ನೆಲ್ಯಾಡಿ: ಗುಂಡ್ಯದಿಂದ ಉಪ್ಪಿನಂಗಡಿ ಕಡೆಗೆ ಹಾಗೂ ಗುಂಡ್ಯದಿಂದ ಸುಬ್ರಹ್ಮಣ್ಯ ಕಡೆಗೆ ಹೋಗುವ ಬಸ್ಸುಗಳು ಎರಡು ದಿನದಿಂದ ಬಾರದೇ ಇರುವುದರಿಂದ ದೀಪಾವಳಿ ರಜೆ ಕಳೆದು ಶಾಲೆಗೆ ಹೊರಟ ನೂರಾರು ಮಕ್ಕಳು ಶಾಲೆಗೆ ಹೋಗಲು ಸಾಧ್ಯವಾಗದೇ ತೊಂದರೆಗೆ ಸಿಲುಕಿದ್ದಾರೆ. ಬಹುತೇಕ ಮಕ್ಕಳು ಎರಡು ದಿನವೂ ಶಾಲೆಗೆ ರಜೆ ಮಾಡಿದರೆ ಕೆಲ ಮಕ್ಕಳು ಜೀಪು, ಲಾರಿ ಸೇರಿದಂತೆ ಸಿಕ್ಕ ವಾಹನಗಳಿಗೆ ಹತ್ತಿಕೊಂಡು ಶಾಲೆಗೆ ತೆರಳಿದ್ದಾರೆ.
ಸುಬ್ರಹ್ಮಣ್ಯದಿಂದ ಗುಂಡ್ಯಕ್ಕೆ 7.40ರ ಸುಮಾರಿಗೆ ಬರುವ ಕೆಎಸ್‌ಆರ್‌ಟಿಸಿ ಬಸ್ಸೊಂದು ಗುಂಡ್ಯದಿಂದ ಉದನೆ-ನೆಲ್ಯಾಡಿ ಮೂಲಕ ಉಪ್ಪಿನಂಗಡಿಗೆ 9.15ಕ್ಕೆ ತಲುಪುತಿತ್ತು. ಈ ಬಸ್ಸಿನಲ್ಲಿ ಉದನೆ, ನೆಲ್ಯಾಡಿ, ಉಪ್ಪಿನಂಗಡಿಗೆ ಬರುವ ಶಾಲಾ ಮಕ್ಕಳು, ಕೆಲಸಕ್ಕೆ ಬರುವ ಸಾರ್ವಜನಿಕರು ಪ್ರಯಾಣಿಸುತ್ತಿದ್ದರು. ಇದರಿಂದ ಶಾಲಾ ಮಕ್ಕಳಿಗೆ, ಸಾರ್ವಜನಿಕರಿಗೆ ಬಹಳಷ್ಟು ಅನುಕೂಲವಾಗುತಿತ್ತು. ಆದರೆ ಈ ಬಸ್ಸು ಎರಡು ದಿನದಿಂದ ಬಾರದೇ ಇರುವುದರಿಂದ ಶಾಲಾ ಮಕ್ಕಳು, ಸಾರ್ವಜನಿಕರು ತೊಂದರೆಗೆ ಸಿಲುಕಿದ್ದಾರೆ.
