ್ಕೆ ತೆರಳಿ ಪರಿಶೀಲಿಸಿ ತಕ್ಷಣ ಹಿಟಾಚನ್ನು ತರಿಸಿ ರಸ್ತೆಯ ಎರಡು ಬದಿಗಳಲ್ಲಿ ನೀರಿನ ಹರಿವಿಗಾಗಿ ಎರಡು ಕಡೆಗಳಲ್ಲಿ ಚರಂಡಿಗಳನ್ನು ನಿರ್ಮಿಸಿ, ಕೆಸರಾದ ಸ್ಥಳಗಳಿಗೆ ಕಲ್ಲು ಹಾಗೂ ಮರಳನ್ನು ಹಾಕಿ ತಾತ್ಕಾಲಿಕವಾಗಿ ಸಂಚರಿಸಲು ವ್ಯವಸ್ಥೆಯನ್ನು ಕಲ್ಪಿಸಿದರು.
ನೆಲ್ಯಾಡಿ ಪಂಚಾಯಿತಿ ಸದಸ್ಯ ಆನಂದ ಪಿಲವೂರು ಅವರು ತಾತ್ಕಾಲಿಕವಾಗಿ ಸಂಚರಿಸಲು ರಸ್ತೆಯನ್ನು ದುರಸ್ತಿಗೊಳಿಸಿದ್ದಾರೆ. ಸರ್ವ ಋತುಗಳಲ್ಲಿ ಸಂಚರಿಸಲು ಯೋಗ್ಯವಾಗುವ ರೀತಿಯಲ್ಲಿ ಮುಂದಿನ ದಿನಗಳಲ್ಲಿ ರಸ್ತೆಯನ್ನು ನಿರ್ಮಿಸಬೇಕಾಗಿದೆ.
-ಸಜಿ.ಕೆ.ಎನ್, ತೊಟ್ಲಲುಗುಂಡಿ