4.40 ಲಕ್ಷ ರೂ.ನಿವ್ವಳ ಲಾಭ; ಶೇ.25 ಡಿವಿಡೆಂಡ್, ಪ್ರತಿ ಲೀ.ಹಾಲಿಗೆ 76 ಪೈಸೆ ಬೋನಸ್ ಘೋಷಣೆ
ನೆಲ್ಯಾಡಿ: ಗೋಳಿತ್ತೊಟ್ಟು ಹಾಲು ಉತ್ಪಾದಕರ ಸಹಕಾರಿ ಸಂಘದ 2023-24ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಸೆ.21ರಂದು ಗೋಳಿತ್ತೊಟ್ಟು ಶ್ರೀ ಸಿದ್ಧಿವಿನಾಯಕ ಕಲಾಮಂದಿರದಲ್ಲಿ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಕೊರಗಪ್ಪ ಗೌಡ ಕೆ. ಅವರು ಮಾತನಾಡಿ, ವರ್ಷದ ಅಂತ್ಯಕ್ಕೆ ಸಂಘದಲ್ಲಿ 251 ಸದಸ್ಯರಿದ್ದು 51,425 ಪಾಲು ಬಂಡವಾಳವಿದೆ. ದಿನವಹಿ 900 ಲೀ.ಹಾಲು ಸಂಗ್ರಹಣೆಯಾಗುತ್ತಿದ್ದು 4 ರಿಂದ 6ಲೀ.ರಷ್ಟು ಸ್ಥಳೀಯವಾಗಿ ಮಾರಾಟ ಮಾಡುತ್ತಿದ್ದು ಉಳಿಕೆ ಹಾಲು ದ.ಕ.ಸಹಕಾರಿ ಹಾಲು ಒಕ್ಕೂಟಕ್ಕೆ ಮಾರಾಟವಾಗುತ್ತಿದೆ. ವರದಿ ಸಾಲಿನಲ್ಲಿ 2,75,973.5 ಲೀ.ಹಾಲು ಸಂಗ್ರಹಿಸಿ 95,39,944.59 ರೂ.ಉತ್ಪಾದಕರಿಗೆ ಪಾವತಿಸಲಾಗಿದೆ. ಹಾಲು ಉತ್ಪಾದಕರಿಗೆ ಸಂಘದ ಮೂಲಕ ನಂದಿನಿ ಪಶು ಆಹಾರ, ಲವಣ ಮಿಶ್ರಣವು ಮಾರಾಟ ಮಾಡಲಾಗುತ್ತಿದೆ. ಹಾಲು ವ್ಯಾಪಾರ ಮತ್ತು ಲವಣ ಮಿಶ್ರಣ ಮಾರಾಟದಿಂದ ಸಂಘಕ್ಕೆ 4,40,733.99 ರೂ.ನಿವ್ವಳ ಲಾಭ ಬಂದಿದೆ. ಲಾಭಾಂಶದಲ್ಲಿ ಸಂಘದ ಸದಸ್ಯರಿಗೆ ಶೇ.25 ಡಿವಿಡೆಂಡ್ ಹಾಗೂ ಪ್ರತೀ ಲೀಟರ್ ಹಾಲಿಗೆ 76 ಪೈಸೆಯಂತೆ ಬೋನಸ್ ನೀಡಲಾಗುವುದು ಎಂದು ಹೇಳಿದರು. ಸಂಘದ ಮೂಲಕ ರಾಸುಗಳಿಗೆ ಜಂತುಹುಳದ ನಿವಾರಣಾ ಔಷಧಿ ವಿತರಣೆ, ಕೃತಕ ಗರ್ಭಧಾರಣೆ, ಹೆಣ್ಣು ಕರುವಿನ ಯೋಜನೆ ಸೌಲಭ್ಯ ಸದಸ್ಯರು ಪಡೆದುಕೊಳ್ಳುವಂತೆ ಹೇಳಿದ ಕೊರಗಪ್ಪ ಗೌಡ ಅವರು, ಸದಸ್ಯರು ಸಂಘಕ್ಕೆ ಉತ್ತಮ ಗುಣಮಟ್ಟದ ಹಾಲು ಪೂರೈಸುವ ಮೂಲಕ ಸಂಘವನ್ನು ಬಲಪಡಿಸಬೇಕು. ಸಂಘದ ಸದಸ್ಯರಿಗೆ ಇನ್ನೂ ಹೆಚ್ಚಿನ ರೀತಿಯ ಸೌಲಭ್ಯ ಕಲ್ಪಿಸಲಾಗುವುದು ಎಂದು ಹೇಳಿದರು.
