ಉಪ್ಪಿನಂಗಡಿ ಇಲ್ಲಿನ ಹೊಸ ಬಸ್ ನಿಲ್ದಾಣದ ಬಳಿಯ ನೇತ್ರಾವತಿ ನದಿ ಸೇತುವೆ ಬದಿಯಲ್ಲಿ ಮಂಗಳವಾರ ಸಂಜೆ ದೊಡ್ಡ ಗಾತ್ರದ ಮೊಸಳೆಯೊಂದು ಕಂಡು ಬಂದಿದೆ. ನೇತ್ರಾವತಿ ಸೇತುವೆಯ ಇನ್ನೊಂದು ದಡ, ಇಳಂತಿಲ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ನದಿಯ ಬದಿಯ ಮರಳ ದಿಬ್ಬದಲ್ಲಿ ಮೊಸಳೆ ವಿರಮಿಸುತ್ತಿರುವುದನ್ನು ಇಳಂತಿಲ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ, ಸಾಮಾಜಿಕ ಕಾರ್ಯಕರ್ತ ಫಯಾಜ್ ಯು.ಟಿ.ಗಮನಿಸಿದ್ದು, ಅದರ ಫೋಟೊ ಕ್ಲಿಕ್ಕಿಸಿದ್ದಾರೆ.
ಮೊಸಳೆ ಕಂಡು ಬಂದ ಸುಮಾರು 500 ಮೀ. ದೂರದಲ್ಲಿ ನೇತ್ರಾವತಿ-ಕುಮಾರಧಾರ ನದಿಗಳು ಸಂಗಮವಾಗುತ್ತಿದ್ದು, ಅಲ್ಲೇ ಇರುವ ಸಹಸ್ರಲಿಂಗೇಶ್ವರ ದೇವಾಲಯದ ಬಳಿಯ ಸ್ನಾನಘಟ್ಟದಲ್ಲಿ ಪಿಂಡ ಪ್ರದಾನ ಕಾರ್ಯ, ತೀರ್ಥ ಸ್ನಾನಗಳು ನಿರಂತರವಾಗಿ ನಡೆಯುತ್ತಿವೆ. ಈ ಭಾಗದಲ್ಲಿ ನದಿಗೆ ಇಳಿದು ಮೀನು ಹಿಡಿಯಲು ಬಲೆ, ಗಾಳ ಹಾಕುವುದು ಸಾಮಾನ್ಯವಾಗಿದ್ದು, ಮೊಸಳೆ ಕಂಡು ಬಂದಿರುವುದು ಹಲವರ ಆತಂಕಕ್ಕೆ ಕಾರಣವಾಗಿದೆ.