ನೆಲ್ಯಾಡಿ: ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗದಲ್ಲಿ ಡಿಟಿಒ ಆಗಿದ್ದು ಪ್ರಸ್ತುತ ಮಂಗಳೂರಿನ ಕಂಬಳಪದವು ಭಾರೀ ವಾಹನ ತರಬೇತಿ ಸಂಸ್ಥೆಯಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮುರಳೀಧರ ಆಚಾರ್ಯ ಅವರು ಅ.30ರಂದು ಸೇವೆಯಿಂದ ನಿವೃತ್ತಿಯಾಗಿದ್ದಾರೆ.
ಮೂಲತ: ನೆಲ್ಯಾಡಿ ನಿವಾಸಿಯಾಗಿರುವ ಮುರಳೀಧರ ಆಚಾರ್ಯ ಕೆ.ಅವರು 8-4-1987ರಲ್ಲಿ ಕೆಎಸ್‌ಆರ್‌ಟಿಸಿಯ ಮಂಗಳೂರು ವಿಭಾಗದ ವಿಭಾಗೀಯ ಉಗ್ರಾಣದಲ್ಲಿ ಕಿರಿಯ ಸಹಾಯಕರಾಗಿ ಸೇವೆಗೆ ಸೇರ್ಪಡೆಗೊಂಡಿದ್ದರು. 1988ರಲ್ಲಿ ಸಂಚಾರಿ ನಿರೀಕ್ಷಕ ಪರೀಕ್ಷೆ ಬರೆದು ರಾಜ್ಯಮಟ್ಟದಲ್ಲಿ 2ನೇ ರ‍್ಯಾಂಕ್ ಪಡೆದುಕೊಂಡಿದ್ದರು. ಅದೇ ವರ್ಷ ಸಂಚಾರ ನಿರೀಕ್ಷಕರಾಗಿ ಆಯ್ಕೆಗೊಂಡು ಕುಂದಾಪುರ ಘಟಕಕ್ಕೆ ನೇಮಕಗೊಂಡಿದ್ದರು. 1990ರಲ್ಲಿ ಮಂಗಳೂರು 1ನೇ ಘಟಕಕ್ಕೆ ವರ್ಗಾವಣೆಗೊಂಡು ಘಟಕ ಹಾಗೂ ಮಂಗಳೂರು ಬಸ್ಸು ನಿಲ್ದಾಣದ ಮೇಲ್ವಿಚಾರಕರಾಗಿ ಕರ್ತವ್ಯ ನಿರ್ವಹಿಸಿದ್ದರು. 2001ರಲ್ಲಿ ಸಹಾಯಕ ಸಂಚಾರ ಅಧೀಕ್ಷಕರಾಗಿ ಭಡ್ತಿಗೊಂಡು ಹಾಸನ ವಿಭಾಗಕ್ಕೆ ವರ್ಗಾವಣೆಗೊಂಡರು. 2003ರಲ್ಲಿ ಮತ್ತೆ ಮಂಗಳೂರು ವಿಭಾಗದ 1ನೇ ಘಟಕಕ್ಕೆ ಘಟಕ ವ್ಯವಸ್ಥಾಪಕರಾಗಿ ವರ್ಗಾವಣೆಗೊಂಡಿದ್ದರು. 2005ರಲ್ಲಿ ಪುತ್ತೂರು, 2006ರಲ್ಲಿ ಗುಂಡ್ಲುಪೇಟೆ, 2006ರಿಂದ 2012ರ ತನಕ ಧರ್ಮಸ್ಥಳದಲ್ಲಿ ಘಟಕ ವ್ಯವಸ್ಥಾಪಕರಾಗಿ ಕರ್ತವ್ಯ ನಿರ್ವಹಿಸಿದ್ದರು. 2012ರಲ್ಲಿ ಮತ್ತೆ ಮಂಗಳೂರಿಗೆ ವರ್ಗಾವಣೆಗೊಂಡಿದ್ದರು. 2016ರಲ್ಲಿ ವಿಭಾಗೀಯ ಸಂಚಾರ ಅಧಿಕಾರಿಯಾಗಿ ಭಡ್ತಿಪಡೆದುಕೊಂಡಿದ್ದರು. 2017ರಲ್ಲಿ ಹಾಸನ, ಬಳಿಕ ಪುತ್ತೂರಿಗೆ ವರ್ಗಾವಣೆಗೊಂಡಿದ್ದರು. ಪುತ್ತೂರಿನಲ್ಲಿ 7 ವರ್ಷ ಕರ್ತವ್ಯ ನಿರ್ವಹಿಸಿ 2024ರ ಜು.12ರಿಂದ ಮಂಗಳೂರು ಕಂಬಳಪದವುನಲ್ಲಿರುವ ಭಾರೀ ವಾಹನ ತರಬೇತಿ ಸಂಸ್ಥೆಯ ಪ್ರಾಂಶುಪಾಲರಾಗಿ ವರ್ಗಾವಣೆಗೊಂಡು ಕರ್ತವ್ಯ ನಿರ್ವಹಿಸುತ್ತಿದ್ದರು. ಇವರು ಕೆಎಸ್‌ಆರ್‌ಟಿಸಿಯಲ್ಲಿ ಸುಮಾರು 38ವರ್ಷ ವಿವಿಧ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.
ಮೂಲತ: ನೆಲ್ಯಾಡಿ ನಿವಾಸಿಯಾಗಿರುವ ಮುರಳೀಧರ ಆಚಾರ್ಯ ಅವರು ನೆಲ್ಯಾಡಿಯ ಸುಬ್ರಹ್ಮಣ್ಯ ವಿಲಾಸ ಹೋಟೆಲ್‌ನ ಮಾಲಕ ಸುಬ್ರಹ್ಮಣ್ಯ ಆಚಾರ್ ಅವರ ಸಹೋದರ. ನೆಲ್ಯಾಡಿ, ಉಪ್ಪಿನಂಗಡಿ, ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದರು. ಪ್ರಸ್ತುತ ಇವರು ಪತ್ನಿ ಮಂಗಳೂರು ಮಹಿಳಾ ಐಟಿಐಯಲ್ಲಿ ಸುಪರಿಂಟೆಂಡ್ ಆಗಿರುವ ರೇಖಾರಾವ್ ಹಾಗೂ ಪುತ್ರ ಉದ್ಯಮಿಯಾಗಿರುವ ಪ್ರಹಾಸ್ ಅವರೊಂದಿಗೆ ಮಂಗಳೂರಿನಲ್ಲಿ ವಾಸ್ತವ್ಯವಿದ್ದಾರೆ.