ಕೊಂಬೆಟ್ಟು ಸ.ಪ.ಕಾಲೇಜಿನ ವಿದ್ಯಾರ್ಥಿನಿಗೆ ಸಹಪಾಠಿ ವಿದ್ಯಾರ್ಥಿಯೋರ್ವ ಚೂರಿಯಿಂದ ಇರಿದಿರುವುದಾಗಿ ಆರೋಪಿಸಿ ಆಕೆ ಆಸ್ಪತ್ರೆಗೆ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ವಿದ್ಯಾರ್ಥಿನಿ ದೂರಿನಲ್ಲಿ ಆರೋಪಿಸಿದ್ದ ಅಪ್ರಾಪ್ತ ವಯಸ್ಕ ವಿದ್ಯಾರ್ಥಿ ಮತ್ತು ಆತನ ಸ್ನೇಹಿತನೋರ್ವನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದರು. ವಿದ್ಯಾರ್ಥಿನಿ ಮುಸ್ಲಿಂ ಸಮುದಾಯಕ್ಕೆ ಸೇರಿದ್ದು, ವಿದ್ಯಾರ್ಥಿ ಹಿಂದೂ ಧರ್ಮಕ್ಕೆ ಸೇರಿದ್ದ ವಿಚಾರ ಊರಿಡೀ ಹಬ್ಬಿ ಎರಡೂ ಸಮುದಾಯವರು ಜಮಾಯಿಸಿದ್ದರು.
ಆ.20ರ ಬೆಳಗ್ಗೆ ಪುತ್ತೂರು ಕಾಲೇಜು ರಸ್ತೆಯ ಕಾಲು ಸಂಕದ ಬಳಿ ತನ್ನ ಮೇಲೆ ಚೂರಿ ಇರಿತ ನಡೆದಿದೆ ಎಂದು ಪ್ರಥಮ ಪಿಯುಸಿ ವಿದ್ಯಾರ್ಥಿನಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಳು. ತನ್ನದೇ ಕಾಲೇಜಿನ ಸಹಪಾಠಿ ವಿದ್ಯಾರ್ಥಿ ಈ ಕೃತ್ಯ ಎಸಗಿರುವುದಾಗಿ ಆಕೆ ಪೊಲೀಸ್ ಹೇಳಿಕೆ ನೀಡಿದ್ದಳು. ಪ್ರಕರಣಕ್ಕೆ ಸಂಬಂಧಿಸಿ ವಿದ್ಯಾರ್ಥಿಯ ವಿಚಾರಣೆಯ ಸಂದರ್ಭದಲ್ಲಿ ಮೇಲ್ನೋಟಕ್ಕೆ ಆರೋಪ ಕಟ್ಟು ಕಥೆ ಅನ್ನುವ ಅಂಶ ಕಂಡು ಬಂದಿದ್ದು, ಹೀಗಾಗಿ ಪ್ರಕರಣದ ಹಿಂದಿನ ಅಸಲಿ ಸೂತ್ರಧಾರನಿಗೆ ಖಾಕಿ ಪಡೆ ಶೋಧ ನಡೆಸುತ್ತಿದೆ.
ವಿದ್ಯಾರ್ಥಿಗಳಿಬ್ಬರ ಜಗಳಕ್ಕೆ ಕೋಮು ಬಣ್ಣ ನೀಡಿರುವುದೇ ಪ್ರಕರಣ ಈ ಹಂತಕ್ಕೆ ತಲುಪಲು ಕಾರಣ ಎನ್ನುವ ಆರೋಪ ಕೇಳಿ ಬಂದಿದೆ. ಚೂರಿ ಇರಿತ ಎನ್ನುವ ಹೇಳಿಕೆಯ ಹಿಂದೆ ಯಾವುದಾದರೂ ಸಂಘಟನೆ, ವ್ಯಕ್ತಿಗಳ ಕೈವಾಡ ಇದೆಯೇ ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ಸೂತ್ರಧಾರನ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ.
ವಿದ್ಯಾರ್ಥಿನಿ ದೂರಿನ ಬಗ್ಗೆ ಸಮಗ್ರ ತನಿಖೆ ನಡೆಯುತ್ತಿದೆ. ತನಿಖೆಯಲ್ಲಿ ಹೊರಬರುವ ಸತ್ಯಾಸತ್ಯತೆಯನ್ನು ಆಧರಿಸಿ ಸಮಗ್ರ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್. ಹೇಳಿದ್ದಾರೆ. ಪುತ್ತೂರು ನಗರ ಠಾಣೆಗೆ ಭೇಟಿ ನೀಡಿದ ಅವರು ಬಳಿಕ ಪತ್ರಕರ್ತರ ಜತೆ ಮಾತನಾಡಿದರು. ಪುತ್ತೂರು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದೇವೆ. ತನಿಖೆ ಪ್ರಗತಿಯಲ್ಲಿದೆ. ಹಾಗಾಗಿ ಹೆಚ್ಚಿನ ವಿಚಾರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ಕಾನೂನಿನ ನೆಲೆಯಲ್ಲಿ ಪಾರದರ್ಶಕ ತನಿಖೆ ನಡೆಸಲಾಗುತ್ತಿದೆ. ತನಿಖೆ ಪೂರ್ಣಗೊಂಡ ಬಳಿಕ ಸತ್ಯಾಂಶ ಬಹಿರಂಗಗೊಳ್ಳಲಿದೆ ಎಂದರು.