ಖಾತೆದಾರ ಮಹಿಳೆ ಹಣ ತೆಗೆಯಲು ಬ್ಯಾಂಕಿಗೆ ಬಂದಾಗ ಪ್ರಕರಣ ಬೆಳಕಿಗೆ
ಕೊಕ್ಕಡ: ಕೊಕ್ಕಡ ಕೆನರಾ ಬ್ಯಾಂಕ್ ಇತ್ತೀಚಿನ ದಿನಗಳಲ್ಲಿ ಒಂದಿಲ್ಲವೊಂದು ವಿಷಯಕ್ಕೆ ಸುದ್ದಿಯಾಗುತ್ತಿದ್ದು ಅ.21 ರಂದು ಬ್ಯಾಂಕಿಗೆ ಬಂದ ಅಪರಿಚಿತ ಮಹಿಳೆಯೋರ್ವಳು ಬ್ಯಾಂಕ್ ಖಾತೆ ಹೊಂದಿರುವ ಇನ್ನೊಬ್ಬರು ಮಹಿಳೆಯ ಖಾತೆಯಿಂದ ರೂ.15 ಸಾವಿರ ಹಣವನ್ನು ಡ್ರಾ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.
ಕೊಕ್ಕಡ ಗ್ರಾಮದ ಕೆಂಗುಡೇಲು ನಿವಾಸಿ ಮೋಹಿನಿ ಎಂಬವರರು ಕಳೆದ 20 ವರುಷಕ್ಕೂ ಮಿಕ್ಕಿ ಕೊಕ್ಕಡ ಕೆನರಾ ಬ್ಯಾಂಕಿನ ಶಾಖೆಯಲ್ಲಿ ಖಾತೆ ಹೊಂದಿದ್ದು ರೂ.2 ಸಾವಿರ ತೆಗೆಯಲು ಡ್ರಾ ಮಾಡಲು ಬ್ಯಾಂಕಿಗೆ ಹೋದಾಗ ಅವರ ಖಾತೆಯನ್ನು ಪರಿಶೀಲಿಸಿದ ಬ್ಯಾಂಕ್ ನೌಕರ ಖಾತೆಯಲ್ಲಿ ರೂ.1ಸಾವಿರ ಮಾತ್ರ ಇದೆ ಎಂದು ತಿಳಿಸಿದರು. ಖಾತೆಯಲ್ಲಿ ರೂ.16ಸಾವಿರ ಇತ್ತು ಎಂದು ಮೋಹಿನಿ ಅವರು ತಿಳಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿತ್ತು. ಅಂದು ಬೆಳಗ್ಗೆ ಸುಮಾರು 10.50ಕ್ಕೆ ಅಪರಿಚಿತ ಮಹಿಳೆಯೊಬ್ಬರು ಬಂದು ಮೋಹಿನಿ ಅವರ ಖಾತೆಯಿಂದ ರೂ.15 ಸಾವಿರ ಡ್ರಾ ಮಾಡಿದ್ದರು. ಮೋಹಿನಿ ಅವರು ಕಷ್ಟಪಟ್ಟು ಸಹಿ ಮಾಡುತ್ತಿದ್ದು. ಅಪರಿಚಿತ ಮಹಿಳೆ ಕೂಡ ಮೊದಲ ಎರಡು ಅಕ್ಷರಗಳನ್ನು ಸರಿಯಾಗಿ ಬರೆದು ಸಹಿ ಮಾಡಿರುವುದು ಬ್ಯಾಂಕ್ ನ ಸ್ಲಿಪ್‌ನಲ್ಲಿ ಕಂಡುಬಂದಿದ್ದು. ನಂತರ ಬ್ಯಾಂಕಿನ ಸಿಸಿ ಕ್ಯಾಮರವನ್ನು ಪರಿಶೀಲಿಸಿದಾಗ ಮಹಿಳೆ ಬಂದು ಹಣ ಡ್ರಾ ಮಾಡಿಕೊಂಡು ಹೋಗಿರುವುದು ದೃಢಪಟ್ಟಿದೆ. ಆದರೆ ಆ ಮಹಿಳೆಯ ಮುಖ ಛಾಯೆ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿಲ್ಲವೆನ್ನಲಾಗಿದೆ. ಈ ವಿಷಯವನ್ನು ಬ್ಯಾಂಕ್ ನ ಮ್ಯಾನೇಜರ್ ಗಮನಕ್ಕೆ ತಂದಾಗ ಪರಿಶೀಲಿಸುವುದಾಗಿ ಭರವಸೆ ನೀಡಿದ್ದರು. ಆದರೆ ಇಂದೇ ಹಣ ನೀಡುವಂತೆ ಖಾತೆದಾರ ಮೋಹಿನಿ ಹಾಗೂ ಅವರ ಪುತ್ರ ಗಿರೀಶ್ ಎಂಬುವರು ಪಟ್ಟು ಬಿಡದೆ ಸಂಜೆ ಗಂಟೆ 6:15ರ ತನಕ ಬ್ಯಾಂಕ್ ನಲ್ಲೇ ಕುಳಿತಿದ್ದರು. ಸಂಜೆ ವೇಳೆ ಬ್ಯಾಂಕ್ ಮ್ಯಾನೇಜರ್ ನಾಳೆ ಬರುವಂತೆ ತಿಳಿಸಿದ ಹಿನ್ನೆಲೆಯಲ್ಲಿ ಮರುದಿನ ಅ.22 ರಂದು ಮೋಹಿನಿ ಅವರು ಬ್ಯಾಂಕ್ ಗೆ ಹೋದಾಗ ಅವರಿಗೆ ರೂ.15ಸಾವಿರವನ್ನು ನೀಡಿದ್ದಾರೆ ಎಂದು ಮೋಹಿನಿ ಅವರ ಪುತ್ರ ಗಿರೀಶ್ ತಿಳಿಸಿದ್ದಾರೆ.
ಮೋಹಿನಿ ಅವರ ಬ್ಯಾಂಕ್ ಪಾಸ್ ಪುಸ್ತಕ ಕೆಲ ಸಮಯಗಳ ಹಿಂದೆ ಕಳೆದು ಹೋಗಿದ್ದು ಅವರು ಬ್ಯಾಂಕ್ ಗೆ ಬಂದು ಹೊಸ ಪಾಸ್ ಪುಸ್ತಕ ಪಡೆದುಕೊಂಡಿದ್ದರು. ಕಳೆದು ಹೋದ ಪಾಸ್ ಪುಸ್ತಕ ಯಾರಿಗೂ ದೊರೆತು ಅವರು ಈ ಅಪರಿಚಿತ ಮಹಿಳೆಯ ಮೂಲಕ ಪೋಜರಿ ಸಹಿ ಹಾಕಿ ಹಣ ಡ್ರಾ ಮಾಡಿರಬಹುದು ಎಂಬ ಸಂಕೆ ವ್ಯಕ್ತವಾಗಿದೆ.
ಕೊಕ್ಕಡ ಬ್ಯಾಂಕಿನಲ್ಲಿ ಮೇಲಿಂದ ಮೇಲೆ ಅನೇಕ ಘಟನೆಗಳು ನಡೆಯುತ್ತಿರುವುದರಿಂದ ಖಾತೆದಾರರಲ್ಲಿ ಭಯದ ವಾತಾವರಣ ಉಂಟಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.