ಹುಟ್ಟು ಹಬ್ಬದ ಔತಣಕೂಟಕ್ಕಾಗಿ ಕಡವೆ ಬೇಟೆ!: ಕೋವಿ, ಮಾಂಸ ವಶ

ಶೇರ್ ಮಾಡಿ

ನೆಲ್ಯಾಡಿ: ಮಗನ ಹುಟ್ಟು ಹಬ್ಬದ ಔತಣಕೂಟಕ್ಕಾಗಿ ಕಡವೆಯನ್ನು ಗುಂಡಿಕ್ಕಿ ಕೊಂದ ಮಾಂಸವನ್ನು ಮನೆಯ ಫ್ರಿಡ್ಜ್ ನಲ್ಲಿ ದಾಸ್ತಾನು ಇರಿಸಲಾದ ಪ್ರಕರಣವನ್ನು ಉಪ್ಪಿನಂಗಡಿ ವಲಯಾರಣ್ಯಾಧಿಕಾರಿಗಳ ತಂಡ ಪತ್ತೆ ಹಚ್ಚಿ ಹತ್ಯೆಗೆ ಬಳಸಲಾದ ಕೋವಿ ಮತ್ತು ಕಡವೆ ಮಾಂಸವನ್ನು ಸ್ವಾಧೀನಪಡಿಸಿಕೊಂಡ ಘಟನೆ ವರದಿಯಾಗಿದೆ.

ಕಡಬ ತಾಲೂಕು ಶಿರಾಡಿ ಗ್ರಾಮದ ಗುಂಡ್ಯ ನಿವಾಸಿ ಸುರೇಶ್ ಮತ್ತವರ ಹಾಗೂ ಆತನ ಮಗ ಶರತ್ ರಕ್ಷಿತಾರಣ್ಯದಲ್ಲಿದ್ದ ಕಡವೆಯೊಂದಕ್ಕೆ ಗುಂಡಿಕ್ಕಿ ಹತ್ಯೆಗೈದಿದ್ದರು. ಅದನ್ನು ಮಗನ ಹುಟ್ಟು ಹಬ್ಬದ ಔತಣ ಕೂಟಕ್ಕೆಂದು ಮಾಂಸ ಮಾಡಿ ಮನೆಯ ಫ್ರಿಡ್ಜ್ ನಲ್ಲಿ ಇರಿಸಿದ್ದರು.

ಈ ಬಗ್ಗೆ ಮಾಹಿತಿ ಪಡೆದ ಉಪ್ಪಿನಂಗಡಿ ವಲಯಾರಣ್ಯಾಧಿಕಾರಿಗಳ ನಿರ್ದೇಶನದ ಮೇರೆಗೆ ಉಪವಲಯಾರಣ್ಯಾಧಿಕಾರಿ ಯತೀಂದ್ರ, ಅರಣ್ಯ ರಕ್ಷಕರಾದ ಸುನಿಲ್, ಶಿವಾನಂದ ಕುದುರಿ ಅವರ ತಂಡ ಸುರೇಶ್ ಮನೆಗೆ ದಾಳಿ ನಡೆಸಿ ಸಂಗ್ರಹಿಸಿಟ್ಟ ಸುಮಾರು 4ಕೆಜಿ ಅಷ್ಟು ಮಾಂಸ ಹಾಗೂ ಹತ್ಯೆಗೆ ಬಳಸಲಾದ ಕೋವಿಯನ್ನು ವಶಪಡಿಸಿಕೊಂಡು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಕಾರ್ಯಾಚರಣೆ ವೇಳೆ ಆರೋಪಿಗಳು ಗುಂಡ್ಯ ಹೊಳೆಯನ್ನು ಈಜಿ ದಾಟುವ ಮೂಲಕ ಪರಾರಿಯಾಗಿದ್ದಾರೆ. ವಲಯಾಧಿಕಾರಿಯಿಂದ ತನಿಖೆ ಉಪ್ಪಿನಂಗಡಿ ವಲಯಾರಣ್ಯಾಧಿಕಾರಿ ರಾಘವೇಂದ್ರ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

Leave a Reply

error: Content is protected !!