ನೆಲ್ಯಾಡಿಯ ವಿವಿ ಘಟಕ ಕಾಲೇಜುನ ಎನ್.ಎಸ್.ಎಸ್, ಯುವ ರೆಡ್ ಕ್ರಾಸ್ ಘಟಕ ಹಾಗೂ ಇತಿಹಾಸ ಸಂಘದ ವತಿಯಿಂದ ನೆಲ್ಯಾಡಿ ಗ್ರಾಮ ಪಂಚಾಯಿತಿ ಹಾಗೂ ನೆಲ್ಯಾಡಿ ಕೌಕ್ರಾಡಿ ವರ್ತಕ ಹಾಗೂ ಕೈಗಾರಿಕಾ ಸಂಘ ಇವರ ಸಹಯೋಗದಲ್ಲಿ ನೆಲ್ಯಾಡಿ ಗಾಂಧಿ ಮೈದಾನದ ಆವರಣದಲ್ಲಿ ಗಾಂಧಿ ಜಯಂತಿ ಆಚರಣೆ ಹಾಗೂ ಜಯಂತಿ ಪ್ರಯುಕ್ತ ನೆಲ್ಯಾಡಿ ಪೇಟೆಯಲ್ಲಿ ಸ್ವಚ್ಛತಾ ಜಾಗೃತಿ ಜಾಥಾ ಹಾಗೂ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಯಿತು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೋಹನ್ ಗೌಡ, ನೆಲ್ಯಾಡಿ ಕೌಕ್ರಾಡಿ ವರ್ತಕ ಹಾಗೂ ಕೈಗಾರಿಕಾ ಸಂಘದ ಅಧ್ಯಕ್ಷ ಸತೀಶ್.ಕೆ.ಎಸ್ ಹಾಗೂ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಸೀತಾರಾಮ.ಪಿ. ಅವರು ಮಹಾತ್ಮ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೋಹನ್ ಗೌಡ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ಗಾಂಧಿಯವರ ಸರಳತೆ, ಸ್ವಚ್ಛತೆಯೊಂದಿಗಿನ ಸ್ವಾಸ್ಥ ಬದುಕನ್ನು ಅಳವಡಿಸಿಕೊಳ್ಳುವುದು ಇಂದಿನ ಯುವ ಸಮುದಾಯದ ಜವಾಬ್ದಾರಿಯಾಗಿದೆ. ಗ್ರಾಮದ ಉದ್ಧಾರದ ಮೂಲಕ ದೇಶದ ಉದ್ಧಾರ ಎಂಬ ಗಾಂಧೀಜಿಯವರ ಆಶಯದಂತೆ ನೆಲ್ಯಾಡಿ ಗ್ರಾಮದ ಪರಿಸರದ ಸ್ವಾಸ್ಥ್ಯಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು.
ವರ್ತಕರ ಸಂಘದ ಅಧ್ಯಕ್ಷ ಸತೀಶ್.ಕೆ.ಎಸ್ ಅವರು ಮಾತನಾಡುತ್ತಾ ಗಾಂಧಿಯವರ ಅಹಿಂಸಾ ತತ್ವ, ಸತ್ಯಾಗ್ರಹದ ಪರಿಕಲ್ಪನೆಯ ಸದುದ್ದೇಶಗಳನ್ನು ಚೆನ್ನಾಗಿ ಅರಿತುಕೊಂಡು ಸ್ವಾತಂತ್ರ್ಯ ಹೋರಾಟದ ಪ್ರತಿಫಲವನ್ನು ಸದುಪಯೋಗಪಡಿಸಿಕೊಳ್ಳುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ. ಸ್ವಚ್ಛ, ಸುಂದರ ಬದುಕಿಗೆ ಅವರು ಹಾಕಿಕೊಟ್ಟ ಮಾರ್ಗಗಳನ್ನು ಅನುಸರಿಸಿ ಯಶಸ್ವಿಗೊಳ್ಳುವುದು ಮುಖ್ಯ ಸಂಗತಿಯಾಗಿದೆ ಎಂದರು.
ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಸೀತಾರಾಮ.ಪಿ. ಅವರು ಮಾತನಾಡುತ್ತಾ ಮಹಾತ್ಮ ಗಾಂಧಿಯವರು ನೀಡಿರುವ ಸತ್ಯ, ನ್ಯಾಯ, ಅಹಿಂಸಾತ್ಮಕ ಶಾಂತಿಯುತ ಸತ್ಯಾಗ್ರಹದ ಪರಿಕಲ್ಪನೆಯನ್ನು ಇಂದಿನ ಯುವ ಸಮುದಾಯವು ಚೆನ್ನಾಗಿ ಅರಿತುಕೊಳ್ಳುವುದು ಮುಖ್ಯವಾಗಿದೆ. ಹಲವು ವೈರುಧ್ಯಗಳ ಮಧ್ಯೆ ಗಾಂಧಿಯವರ ಕೊಡುಗೆಯು ವಿಶ್ವಾತ್ಮಕವಾಗಿ ವಿಶ್ವಕ್ಕೆ ವಿಸ್ತರಿಸಿದೆ. ವಿಶ್ವಸಂಸ್ಥೆಯು ಗಾಂಧಿಯವರ ಅಹಿಂಸಾ ತತ್ವದ ಮಹತ್ವವನ್ನು ಅರಿತು ಪ್ರತಿವರ್ಷ ಅ.02ರಂದು ಅಂತರಾಷ್ಟ್ರೀಯ ಅಹಿಂಸಾ ದಿನದ ಆಚರಣೆಗೆ ಕರೆ ನೀಡಿದೆ. ಭಾರತದ ಸ್ವಾತಂತ್ರ್ಯ ಹೋರಾಟದ ಜೊತೆಗೆ ಗ್ರಾಮಗಳ ಅಭಿವೃದ್ಧಿಗೆ ಎದುರಾಗುವ ಸವಾಲುಗಳು ಮತ್ತು ಜಾತಿ, ಲಿಂಗ ತಾರತಮ್ಯಗಳಂತಹ ಸಮಸ್ಯೆಗಳಿಗೆ ಮಹಾತ್ಮ ಗಾಂಧಿ ನೀಡಿರುವ ಪರಿಹಾರೋಪಾಯ ಮಾರ್ಗಗಳು ತುಂಬಾ ಮಹತ್ವದ್ದಾಗಿವೆ ಎಂದರು.
ಕಾರ್ಯಕ್ರಮದ ನಂತರ ಕಾಲೇಜಿನ ಎನ್.ಎಸ್.ಎಸ್ ಹಾಗೂ ಯುವ ರೆಡ್ ಕ್ರಾಸ್ ಘಟಕದ ವತಿಯಿಂದ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಗ್ರಾಮ ಸ್ವಚ್ಛತಾ ಜಾಗೃತಿ ಜಾಥಾ ಹಾಗೂ ಸ್ವಚ್ಛತಾ ಅಭಿಯಾನಕ್ಕೆ ಎನ್.ಎಸ್.ಎಸ್ ಘಟಕದ ಸಂಯೋಜನಾಧಿಕಾರಿ ಶ್ರುತಿ ಅವರು ಚಾಲನೆ ನೀಡಿದರು. ವಿದ್ಯಾರ್ಥಿಗಳು ಸ್ವಚ್ಛತಾ ಜಾಗೃತಿ ಜಾಥಾದಲ್ಲಿ ಉತ್ಸಾಹದಿಂದ ಪಾಲ್ಗೊಂಡು ಸ್ವಚ್ಛತೆಯ ನೈರ್ಮಲ್ಯಯುಕ್ತ ಗ್ರಾಮ ನಿರ್ಮಾಣಕ್ಕೆ ಘೋಷಣೆಗಳ ಮೂಲಕ ಜಾಗೃತಿ ಮೂಡಿಸಿ, ನೆಲ್ಯಾಡಿ ಪೇಟೆಯ ಸ್ವಚ್ಛತಾ ಅಭಿಯಾನ ಮಾಡಿದರು.
ಯುವ ರೆಡ್ ಕ್ರಾಸ್ ಘಟಕದ ಕಾರ್ಯಕ್ರಮ ಅಧಿಕಾರಿ ಡಾ.ನೂರಂದಪ್ಪ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ನೆಲ್ಯಾಡಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಅಂಗು, ಶಿವಪ್ರಸಾದ್ ಹಾಗೂ ಸಿಬ್ಬಂದಿ ವರ್ಗ, ವರ್ತಕರ ಸಂಘದ ಕಾರ್ಯದರ್ಶಿ ಪ್ರಶಾಂತ್.ಸಿ.ಎಚ್, ಸದಸ್ಯರಾದ ಥಾಮಸ್, ದಿನೇಶ್ ಹಾಗೂ ವಿವಿ ಘಟಕ ಕಾಲೇಜಿನ ಉಪನ್ಯಾಸಕರಾದ ಸಚಿನ್ ಎನ್.ಟಿ, ಡಾ.ಸಿದ್ದಯ್ಯ, ವೆರೊಣಿಕ ಪ್ರಭ ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.