16 ವರ್ಷದೊಳಗಿನ ಮಕ್ಕಳಿಗೆ ಸೋಷಿಯಲ್ ಮೀಡಿಯಾ ಬಳಕೆ ಬ್ಯಾನ್, ಮಹತ್ವದ ನಿರ್ಧಾರ ಕೈಗೊಂಡ ಸರ್ಕಾರ

ಶೇರ್ ಮಾಡಿ

ಇತ್ತೀಚೆಗಿನ ದಿನಗಳಲ್ಲಿ ಮಕ್ಕಳು ಅತಿಯಾಗಿ ಮೊಬೈಲ್ ಬಳಕೆ ಮಾಡುತ್ತಿದ್ದಾರೆ. ಈ ಸೋಷಿಯಲ್ ಮೀಡಿಯಾ ಮಕ್ಕಳ ಮೇಲೆ ಸಾಕಷ್ಟು ಗಂಭೀರ ಪರಿಣಾಮಗಳನ್ನು ಬೀರುತ್ತಿದೆ. ಇದು ಮಾನಸಿಕ ಮತ್ತು ದೈಹಿಕ ಆರೋಗ್ಯ ಒಳ್ಳೆಯದಲ್ಲ ಎನ್ನುವುದು ಎಲ್ಲರಿಗೂ ತಿಳಿದಿದೆ. ಈ ಹಿನ್ನಲೆಯಲ್ಲಿ ಆಸ್ಟ್ರೇಲಿಯಾದಲ್ಲಿ ಇದೀಗ 16 ವರ್ಷದೊಳಗಿನ ಮಕ್ಕಳು ಸೋಶಿಯಲ್ ಮೀಡಿಯಾ ಬಳಕೆ ಮಾಡುವುದನ್ನು ನಿಷೇಧಿಸಲಾಗುತ್ತಿದೆ.

ಆಸ್ಟ್ರೇಲಿಯಾ ಪ್ರಧಾನಿ ಆ್ಯಂಟೋನಿ ಆಲ್ಬನೀಸ್ ಈ ಬಗ್ಗೆ ಮಾತನಾಡಿದ್ದು, 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮವನ್ನು ನಿಷೇಧಿಸಲು ಕಾನೂನು ರೂಪಿಸುತ್ತೇವೆ. ಈ ಹಿನ್ನಲೆಯಲ್ಲಿ ಏಜ್​ ವೆರಿಫಿಕೇಷನ್​ ಸಿಸ್ಟಮನ್ನು ಪ್ರಯೋಗಿಸಲಾಗುತ್ತಿದೆ. ಮುಂದಿನ ವರ್ಷಾಂತ್ಯದೊಳಗೆ ಈ ಕಾನೂನು ಜಾರಿಗೆ ಬರುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

ಸಾಮಾಜಿಕ ಮಾಧ್ಯಮ ನಮ್ಮ ಮಕ್ಕಳಿಗೆ ಹಾನಿ ಮಾಡುತ್ತಿದೆ. ಇದರ ಅತಿಯಾದ ಬಳಕೆಯಿಂದ ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತಿದೆ. ಮೋಸ, ವಂಚನೆ ಸೇರಿದಂತೆ ಮಕ್ಕಳು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಸೋಶಿಯಲ್ ಮೀಡಿಯಾದಿಂದ ಮಕ್ಕಳನ್ನು ದೂರವಿಡುವ ಸಲುವಾಗಿ ಈ ವರ್ಷ ಸಂಸತ್ತಿನಲ್ಲಿ ಕಾನೂನನ್ನು ಪರಿಚಯಿಸಲಾಗುವುದು. ಜನಪ್ರತಿನಿಧಿಗಳು ಅಂಗೀಕರಿಸಿದ 12 ತಿಂಗಳ ನಂತರವೇ ಈ ಕಾನೂನು ಜಾರಿಗೆ ಬರಲಿವೆ ಎಂದು ತಿಳಿಸಿದ್ದಾರೆ.

ಈ ಸಾಮಾಜಿಕ ಜಾಲತಾಣ ಪ್ರವೇಶವನ್ನು ತಡೆಗಟ್ಟಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂಬುದನ್ನು ಪ್ರದರ್ಶಿಸುವ ಜವಾಬ್ದಾರಿಯೂ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳ ಮೇಲಿರುತ್ತದೆ. ಈ ಜವಾಬ್ದಾರಿ ಪೋಷಕರು ಅಥವಾ ಯುವಜನತೆಯ ಮೇಲೆ ಇರುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

ಕಳೆದ ವರ್ಷ ಫ್ರಾನ್ಸ್ 15 ವರ್ಷದೊಳಗಿನವರಿಗೆ ಸಾಮಾಜಿಕ ಮಾಧ್ಯಮ ಬಳಕೆ ನಿಷೇಧ ಪ್ರಸ್ತಾಪಿಸಿತ್ತು. ಆದರೆ ಬಳಕೆದಾರರು ಪೋಷಕರ ಒಪ್ಪಿಗೆಯೊಂದಿಗೆ ನಿಷೇಧ ತಪ್ಪಿಸಲು ಸಾಧ್ಯವಾಯಿತು. ಆದರೆ, ಅಮೆರಿಕದಲ್ಲಿ 13 ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣ ಪ್ರವೇಶಿಸಲು ಪೋಷಕರ ಒಪ್ಪಿಗೆಯನ್ನು ಪಡೆಯುವುದು ಕಡ್ಡಾಯವಾಗಿದೆ.

Leave a Reply

error: Content is protected !!