ಇನ್ನೊಂದು ಕೆಎಸ್‌ಆರ್‌ಟಿಸಿ ಬಸ್ಸು ಸುಬ್ರಹ್ಮಣ್ಯದಿಂದ 8.15ಕ್ಕೆ ಗುಂಡ್ಯಕ್ಕೆ ಬಂದು ಮತ್ತೆ ಸುಬ್ರಹ್ಮಣ್ಯಕ್ಕೆ ತೆರಳಿ ಅಲ್ಲಿಂದ ಮಡಿಕೇರಿಗೆ ಸಂಚಾರ ಮಾಡುತ್ತದೆ. ಈ ಬಸ್ಸಿನಲ್ಲೂ ಗುಂಡ್ಯದಿಂದ ಸುಬ್ರಹ್ಮಣ್ಯಕ್ಕೆ 120ಕ್ಕೂ ಹೆಚ್ಚು ಶಾಲಾ ಮಕ್ಕಳು ತೆರಳುತ್ತಾರೆ. ಇದರ ಜೊತೆಗೆ ಸಾರ್ವಜನಿಕರೂ ಸಂಚಾರ ಮಾಡುತ್ತಾರೆ. ಈ ಬಸ್ಸು ಸಹ ಎರಡು ದಿನದಿಂದ ಬಂದಿಲ್ಲ. ಬಸ್ಸು ಬಾರದೇ ಇರುವುದರಿಂದ ಎರಡೂ ಕಡೆಗೆ ತೆರಳುವ ನೂರಾರು ಶಾಲಾ ಮಕ್ಕಳು ತೊಂದರೆಗೆ ಸಿಲುಕಿದ್ದಾರೆ. ಕಾಲೇಜಿಗೆ ತೆರಳುವ ಮಕ್ಕಳು ಲಾರಿ ಸೇರಿದಂತೆ ಇತರೇ ವಾಹನಗಳಲ್ಲಿ, ಜೀಪುಗಳಲ್ಲಿ ನೇತಾಡಿಕೊಂಡು ಸಂಚಾರ ಮಾಡಿದ್ದಾರೆ. ಆದರೆ ಸಣ್ಣ ಮಕ್ಕಳು ಮತ್ತೆ ಮನೆಗೆ ಹಿಂತಿರುಗಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಎಕ್ಸ್‌ಪ್ರೆಸ್‌ನಲ್ಲಿ ಅವಕಾಶವಿಲ್ಲ:
ಬೆಂಗಳೂರಿನಿಂದ ಮಂಗಳೂರಿಗೆ ಗುಂಡ್ಯ ಮೂಲಕ ದಿನದಲ್ಲಿ ನೂರಕ್ಕೂ ಮಿಕ್ಕಿ ಕೆಎಸ್‌ಆರ್‌ಟಿಸಿ ಎಕ್ಸ್‌ಪ್ರೆಸ್ ಬಸ್ಸುಗಳು ಓಡಾಡುತ್ತಿವೆ. ಆದರೆ ಶಾಲಾ ಮಕ್ಕಳ ಸಮಯದಲ್ಲಿ ಬಸ್ಸುಗಳೇ ಇರುವುದಿಲ್ಲ. ಇದ್ದರೂ ಎಕ್ಸ್‌ಪ್ರೆಸ್ ಬಸ್‌ಗಳಲ್ಲಿ ಶಾಲಾ ಮಕ್ಕಳಿಗೆ ಪ್ರಯಾಣಕ್ಕೆ ಅವಕಾಶ ನೀಡುತ್ತಿಲ್ಲ ಎಂಬ ದೂರುಗಳು ಇವೆ. ಇದೇ ಪರಿಸ್ಥಿತಿ ಧರ್ಮಸ್ಥಳ-ಗುಂಡ್ಯ-ಸುಬ್ರಹ್ಮಣ್ಯ ಸಂಚರಿಸುವ ಬಸ್ಸಗಳದ್ದೂ ಆಗಿದೆ. ಬಸ್ಸಿನ ಸಮಸ್ಯೆಯಿಂದಾಗಿ ಶಾಲಾ ಮಕ್ಕಳಿಗೆ ಸರಿಯಾದ ಸಮಯಕ್ಕೆ ಶಾಲೆಗೆ ತಲುಪಲೂ ಸಮಸ್ಯೆಯಾಗುತ್ತಿದೆ ಎಂಬ ದೂರುಗಳು ಇವೆ.
ಫೋನ್ ರಿಸೀವ್ ಮಾಡುತ್ತಿಲ್ಲ:
ಎರಡು ದಿನದಿಂದ ಬಸ್ಸು ಬಾರದೇ ಇರುವ ಬಗ್ಗೆ ವಿಚಾರಿಸಲು ಕೆಎಸ್‌ಆರ್‌ಟಿಸಿ ಡಿಪೋಗೆ ಫೋನ್ ಮಾಡಿದರೂ ರಿಸೀವ್ ಮಾಡುತ್ತಿಲ್ಲ. ಮಕ್ಕಳು ಬಸ್ಸಿಗಾಗಿ ಕಾಯುತ್ತಿದ್ದಾರೆ. ಸರಿಯಾದ ಸಮಯಕ್ಕೆ ಬಸ್ಸಿನ ಸೌಕರ್ಯವಿಲ್ಲದೇ ಶಾಲೆಗೆ ಹೋಗುವ ಮಕ್ಕಳಿಗೆ ಸಮಸ್ಯೆಯಾಗಿದೆ. ಈ ಬಗ್ಗೆ ಅಧಿಕಾರಿಗಳು ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಶಿರಾಡಿ ಗ್ರಾ.ಪಂ.ಅಧ್ಯಕ್ಷ ಕಾರ್ತಿಕೇಯನ್ ಒತ್ತಾಯಿಸಿದ್ದಾರೆ.