ವಿಟ್ಲ: ಎರಡೂವರೆ ವರ್ಷಗಳ ಹಿಂದೆ ನಡೆದ ಸಹೋದರನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ಮತ್ತು 50,000 ರೂ. ದಂಡ ವಿಧಿಸಿದೆ.
ಕನ್ಯಾನ ಗ್ರಾಮದ ನಂದರಬೆಟ್ಟು ಐತಪ್ಪ ನಾಯ್ಕ ಜೀವಾವಧಿ ಶಿಕ್ಷೆಗೆ ಒಳಗಾದ ಆರೋಪಿ. 2022ರ ಮೇ 10ರಂದು ಐತಪ್ಪ ನಾಯ್ಕ ಮತ್ತು ಆತನ ತಮ್ಮ ಬಾಳಪ್ಪ ನಾಯ್ಕ ಅವರ ನಡುವೆ ಯಾವುದೋ ವಿಷಯಕ್ಕೆ ಸಂಬಂಧಿಸಿದಂತೆ ಮಾತಿಗೆ ಮಾತು ಬೆಳೆದಿತ್ತು. ಈ ಸಂದರ್ಭದಲ್ಲಿ ಐತಪ್ಪ ನಾಯ್ಕ ಸಹೋದರ ಬಾಳಪ್ಪ ನಾಯ್ಕ ಅವರಿಗೆ ಮರದ ದೊಣ್ಣೆಯಿಂದ ತಲೆ ಹಾಗೂ ಶರೀರದ ಇತರ ಭಾಗಗಳಿಗೆ ಹೊಡೆದ ಕಾರಣ ಅವರು ಮೃತಪಟ್ಟಿದ್ದರು. ಈ ಕುರಿತು ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖಾಧಿಕಾರಿ ಎಚ್.ಇ.ನಾಗರಾಜ್ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿ ಸಾಕ್ಷ್ಯಾಧಾರ ಸಂಗ್ರಹಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣ ತನಿಖಾ ಸಮಯ ಹೆಡ್ ಕಾನ್ ಸ್ಟೇಬಲ್ ಜಯರಾಮ್ ಹಾಗೂ ನ್ಯಾಯಾಲಯ ವಿಚಾರಣೆ ಸಮಯದಲ್ಲಿ ಕಾನ್ ಸ್ಟೇಬಲ್ ಮಂಜುನಾಥ ಕರ್ತವ್ಯ ನಿರ್ವಹಿಸಿದ್ದರು.
ಸರಕಾರಿ ಅಭಿಯೋಜಕ ಹರಿಶ್ಚಂದ್ರ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು. ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಸುನಿತಾ ಎಸ್.ಜಿ. ಆರೋಪಿಗೆ ಶಿಕ್ಷೆ ಮತ್ತು ದಂಡ ವಿಧಿಸಿದರು.