ನೆಲ್ಯಾಡಿ-ಕೌಕ್ರಾಡಿ ವರ್ತಕ ಹಾಗೂ ಕೈಗಾರಿಕಾ ಸಂಘದಿಂದ 78ನೇ ಸ್ವಾತಂತ್ರ್ಯ ದಿನಾಚರಣೆ

ಶೇರ್ ಮಾಡಿ

ನೆಲ್ಯಾಡಿ: ನೆಲ್ಯಾಡಿ-ಕೌಕ್ರಾಡಿ ವರ್ತಕ ಹಾಗೂ ಕೈಗಾರಿಕಾ ವತಿಯಿಂದ ನೆಲ್ಯಾಡಿ ಡಿಯೋನ್ ಸ್ಕ್ವೇರ್ ಮುಂಭಾಗ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.

ನಿವೃತ್ತ ಮುಖ್ಯಶಿಕ್ಷಕ ರವೀಂದ್ರ ಟಿ.ಧ್ವಜಾರೋಹಣ ನೆರವೇರಿಸಿ ಮಾತನಾಡಿ ಭಾರತದ ಸ್ವಾತಂತ್ರ್ಯ ಹೋರಾಟವು ಅನೇಕ ಮಹಾನ್ ಹೋರಾಟಗಾರರ ಪರಿಶ್ರಮದ ಫಲವಾಗಿದೆ. ಜಾತಿ, ಧರ್ಮ, ಮತ, ಪಂಥಗಳನ್ನು ಮರೆತು ಒಂದಾಗಿ ಸ್ವಾತಂತ್ರ್ಯವೇ ಮೂಲಮಂತ್ರವೆಂಬ ಗುರಿಯನ್ನು ಇಟ್ಟುಕೊಂಡು ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನವನ್ನು ಎಂದೆಂದಿಗೂ ನಾವು ಸ್ಮರಿಸಬೇಕು. ನೆಲ್ಯಾಡಿಯು ಸರ್ವಧರ್ಮಗಳೊಂದಿಗೆ ಸೌಹಾರ್ಧತೆಯನ್ನು ಬೆಳೆಸಿಕೊಂಡು ಬಂದ ಪ್ರದೇಶವಾಗಿರುವುದಕ್ಕೆ ಸ್ವಾತಂತ್ರ್ಯ ಹೋರಾಟದ ಆ ಸ್ಪೂರ್ತಿಯು ಕಾರಣವಾಗಿದೆ. ನೆಲ್ಯಾಡಿ ಪೇಟೆಯ ಏಳಿಗೆಗೆ ನಿರಂತರವಾಗಿ ಜೊತೆಯಾಗಿ ನಿಲ್ಲುವ, ಪ್ರತಿಯೊಂದು ಸಮಸ್ಯೆಗೆ ಸ್ಪಂದಿಸಿ ಪರಿಹರಿಸುವ ವರ್ತಕರ ಸಂಘವು ಇಷ್ಟೊಂದು ಕ್ರಿಯಾಶೀಲವಾಗಿ ಇರುವುದರ ಬಗ್ಗೆ ನಮಗೆ ಹೆಮ್ಮೆ ಇದೆ ಎಂದರು.

ಮಂಗಳೂರು ವಿವಿ ನೆಲ್ಯಾಡಿ ಘಟಕ ಕಾಲೇಜು ಉಪನ್ಯಾಸಕ ಡಾ.ನೂರುಂದಪ್ಪ ಅವರು ಮಾತನಾಡುತ್ತಾ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾರ್ನಾರ್ಡ್ ಸದಾಶಿವ ರಾವ್ ಮತ್ತು ಸರೋಜಿನಿ ನಾಯ್ಡು ಅವರ ನೇತೃತ್ವದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟದ ಐತಿಹಾಸಿಕ ಸಂದರ್ಭಗಳನ್ನು ಸ್ಮರಿಸಿದರು. ಸ್ವಾತಂತ್ರ್ಯ ಹೋರಾಟಗಾರರ ಆಶಯದಂತೆ ಭಾರತವನ್ನು ಅಭಿವೃದ್ಧಿ ರಾಷ್ಟ್ರವನ್ನಾಗಿ ಬೆಳೆಸುವಲ್ಲಿ ಸೈನಿಕರು, ರೈತರು, ಮಹಿಳೆಯರು, ಮತ್ತು ಯುವ ಸಮುದಾಯದ ಪಾತ್ರ ಮಹತ್ವದ್ದಾಗಿದೆ. 78ನೇ ಸ್ವಾತಂತ್ರ್ಯೋತ್ಸವದ ಈ ಸಂದರ್ಭದಲ್ಲಿ ಭಾರತದ ಅಭಿವೃದ್ಧಿಯ ಬಗ್ಗೆ ಹೆಮ್ಮೆಪಡುತ್ತಾ ದೇಶದ ವಿಕಸನದಲ್ಲಿ ನಾವೆಲ್ಲರೂ ಒಂದಾಗಿ ಶ್ರಮಿಸುವುದು ಮುಖ್ಯ ಎಂದರು.

