ನೇಸರ ಫೆ.27:ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದಡಿ ಸುಮಾರು 15 ಕೋಟಿ ರೂ., ವೆಚ್ಚದಲ್ಲಿ ಶಿರಾಡಿ ಹಾಗೂ ಕೊಣಾಜೆ ಗ್ರಾಮ ಸಂಪರ್ಕಿಸಲು ಉದನೆಯಲ್ಲಿ ಗುಂಡ್ಯ ಹೊಳೆಗೆ ಅಡ್ಡವಾಗಿ ನಿರ್ಮಾಣಗೊಂಡಿರುವ ಉದನೆ ಸೇತುವೆ ಫೆ.26ರಂದು ಲೋಕಾರ್ಪಣೆಗೊಂಡಿತು.ಬಂದರು, ಮೀನುಗಾರಿಕೆ ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರರವರು ನೂತನ ಸೇತುವೆಯನ್ನು ರಿಬ್ಬನ್ ಕತ್ತರಿಸುವ ಮೂಲಕ ಲೋಕಾರ್ಪಣೆಗೊಳಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಸೇತುವೆ ನಿರ್ಮಾಣದ ಹಾದಿಯ ಬಗ್ಗೆ ಮಾತನಾಡಿದರು. ಉದನೆ-ಶಿಬಾಜೆ ಸಂಪರ್ಕ ರಸ್ತೆಯ ಬಾಕಿ ಇರುವ ಕೆಲಸ ಮಾಡುವ ಬಗ್ಗೆ ಗಮನಹರಿಸಲಾಗುವುದು ಎಂದರು.ಸುಮಾರು 5 ವರ್ಷಗಳ ಸುದೀರ್ಘ ಕಾಮಗಾರಿಯ ಬಳಿಕ 150 ಮೀ ಉದ್ದ ಹಾಗೂ 10.5 ಮೀ ಅಗಲದ 4 ಪಿಲ್ಲರ್ ಗಳ ಬೃಹತ್ ಸೇತುವೆ ಇದಾಗಿದೆ. ಸೇತುವೆಯ ಕಾಮಗಾರಿಯನ್ನು ಲೂಫ್ ಕನ್ಸ್ಟ್ರಕ್ಷನ್ ಕಂಪನಿ ಗುತ್ತಿಗೆ ಪಡೆದು ನಿರ್ಮಾಣ ಕಾರ್ಯ ಪೂರ್ಣಗೊಳಿಸಿದೆ.
ಕಡ್ಯ ಕೊಣಾಜೆ ಗ್ರಾಮ ಪಂಚಾಯತಿ ಅಧ್ಯಕ್ಷ ಶಿವಪ್ಪ ಗೌಡ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪಿಎಲ್.ಡಿ ಬ್ಯಾಂಕ್ ಅಧ್ಯಕ್ಷ ಭಾಸ್ಕರ ಎಸ್. ಗೌಡ, ಎಪಿಎಂಸಿ ನಿರ್ದೇಶಕ ಬಾಲಕೃಷ್ಣ ಬಾಣಜಾಲು, ಲೂಫ್ ಕನ್ ಸ್ಟ್ರಕ್ಟರ್ ಮಾಲಕ ಸಯ್ಯದ್ ಇಸ್ಮಾಯಿಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸೈಯದ್ ಇಸ್ಮಾಯಿಲ್ ಅವರನ್ನು ಸನ್ಮಾನಿಸಲಾಯಿತು.ಜಯಂತ್ ಗೌಡ ಪುತ್ತಿಗೆ ಸ್ವಾಗತಿಸಿ, ಕಿಶೋರ್ ಶಿರಾಡಿ ವಂದಿಸಿದರು. ನೂಜಿಬಾಳ್ತಿಲ ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷ ಕಿಟ್ಟು ಕಲ್ಲುಗುಡ್ಡೆ ಕಾರ್ಯಕ್ರಮ ನಿರೂಪಿಸಿದರು.
ಉದನೆಯಲ್ಲಿ ಗುಂಡ್ಯ ಹೊಳೆ ದಾಟಲು ಸೇತುವೆ ನಿರ್ಮಾಣ ಆಗಬೇಕೆಂಬುದು ಈ ಭಾಗದ ಜನರ ಬಹು ವರ್ಷಗಳ ಕನಸು ಆಗಿದೆ. ಶಿರಾಡಿ, ಉದನೆ ಭಾಗದ ಜನರು ತಾಲೂಕು ಕೇಂದ್ರ ಆಗಿರುವ ಕಡಬ ಸಂಪರ್ಕಿಸಲು ಪೆರಿಯಶಾಂತಿ, ಇಚಿಲಂಪಾಡಿ ಮಾರ್ಗವಾಗಿ ಕ್ರಮಿಸಬೇಕಿತ್ತು. ಇದರಿಂದ ಜನರ ಹಣ, ಸಮಯ ವ್ಯರ್ಥವಾಗುತಿತ್ತು. ಈ ಹಿನ್ನೆಲೆಯಲ್ಲಿ ಉದನೆಯಲ್ಲಿ ಸೇತುವೆ ಆಗಬೇಕೆಂಬ ಕೂಗು ಹಲವು ವರ್ಷಗಳಿಂದಲೇ ಕೇಳಿ ಬಂದಿತ್ತು. ಜನರ ಬೇಡಿಕೆಯಂತೆ 2017ರಲ್ಲಿ ಇಲ್ಲಿ ಸೇತುವೆ ನಿರ್ಮಾಣಕ್ಕೆ ಆಗಿನ ಸಚಿವ ಬಿ.ರಮಾನಾಥ ರೈಯವರು ಶಿಲಾನ್ಯಾಸ ನೆರವೇರಿಸಿದ್ದರು.2018ರಲ್ಲಿ ಸೇತುವೆ ನಿರ್ಮಾಣ ಕೆಲಸ ಆರಂಭಗೊಂಡಿತ್ತು. ಇದೀಗ ಬರೋಬ್ಬರಿ 5 ವರ್ಷಗಳ ಬಳಿಕ 10.5 ಮೀ.ಅಗಲ ಹಾಗೂ 150 ಮೀ.,ಉದ್ದದ ಸುಸಜ್ಜಿತ ಸೇತುವೆ ನಿರ್ಮಾಣಗೊಂಡಿದೆ. ಇನ್ನು ಮುಂದೆ ಈ ಸೇತುವೆಯನ್ನು ಬಳಸಿ ಉದನೆಯಿಂದ ಕಲ್ಲುಗುಡ್ಡೆ ಮಾರ್ಗವಾಗಿ ಕಡಬವನ್ನು ಸಂಪರ್ಕಿಸಬಹುದಾಗಿದೆ.