ಬಾಂಗ್ಲಾ ದೇಶದಲ್ಲಿರುವ ಹಿಂದುಗಳ ಮೇಲಿನ ದೌರ್ಜನ್ಯ ಖಂಡಿಸಿ, ಅವರ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕಾಗಿ ಆಗ್ರಹಿಸಿ, ಜನ ಜಾಗೃತಿಗೋಸ್ಕರ ಹಿಂದೂ ಹಿತರಕ್ಷಣಾ ಸಮಿತಿ ಬೆಳ್ತಂಗಡಿ ತಾಲೂಕು, ಇದರ ವತಿಯಿಂದ ಮಾನವ ಸರಪಳಿಯ ಮೂಲಕ ಪ್ರತಿಭಟನೆಯು ಸೋಮವಾರ ಬೆಳ್ತಂಗಡಿಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜ ಮಾತನಾಡಿ “ಜಗತ್ತಿನ ಏಕೈಕ ಹಿಂದು ರಾಷ್ಟ್ರವಾಗಿದ್ದ ಭಾರತ, ಯಾವುದೋ ಕಾರಣಕ್ಕೆ ಜಾತ್ಯಾತೀತ ರಾಷ್ಟ್ರವಾಗಿದೆ. ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹತ್ಯೆ,ಅತ್ಯಾಚಾರ, ಹಿಂಸೆ ಹಿಂದುಗಳಿಗೆ ನೋವು ತಂದಿದ್ದು ಹಿಂದೂ ಸಮಾಜ ಈ ಘಟನೆಯನ್ನು ಖಂಡಿಸುತ್ತದೆ. ವಿಶ್ವ ಸಂಸ್ಥೆ ಹಿಂದೂಗಳ ರಕ್ಷಣೆಗೆ ಧಾವಿಸಬೇಕು” ಎಂದರು.
“ಬಾಂಗ್ಲಾದೇಶ ಮತ್ತು ಪಾಕಿಸ್ಥಾನದ ಹಿಂದೂಗಳ ಪರಿಸ್ಥಿತಿ ಯಾವ ಮಟ್ಟದಲ್ಲಿದೆಯೆಂದು ಜಗತ್ತಿಗೆ ಗೊತ್ತಾಗಿದೆ.ಈ ದೇಶದ ನಪುಂಸಕ ಮತ್ತು ಬುದ್ದಿಜೀವಿ ಹಿಂದೂಗಳು ಇನ್ನೂ ಎಚ್ಚರವಾಗದಿದ್ದರೆ ಬಾಂಗ್ಲಾದೇಶದ ಪರಿಸ್ಥಿತಿ ನಿಮಗೂ ಬರಬಹುದು.ಹಿಂದೂಗಳ ಪರ ನಿಂತು ಒಕ್ಕೊರಲಿನಿಂದ ಬಾಂಗ್ಲಾದೇಶದ ಘಟನೆಯನ್ನು ಖಂಡಿಸಬೇಕು” ಎಂದರು.
ಹಿಂದೂ ಮುಖಂಡ ನವೀನ್ ನೆರಿಯ ಮಾತನಾಡಿ “ಪ್ರಪಂಚದಲ್ಲಿ ಹಿಂದೂಗಳು ಯಾರಿಗೂ ಅನ್ಯಾಯ ಮಾಡಿದ ಇತಿಹಾಸವಿಲ್ಲ. ಬಾಂಗ್ಲಾದಲ್ಲಿ ಅತೀ ಹೆಚ್ಚು ದೌರ್ಜನ್ಯಕ್ಕೆ ಒಳಗಾದವರು ಹಿಂದೂಗಳು. ಕೂಡಲೇ ಭಾರತ ಸರಕಾರ ಮತ್ತು ವಿಶ್ವ ಸಂಸ್ಥೆ ಮಧ್ಯಪ್ರವೇಶಿಸಿ ಬಾಂಗ್ಲಾದೇಶದ ಹಿಂದೂಗಳಿಗೆ ರಕ್ಷಣೆ ನೀಡಬೇಕು” ಎಂದರು.
ಬಿಜೆಪಿ ಬೆಳ್ತಂಗಡಿ ಮಂಡಲ ಅಧ್ಯಕ್ಷ ಶ್ರೀನಿವಾಸ್ ರಾವ್, ಜಯಾನಂದ ಗೌಡ ಪ್ರಜ್ವಲ್, ವಿಶ್ವನಾಥ ಹೊಳ್ಳ, ರಕ್ಷಿತ್ ಶೆಟ್ಟಿ ಪದ್ಮುಂಜ, ರವಿ ಕುಮಾರ್ ಬರಮೇಲು, ಉಮೇಶ್ ಕುಲಾಲ್ ಗುರುವಾಯನಕೆರೆ, ಗಣೇಶ್ ಮುಂಡಾಜೆ, ಶರತ್ ಶೆಟ್ಟಿ, ಗಣೇಶ್ ಗೌಡ ನಾವೂರು, ಹಿಂದೂ ಮುಖಂಡರಾದ ಮೋಹನ್ ಬೆಳ್ತಂಗಡಿ, ಸಂತೋಷ್ ಕುಮಾರ್ ಕಾಪಿನಡ್ಕ, ಸೀತರಾಮ್ ಬೆಳಾಲ್, ಅನಿಲ್ ಕುಮಾರ್ ಯು., ದಿನೇಶ್ ಚಾರ್ಮಾಡಿ, ಕೊರಗಪ್ಪ ನಾಯ್ಕ್ ಧರ್ಮಸ್ಥಳ, ರಮೇಶ್ ಧರ್ಮಸ್ಥಳ, ಸಂತೋಷ್ ಅತ್ತಾಜೆ, ಈಶ್ವರ ಬೈರ, ಪದ್ಮನಾಭ ಅರ್ಕಜೆ, ನಂದ ಕುಮಾರ್ ಹಾಗೂ ಹಿಂದೂ ಮುಖಂಡರು ಉಪಸ್ಥಿತರಿದ್ದರು.