ಉಜಿರೆ: ಆರೋಗ್ಯಯುತ ಜೀವನ ಪದ್ಧತಿ ಅಳವಡಿಸಿಕೊಂಡು ರೋಗ ಮುಕ್ತರಾಗಬೇಕಿದೆ. ಜನರಿಗೆ ಇತ್ತೀಚೆಗೆ ಸಿದ್ದ ಆಹಾರ ಹಾಗೂ ವಿದೇಶಿ ಆಹಾರದ ಬಗ್ಗೆ ಒಲವು ತೋರುತ್ತಿದ್ದಾರೆ. ಇದು ಅನಾರೋಗ್ಯಕ್ಕೆ ಎಡೆಮಾಡಿಕೊಡುತ್ತಿದೆ ಎಂದು ಬೆಂಗಳೂರಿನ ವೈದ್ಯೆ ಡಾ. ಪೂರ್ಣಿಮಾ ಕೊಲ್ಲಿಪಾಲ್ ಹೇಳಿದರು.
ಇವರು ಮಿತ್ತಬಾಗಿಲು ಗ್ರಾಮದ ಕಿಲ್ಲೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುತ್ತಿರುವ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಅಂಗವಾಗಿ ನಡೆದ ಕಸದಿಂದ ರಸ ಎನ್ನುವ ಶೈಕ್ಷಣಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಾಲಾಭಿವೃದ್ಧಿ ಸಮಿತಿಯ ಸದಸ್ಯರಾದ ಸುಂದರ ಗೌಡ ಅವರು ಭಿತ್ತಿಪತ್ರಿಕೆಯನ್ನು ಅನಾವರಣಗೊಳಿಸಿದರು. ಬೆಳ್ತಂಗಡಿ ಆನ್ಸ್ ಕ್ಲಬ್ ಅಧ್ಯಕ್ಷೆ ಗಾಯತ್ರಿ ಶ್ರೀಧರ್ , ಉಜಿರೆ ಮಹಿಳಾ ಮಂಡಳಿ ಅಧ್ಯಕ್ಷೆ ಜಯಶ್ರೀ ಅಪ್ರಮೇಯ , ಸಂಪನ್ಮೂಲ ವ್ಯಕ್ತಿ ಚೇತನಾ ಅವರು ಕಸದಿಂದ ರಸ ವಿಷಯವಾಗಿ ಅನೇಕ ಗಿಡಗಳು ,ಹೂವುಗಳ ವಿವಿಧ ಕಲಾಕೃತಿ ರಚನೆಗಳ ಪ್ರಾತ್ಯಕ್ಷಿಕೆ ಮಾಡಿದರು.
ಕಿಲ್ಲೂರಿನ ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ರಮೇಶ್ ಪೈಲಾರ್ ಅವರಿಗೆ ಶಾಲಾ ಆವರಣದಲ್ಲಿ ನೆಡಲು ವಿವಿಧ ಹಣ್ಣುಗಳ ಗಿಡಗಳನ್ನು ಹಾಗೂ ಅನೇಕ ತರಕಾರಿ ಬೀಜಗಳನ್ನು ಆನ್ಸ್ ಕ್ಲಬ್ ಹಾಗೂ ಉಜಿರೆ ಮಹಿಳಾ ಮಂಡಳಿ ವತಿಯಿಂದ ನೀಡಿದರು.
ರಾ.ಸೇ ಯೋಜನೆಯ ಯೋಜನಾಧಿಕಾರಿ ಡಾ.ಪ್ರಸನ್ನಕುಮಾರ ಐತಾಳ್, ಸಹ ಯೋಜನಾಧಿಕಾರಿ ಪದ್ಮಶ್ರೀ ರಕ್ಷಿತ್ ಗೌರವಿಸಿದರು. ಅಭಿಜಿತ್ ಸ್ವಾಗತಿಸಿದರು, ಸಿಂಚನಾ ವಂದಿಸಿದರು. ಸಂಜನಾ ಬಿ.ಜೆ. ನಿರೂಪಿಸಿದರು.