
ನೂಜಿಬಾಳ್ತಿಲ ಬೆಥನಿ ಸಂಯುಕ್ತ ಪ.ಪೂ. ಮಹಾವಿದ್ಯಾಲಯದಲ್ಲಿ ಆ.10 ರಂದು ಶನಿವಾರ ಆಟಿ ಆಚರಣೆ ಜರುಗಿತು.
ಉದ್ಘಾಟನೆಯನ್ನು ಸಂಸ್ಥೆಯ ಸಂಚಾಲಕ ರೆ.ಫಾ.ವಿಜೋಯ್ ವರ್ಗೀಸ್ ನಿರ್ವಹಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿ ಶ್ರೀಧರ ಗೌಡ ಗೋಳ್ತಿಮಾರ್ ಮಾತನಾಡಿ ನಮ್ಮ ಹಿರಿಯರು ಆಚರಿಸುತ್ತಿದ್ದ ಸಂಸ್ಕೃತಿ ಸಂಪ್ರದಾಯಗಳನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸುವ ಕಾರ್ಯಕ್ರಮ ಇದಾಗಿದ್ದು, ಸಂಸ್ಥೆಯ ವೈಖರಿಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.
ಸಂಸ್ಥೆಯ ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಅಭಿಲಾಶ್.ಪಿ.ಕೆ. ಮಾತನಾಡಿ ನಮ್ಮ ಹಿರಿಯರ ಆಹಾರ ಪದ್ಧತಿ ಜೀವನ ಶೈಲಿಯಿಂದ ಹೆಚ್ಚಿನ ರೋಗರುಜಿನಗಳಿಂದ ಮುಕ್ತರಾಗಿ ಆರೋಗ್ಯವಂತ ಜೀವನನ್ನು ಸಾಗಿಸುತ್ತಿದ್ದರು ಆದರೆ ಇಂದಿನ ಯುವ ಪೀಳಿಗೆಯ ಆಧುನಿಕ ಜೀವನಶೈಲಿಯಿಂದಾಗಿ ಸಾಕಷ್ಟು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದಾರೆ ಆದ್ದರಿಂದ ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಜ್ಞಾನದ ಜೊತೆಗೆ ಜಾಗೃತಿಯನ್ನು ಮೂಡಿಸುತ್ತದೆ ಎಂದರು.
ಆಟಿ ತಿಂಗಳ ಮಹತ್ವದ ಬಗ್ಗೆ ಸಂಸ್ಥೆಯ ಹಿರಿಯ ವಿದ್ಯಾರ್ಥಿ ಹಾಗು ಯುವ ಕವಿ ಸಮ್ಯಕ್ತ್ ಜೈನ್ ಮಾತನಾಡಿ ಆಟಿ ತಿಂಗಳು ಕಷ್ಟದ ತಿಂಗಳು. ಆಟಿದ ತಿಂಗಳಲ್ಲಿ ಯಾವುದೇ ಶುಭ ಕಾರ್ಯಕ್ರಮ ನಡೆಯದಿದ್ದರೂ ಈ ತಿಂಗಳು ತುಳುವರಿಗೆ ಅತ್ಯಂತ ಮಹತ್ವವಾದದ್ದು. ತುಳುವನಾಡಿನ ಭಾಷೆ ಸಂಸ್ಕೃತಿಯನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸುವ ಕೆಲಸ ನಡೆಯಬೇಕಾಗಿದೆ. ಇಂತಹ ಆಚಾರ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ತಿಳಿಸುವ ಮಹತ್ತರವಾದ ಜವಬ್ದಾರಿಯನ್ನು ವಿದ್ಯಾಸಂಸ್ಥೆಗಳು ಹೊಂದಿದ್ದು ಈ ನಿಟ್ಟಿನಲ್ಲಿ ಈ ದಿನದ ಕಾರ್ಯಕ್ರಮ ಅತ್ಯಂತ ಶ್ಲಾಘನೀಯವಾದದ್ದು. ಇಂತಹ ವೈಶಿಷ್ಟ ಪೂರ್ಣ ಕಾರ್ಯಕ್ರಮಗಳ ಮೂಲಕ ಈ ವಿದ್ಯಾ ದೇಗುಲವು ನೀಡುವ ಜ್ಞಾನ ಸಂಪತ್ತನ್ನು ಜೀವನದಲ್ಲಿ ಅಳವಡಿಸಿಕೊಂಡು ಮುಂದೆ ಸಾಗೋಣ ಎಂದು ಶುಭ ಹಾರೈಸಿದರು.
ವಿದ್ಯಾರ್ಥಿನಿಯರಾದ ಚೈತ್ರ, ಪೂಜಾಶ್ರೀ ಭಾಷಣ ಮಾಡಿದರು. ವಿದ್ಯಾರ್ಥಿಗಳು ಸಮೂಹ ಗಾಯನ, ಆಟಿ ಕಳಂಜ ನೃತ್ಯ, ಸಮೂಹ ನೃತ್ಯ ಮುಂತಾದ ವೈವಿಧ್ಯಮಯ ಕಾರ್ಯಕ್ರಮಗಳಿಂದ ಈ ದಿನದವನ್ನು ಆಚರಿಸಲಾಯಿತು.
ವಿದ್ಯಾರ್ಥಿಗಳು ತಮ್ಮ ಮನೆಯಲ್ಲಿ ತಯಾರಿಸಿದ ವಿವಿಧ ಬಗೆಯ ತುಳುನಾಡಿನ ಸಂಸ್ಕೃತಿ ಯನ್ನು ಸಾರಿ ಹೇಳುವ ಖಾದ್ಯಗಳನ್ನು ತಯಾರಿಸಿಕೊಂಡು ಬಂದು, ಪರಸ್ಪರ ಹಂಚಿಕೊಂಡು ಸಹ ಭೋಜನ ನಡೆಸಲಾಯಿತು. ಕಾರ್ಯಕ್ರಮದ ಯಶಸ್ಸಿಗೆ ಪೋಷಕರೆಲ್ಲರೂ ಸಹಕರಿಸಿದರು. ವಿದ್ಯಾರ್ಥಿನಿಯರಾದ ಮೋಕ್ಷ ಮತ್ತು ಅಪೇಕ್ಷ ಅವರು ಕಾರ್ಯಕ್ರಮ ನಿರೂಪಿಸಿದರು. ನಿಶ್ಮಿತಾ ವಂದಿಸಿದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ಶ್ರೀಮತಿ ಭಾರತಿ, ಮುಖ್ಯಗುರು ಥಾಮಸ್.ಏ.ಕೆ, ಉಪನ್ಯಾಸಕ ವೃಂದ, ಶಿಕ್ಷಕ ವೃಂದ, ಶಿಕ್ಷಕೇತರರು, ಪಾಲಕರು, ವಿದ್ಯಾರ್ಥಿಗಳು, ಹಿರಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಪ್ರಾಂಶುಪಾಲ ಜೋರ್ಜ್.ಟಿ.ಎಸ್ ಸ್ವಾಗತಿಸಿದರು.