ನೆಲ್ಯಾಡಿ ವರ್ತಕರ ಸಂಘದ ಅಧ್ಯಕ್ಷರಾದ ಶ್ರೀ ಸತೀಶ್ ಕೆ.ಎಸ್ ಅವರು ಮಾತನಾಡುತ್ತಾ ಸತ್ಯ ಮತ್ತು ಅಹಿಂಸೆಯ ಮಾರ್ಗದಲ್ಲಿ ಪಡೆದುಕೊಂಡ ಭಾರತ ಸ್ವಾತಂತ್ರ್ಯದ ಹೋರಾಟದ ದಾರಿಗಳು ನಮ್ಮ ಜೀವನದಲ್ಲಿಯೂ ಅಳವಡಿಸಿಕೊಳ್ಳಬೇಕು. ಅಹಿಂಸೆಯ ಹೋರಾಟದಿಂದ ಬರುವ ಪ್ರತಿಫಲದ ಬಗ್ಗೆ ಇಡೀ ಜಗತ್ತಿಗೆ ತಿಳಿಸಿಕೊಟ್ಟದ್ದು ನಮ್ಮ ಭಾರತದ ಸ್ವಾತಂತ್ರ್ಯದ ಹೋರಾಟಗಾರರು. ಸತ್ಯ ಅಹಿಂಸೆ ಮತ್ತು ನ್ಯಾಯಯುತವಾದ ದಾರಿಯಲ್ಲಿ ಪ್ರತಿಯೊಬ್ಬರೂ ನಡೆದು, ತಮ್ಮ ತಮ್ಮ ಕರ್ತವ್ಯಗಳನ್ನು ನಿರ್ವಹಿಸಿದರೆ ನಮ್ಮ ದೇಶ ಇನ್ನಷ್ಟು ಅಭಿವೃದ್ಧಿ ರಾಷ್ಟ್ರವಾಗಲೂ ಸಾಧ್ಯವಾಗುತ್ತದೆ ಮತ್ತು ಸ್ವಾತಂತ್ರ್ಯ ಹೋರಾಟಗಾರರಿಗೆ ನಿಜವಾದ ಗೌರವವನ್ನು ಸಲ್ಲಿಸಿದಂತಾಗುತ್ತದೆ ಎಂದರು.

ಸನ್ಮಾನ:
ನಿವೃತ್ತ ಯೋಧರಾದ ಒ.ಜಿ.ನೈನಾನ್ ಹಾಗೂ ಕೇಶವ.ಹೆಚ್.ಮಾದೇರಿ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಸಿ.ಹೆಚ್., ಗೌರವಾಧ್ಯಕ್ಷ ರಫೀಕ್ ಸೀಗಲ್, ಉಪಾಧ್ಯಕ್ಷ ನಾಝೀಂ ಸಾಹೇಬ್, ಜಿ.ಪಂ.ಮಾಜಿ ಸದಸ್ಯ ಸರ್ವೋತ್ತಮ ಗೌಡ, ತಾ.ಪಂ.ಮಾಜಿ ಸದಸ್ಯೆ ಉಷಾ ಅಂಚನ್, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಜನಾರ್ದನ ಟಿ., ನೆಲ್ಯಾಡಿ ಗ್ರಾ.ಪಂ.ಸದಸ್ಯ ಅಬ್ದುಲ್ ಜಬ್ಬಾರ್, ವರ್ತಕರಾದ ರವಿಪ್ರಸಾದ್ ಆಚಾರ್ಯ, ಎನ್.ಎಸ್.ಸುಲೈಮಾನ್, ಎಂ.ಎಸ್.ಟೋಮ್, ರವಿ ಸುರಕ್ಷಾ, ಸಿದ್ದೀಕ್ ಜಮಾಲಿಯಾ, ಅಬ್ದುಲ್ ರವೂಫ್ ಎಂ.ಆರ್., ದಿನೇಶ್ ಎಂ.ಟಿ., ರಾಜ ಜ್ಯೋತಿಕಾ ಫ್ಯಾನ್ಸಿ, ಅಬ್ದುಲ್ ಮುತಾಲಿಬ್ ಮತ್ತಿತರರು ಉಪಸ್ಥಿತರಿದ್ದರು.

ನೆಲ್ಯಾಡಿ ಪಿಎಂಶ್ರೀ ಶಾಲಾ ವಿದ್ಯಾರ್ಥಿಗಳು ರಾಷ್ಟ್ರಗೀತೆ ಹಾಡಿದರು. ಸಂಘದ ಉಪಾಧ್ಯಕ್ಷ ಗಣೇಶ್ ರಶ್ಮಿ ಸ್ವಾಗತಿಸಿ, ಅಬ್ದುಲ್ ಲತೀಫ್ ವಂದಿಸಿದರು.

Leave a Reply

error: Content is protected !!