ವಿಸ್ತರಣಾಧಿಕಾರಿ ಆದಿತ್ಯ ಸಿ.ಅವರು ಒಕ್ಕೂಟದಿಂದ ಸದಸ್ಯರಿಗೆ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ರಾಸುಗಳಿಗೆ ಪಶು ಆಹಾರ ಬಳಸುವ ಕ್ರಮ, ಸೈಲೇಜ್ ಬಗ್ಗೆ ಮಾಹಿತಿ ನೀಡಿ ಒಳ್ಳೆಯ ಗುಣಮಟ್ಟದ ಹಾಲು ಸಂಘಕ್ಕೆ ನೀಡುವಂತೆ ಅವರು ಹೇಳಿದರು. ದ.ಕ.ಹಾಲು ಒಕ್ಕೂಟದ ಪಶುವೈದ್ಯಾಧಿಕಾರಿ ಡಾ.ಜಿತೇಂದ್ರ ಪ್ರಸಾದ್ ಅವರು, ಜಾನುವಾರು ವಿಮೆ ಬಗ್ಗೆ ಮಾಹಿತಿ ನೀಡಿ ಸದಸ್ಯರಿಗೆ ಮನೆ ಔಷಧಿ ಪುಸ್ತಕ ವಿತರಿಸಿದರು.
ಬಹುಮಾನ ವಿತರಣೆ:
2023-24ನೇ ಸಾಲಿನಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲು ಸರಬರಾಜು ಮಾಡಿದ ಸದಸ್ಯರಿಗೆ ಬಹುಮಾನ ನೀಡಿ ಗೌರವಿಸಲಾಯಿತು. 12,320 ಲೀ. ಹಾಲು ಸರಬರಾಜು ಮಾಡಿದ ಕುಶಾಲಪ್ಪ ಗೌಡ ಕೊಂಬ್ಯಾನ ಪ್ರಥಮ, 7066 ಲೀ.ಹಾಲು ಸರಬರಾಜು ಮಾಡಿದ ದಯಾನಂದ ಡೆಬ್ಬೇಲಿ ದ್ವಿತೀಯ ಹಾಗೂ 6288 ಲೀ.ಹಾಲು ಸರಬರಾಜು ಮಾಡಿದ ವಿನೋದ ಅಂಬರ್ಜೆ ತೃತೀಯ ಬಹುಮಾನ ಪಡೆದುಕೊಂಡರು. ಉಳಿದ ಸದಸ್ಯರಿಗೆ ಪ್ರೋತ್ಸಾಹಕ ಬಹುಮಾನ ನೀಡಲಾಯಿತು.
ವಿದ್ಯಾರ್ಥಿಗಳಿಗೆ ಪ್ರೋತ್ಸಾಹ:
ಕಳೆದ ಸಾಲಿನ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದುಕೊಂಡ ಸಂಘದ ಸದಸ್ಯರ ಮಕ್ಕಳಾದ ಮಧುರಾ ಡಿ.ಎಲ್., ಲಿತೇಶ್, ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದುಕೊಂಡ ಚಿಂತನ ಕುಡಾಲ, ವರ್ಷಿತ ಅವರಿಗೆ ಪ್ರೋತ್ಸಾಹಕ ಬಹುಮಾನ ನೀಡಿ ಗೌರವಿಸಲಾಯಿತು.
ಸಂಘದ ಉಪಾಧ್ಯಕ್ಷ ಜನಾರ್ದನ ಪಟೇರಿ, ನಿರ್ದೇಶಕರಾದ ನೋಣಯ್ಯ ಅಂಬರ್ಜೆ, ಹೇಮಲತಾ ತಿರ್ಲೆ, ಕೆ.ಕುಶಾಲಪ್ಪ ಗೌಡ ಕೊಂಬ್ಯಾನ, ರಮೇಶ ಕೆ.ಬಿ.ಕೊಂಕೋಡಿ, ಶಶಿಧರ ಪಟೇರಿ, ಎ.ಕುಶಾಲಪ್ಪ ಗೌಡ ಅನಿಲ, ವಿಶ್ವನಾಥ ಮೂಲ್ಯ ನೆಕ್ಕರೆ, ಮೀನಾಕ್ಷಿ ಆಲಂತಾಯ, ಹರೀಶ ನಾಯ್ಕ ತಿರ್ಲೆ, ಭಾರತಿ ಎಸ್.ಪುಳಿತ್ತಡಿ, ರಾಜೀವಿ ಬೊಟ್ಟಿಮಜಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಘದ ಕಾರ್ಯದರ್ಶಿ ಪದ್ಮನಾಭ ಭಟ್ ಕೆ.ವರದಿ ವಾಚಿಸಿದರು. ನಿರ್ದೇಶಕರಾದ ರಮೇಶ್ ಕೆ.ಬಿ. ಕೊಂಕೋಡಿ ಸ್ವಾಗತಿಸಿ, ನೋಣಯ್ಯ ಪೂಜಾರಿ ಅಂಬರ್ಜೆ ವಂದಿಸಿದರು. ಜಯಂತ ಅಂಬರ್ಜೆ ನಿರೂಪಿಸಿದರು. ನಿರ್ದೇಶಕಿ ಹೇಮಲತಾ ತಿರ್ಲೆ ಪ್ರಾರ್ಥಿಸಿದರು. ಹಾಲು ಪರೀಕ್ಷಕ ಧನಂಜಯ ಎ.,ಸಹಕರಿಸಿದರು.