ಸಂಸ್ಕೃತಿಯ ಜೀವಾಳವೇ ಭಾಷೆಯಾಗಿದೆ. ಭಾರತೀಯ ಸಂಸ್ಕೃತಿಯಲ್ಲಿ ಸಂಸ್ಕೃತ ಭಾಷೆಯು ಹಾಸುಹೊಕ್ಕಾಗಿದೆ. ಗ್ರೀಕ್, ಲ್ಯಾಟಿನ್, ಜರ್ಮನ್ ಮುಂತಾದ ಭಾಷೆಗಳಲ್ಲಿ ಸಂಸ್ಕೃತ ಪದಗಳು ಹೇರಳವಾಗಿವೆ. ಸಂಸ್ಕೃತವು ಒಂದು ಕಾಲದಲ್ಲಿ ಆಡುಭಾಷೆಯಾಗಿ, ರಾಜ ಭಾಷೆಯಾಗಿದ್ದು ಈಗ ಪುನಃ ತನ್ನ ಅಸ್ತಿತ್ವ ಕಾಣುತ್ತಿರುವುದು ಸಂತೋಷದಾಯಕ ವಿಚಾರ. ವೇದಗಳು, ರಾಮಾಯಣ, ಮಹಾಭಾರತ, ಪುರಾಣಗಳು, ಸ್ಮೃತಿಗಳು ಮುಂತಾದ ಪ್ರಮುಖ ಕೃತಿಗಳ ಸಮೃದ್ಧ ಭಾಷೆ ಇದಾಗಿದ್ದು, ಇವುಗಳು ಸಾರ್ವಕಾಲಿಕ ಶ್ರೇಷ್ಠ ಕೃತಿಗಳು ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರಮೋದ್ ಕುಮಾರ್ ಹೇಳಿದರು.
ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಸಂಸ್ಕೃತ ಭಾಷಾ ವಿಭಾಗದ ಸಂಸ್ಕೃತ ಸಂಘ ಹಾಗೂ ಅಂತರಾಧ್ಯಯನ ವೃತ್ತಮ್ ಇವುಗಳ ವತಿಯಿಂದ ವಿಶ್ವ ಸಂಸ್ಕೃತ ದಿನದ ಅಂಗವಾಗಿ ನಡೆದ ಸಂಸ್ಕೃತೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಮಾತನಾಡಿದರು.
ಸಂಸ್ಕೃತ ಭಾಷಾ ವಿಭಾಗದ ಮುಖ್ಯಸ್ಥ ಡಾ.ಪ್ರಸನ್ನಕುಮಾರ ಐತಾಳ್, ಸಂಸ್ಕೃತ ಸಂಘದ ಅಧ್ಯಕ್ಷ ಗುರುದತ್ತ ಮರಾಠೆ, ಉಪಾಧ್ಯಕ್ಷೆ ವೈಷ್ಣವಿ ಭಟ್, ಅಂತರಾಧ್ಯಯನ ವೃತ್ತಮ್ ಸಂಯೋಜಕರಾದ ರಜತ್ ಪಡ್ಕೆ ಹಾಗೂ ಗೌತಮಿ ಜಿ ಉಪಸ್ಥಿತರಿದ್ದರು.
ಹಂಸಿನಿ ಭಿಡೆ, ದರ್ಶಿನಿ, ಶ್ರೇಯಾ, ರುಜುಲಾ ಜೈನ್, ಧನಶ್ರೀ ಇವರಿಂದ ಭರತನಾಟ್ಯ, ವೈಷ್ಣವಿ ಭಟ್ ಹಾಗೂ ತಂಡ, ಪ್ರಸನ್ನಾ ಹಾಗೂ ತಂಡ, ಭಾರ್ಗವಿ ಭಟ್ ತಂಡದಿಂದ ಸಮೂಹ ಗಾಯನ, ವಸುಧಾ ಗಾಂವ್ಕರ್, ಸ್ತುತಿ ಹಾಗೂ ವಸುಧಾ ಅವರಿಂದ ಸಂಸ್ಕೃತ ಭಾಷೆಯ ಮಹತ್ವದ ಕುರಿತು ಭಾಷಣ ಹೀಗೆ ವೈವಿಧ್ಯ ಕಾರ್ಯಕ್ರಮಗಳು ನಡೆದವು.
ಸ್ಮರಣಶಕ್ತಿ ಸ್ಪರ್ಧೆಯಲ್ಲಿ ಸಂಚಿತ್, ಧನುಷ್.ಯು ಹಾಗೂ ಕೇದಾರ್ ಹೆಬ್ಬಾರ್ ಬಹುಮಾನ ಪಡೆದರು. ಸಮೂಹ ಗಾಯನ ಸ್ಪರ್ಧೆಯಲ್ಲಿ ವೈಷ್ಣವಿ ಭಟ್ ಬಳಗ, ಪ್ರಸನ್ನಾ ಹಾಗೂ ಬಳಗ, ಕೃತಿ ಹಾಗೂ ಬಳಗ ಬಹುಮಾನ ಪಡೆದರು.
ಕಾರ್ಯದರ್ಶಿ ಪ್ರಸನ್ನ ಸ್ವಾಗತಿಸಿ, ಶ್ರೀಪೂರ್ಣ ವಂದಿಸಿದರು. ಅಪೂರ್ವ ಬಹುಮಾನಿತರ ಪಟ್ಟಿ ವಾಚಿಸಿದರು. ಸುಮೇಧಾ ಗಾಂವ್ಕರ್ ನಿರೂಪಿಸಿದರು.