ನಿಯಂತ್ರಣ ತಪ್ಪಿ ಹೊಂಡಕ್ಕೆ ಉರುಳಿ ಬಿದ್ದ ಕೆಎಸ್‌ಆರ್‌ಟಿಸಿ ಬಸ್ಸು;13 ಮಂದಿಗೆ ಗಾಯ

ಶೇರ್ ಮಾಡಿ

ಬಿ.ಸಿ.ರೋಡು-ಪುಂಜಾಲಕಟ್ಟೆ ಹೆದ್ದಾರಿಯ ವಗ್ಗ ಸಮೀಪದ ಕೊಪ್ಪಳ ಬಳಿ ಧರ್ಮಸ್ಥಳದಿಂದ ಮಂಗಳೂರಿಗೆ ಆಗಮಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಬದಿಯ ಹೊಂಡಕ್ಕೆ ಉರುಳಿ ಬಿದ್ದ ಘಟನೆ ಸೋಮವಾರ ಸಂಜೆ ನಡೆದಿದೆ.

ಬಸ್ಸಿನಲ್ಲಿ ಸುಮಾರು 50 ಮಂದಿ ಪ್ರಯಾಣಿಕರಿದ್ದು, 13 ಮಂದಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಕರೆತರಲಾಗಿದ್ದು, ತಲೆ ಹಾಗೂ ಬೆನ್ನುಮೂಲೆ ಗಾಯಗೊಂಡಿರುವ ತನುಶ್ರೀ(17), ಶಾಕೀರ್‌(32), ಶೋಭಾ ಶೆಟ್ಟಿ(48), ಕಸ್ತೂರಿ(68) ಹಾಗೂ ವಿಶ್ವನಾಥ(70) ಅವರನ್ನು ಮಂಗಳೂರು ಆಸ್ಪತ್ರೆಗೆ ಸಾಗಿಸಲಾಗಿದೆ.

ಉಳಿದಂತೆ ಸಣ್ಣಪುಟ್ಟ ಗಾಯಗೊಂಡಿರುವ ಪವನ್‌(30), ನಿಖೀತ(29), ಸುಧಾಮ(23), ಹೇಮಾವತಿ(43), ರಾಜಶ್ರೀ(27), ಹೇಮಲತಾ(40), ಶಿಲ್ಪಾ(16) ಹಾಗೂ ಸ್ವಾತಿ(16) ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ ಎಂದು ಬಂಟ್ವಾಳ ಆಸ್ಪತ್ರೆಯ ಮೂಲಗಳು ತಿಳಿಸಿದೆ.

ಬಸ್ಸು ಸಂಪೂರ್ಣ ಮಗುಚಿ ಬಿದ್ದ ಕಾರಣ ಅದರೊಳಗಿದ್ದ ಪ್ರಯಾಣಿಕರಿಗೆ ಹೊರ ಬರಲು ಸಾಧ್ಯವಾಗದೆ ಇದ್ದು, ಬಳಿಕ ಸ್ಥಳೀಯರ ನೆರವಿನಿಂದ ಪ್ರಯಾಣಿಕರು ಹೊರಬಂದರು.

ಬಸ್ಸು ವೇಗವಾಗಿ ಸಂಚರಿಸುತ್ತಿದ್ದು, ಈ ವೇಳೆ ಯಾವುದೇ ವಾಹನ ಅಡ್ಡ ಬಂತ್ತೆಂದು ಚಾಲಕ ಬ್ರೇಕ್‌ ಹಾಕಿದ್ದು, ಈ ವೇಳೆ ಬಸ್ಸು ಏಕಾಏಕಿ ಹೆದ್ದಾರಿಯ ಅಂಚಿಗೆ ಸಂಚರಿಸಿ ಪಲ್ಟಿ ಹೊಡೆದಿದೆ ಎಂದು ಬಸ್ಸು ಚಾಲಕ ಹೇಳಿರುವುದಾಗಿ ಸಂಚಾರ ಪೊಲೀಸರು ತಿಳಿಸಿದ್ದಾರೆ. ಬಸ್ಸಿನ ಟಯರ್‌ ಸವೆದು ಬ್ರೇಕ್‌ ಸಿಗದೆ ಬಸ್ಸು ಪಲ್ಟಿಯಾಗಿದೆ ಎಂದು ಸ್ಥಳೀಯ ಒಂದಷ್ಟು ಮಂದಿ ಆರೋಪಿಸಿದ್ದಾರೆ. ಆದರೆ ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ಘಟನಾ ಸ್ಥಳಕ್ಕೆ ಬಂಟ್ವಾಳ ಸಂಚಾರ ಠಾಣಾ ಪಿಎಸ್‌ಐ ಸುತೇಶ್‌ ಕೆ.ಪಿ. ಭೇಟಿ ನೀಡಿ ಪರಿಶೀಲಿಸಿದ್ದು, ಬಳಿಕ ಕ್ರೇಮ್‌ ಮೂಲಕ ಬಸ್ಸನ್ನು ತೆರವು ಮಾಡಲಾಯಿತು. ಈ ವೇಳೆ ಕೆಲಹೊತ್ತು ಹೆದ್ದಾರಿಯಲ್ಲಿ ಸಂಚಾರದೊತ್ತಡ ಉಂಟಾಗಿತ್ತು ಎನ್ನಲಾಗಿದೆ.

ಘಟನೆಯ ಕುರಿತು ಬಂಟ್ವಾಳ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

error: Content is protected !!