ತಮ್ಮ ಪ್ರಾಣವನ್ನೇ ಪಣಕ್ಕಿಡುವ ಸಿಬ್ಬಂದಿ, ಉಸಿರು ಹೋಗುವ ಜೀವಗಳಿಗೆ ಮರುಜನ್ಮ ನೀಡುವ ಜೀವಗಳು. ರಸ್ತೆಗಳಲ್ಲಿ ಸೈರನ್ ಹಾಕಿ ಶರವೇಗದಲ್ಲಿ ಆಸ್ಪತ್ರೆಗೆ ಸಾಗಿಸುವ ಈ ರಕ್ಷಕರು, ಈಗ ತಮ್ಮದೇ ಬದುಕಿಗಾಗಿ ಹೋರಾಟ ನಡೆಸುವ ಸ್ಥಿತಿ ನಿರ್ಮಾಣವಾಗಿದೆ. ಕಳೆದ ಮೂರು ತಿಂಗಳಿನಿಂದ ಮತ್ತೆ 108 ಆಂಬ್ಯುಲೆನ್ಸ್ ನೌಕರರಿಗೆ ಆರೋಗ್ಯ ಇಲಾಖೆ ಸಂಬಳವೇ ನೀಡಿಲ್ಲ. ಶನಿವಾರದೊಳಗೆ ವೇತನ ನೀಡದಿದ್ದರೆ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಮತ್ತೆ ಹೋರಾಟಕ್ಕೆ ಮುಂದಾದ ಆಂಬ್ಯುಲೆನ್ಸ್ ಸಿಬ್ಬಂದಿಗಳು
ಹೌದು. 108 ಆಂಬ್ಯುಲೆನ್ಸ್ ನೌಕರರಿಗೆ ಆರೋಗ್ಯ ಇಲಾಖೆ ಮತ್ತೆ ಸಂಬಳ ನೀಡಿಲ್ಲ. ಹಿಗಾಗಿ ಸಂಬಳ ನೀಡದ ಹಿನ್ನೆಲೆ ಸಿಬ್ಬಂದಿಗಳು ಮತ್ತೆ ಹೋರಾಟಕ್ಕೆ ಮುಂದಾಗಿದ್ದಾರೆ. ಶನಿವಾರದೊಳಗೆ ವೇತನ ನೀಡದಿದ್ದರೆ ಸೇವೆಗೆ ಹಾಜರಾಗದಿರಲು ನೌಕರರು ನಿರ್ಧರಿಸಿದ್ದಾರೆ. ನಾಳೆ ಸರ್ಕಾರಕ್ಕೆ ಮನವಿ ಸಲ್ಲಿಸಲಿದ್ದಾರೆ.
ಆರೋಗ್ಯ ಕವಚ ಯೋಜನೆಯಲ್ಲಿ ಸುಮಾರು ಎರಡು ವರ್ಷಗಳಿಂದ ವೇತನದಲ್ಲಿ ಅನೇಕ ಸಮಸ್ಯೆ ಉಂಟಾಗಿದ್ದು ಹಲವು ಬಾರಿ ಸರ್ಕಾರ ಮತ್ತು ಸಂಸ್ಥೆ ಹಾಗೂ ಸಂಘಟನೆಗಳು ಸಭೆ ಮಾಡಿದರೂ ಸಹ ವೇತನದ ಸಮಸ್ಯೆ ಬಗೆಹರಿದಿಲ್ಲ. ಹೀಗಾಗಿ ಸಂಘಟನೆಯ ವತಿಯಿಂದ ನ್ಯಾಯಾಲಯದ ಮೊರೆ ಹೋಗಿದ್ದು ಘನ ನ್ಯಾಯಾಲಯವು ಸೆಪ್ಟೆಂಬರ್ 12ರಂದು ಮಧ್ಯಂತರ ಆದೇಶ ನೀಡಿತ್ತು.
ನ್ಯಾಯಾಲಯದ ಆದೇಶವನ್ನು ಮೂರು ಸಂಘಟನೆಯ ಸರ್ವ ಸದಸ್ಯರು ಸ್ವೀಕರಿಸಿದ್ದರೂ ಸಹ ಸಂಸ್ಥೆ ನಮಗೆ ಮೂರು ತಿಂಗಳಿನಿಂದ ವೇತನ ನೀಡಿಲ್ಲ. ಆ ಮೂಲಕ ಮೇಲ್ನೋಟಕ್ಕೆ ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿರುವುದಾಗಿ ಸಂಘಟನೆ ವತಿಯಿಂದ ಸರ್ಕಾರದ ಅಧಿಕಾರಿಗಳ ಹತ್ತಿರ ಮನವಿ ಮಾಡಿದಾಗ ಸರ್ಕಾರದ ಅಧಿಕಾರಿಗಳು ನಮ್ಮ ಕಡೆಯಿಂದ ಜಿ.ವಿ.ಕೆ ಸಂಸ್ಥೆಯವರಿಗೆ ಸಂಪೂರ್ಣ ಅನುದಾನ ನೀಡಿರುತ್ತೇವೆ ಹಾಗಾಗಿ ನಮಗೆ ಯಾವುದೇ ಸಂಬಂಧ ಇರುವುದಿಲ್ಲ ಎನ್ನುವ ಉಡಾಫೆ ಉತ್ತರ ನೀಡಲಾಗಿತ್ತು.
ನಂತರ ನಾವುಗಳು ಸಂಸ್ಥೆಯ ಅಧಿಕಾರಿಗಳ ಬಳಿ ಮನವಿ ಮಾಡಿಕೊಂಡರೆ ಸರ್ಕಾರದಿಂದ ಹಣ ಬಂದಿಲ್ಲ ಎಂದು ಹೇಳುತ್ತಿದ್ದು, ಮೂರು ತಿಂಗಳು ಕಳೆದು ನಾಲ್ಕನೇ ತಿಂಗಳ ಮಧ್ಯಭಾಗವಾದರೂ ಸಹ ರಾಜ್ಯದ ಸಾರ್ವಜನಿಕರಿಗೆ ತೊಂದರೆ ನೀಡಬಾರದು ಎಂದು ಇಲ್ಲಿಯವರೆಗೂ ಕರ್ತವ್ಯ ನಿರ್ವಹಿಸುತ್ತಾ ಬಂದಿದ್ದೇವೆ.
ಆದರೆ ಸದ್ಯದ ಪರಿಸ್ಥಿತಿಯಲ್ಲಿ ಸಾರ್ವಜನಿಕರನ್ನು ನೋಡಿಕೊಂಡು ಹೋದರೆ ಕರ್ತವ್ಯ ನಿರತ ಸಿಬ್ಬಂದಿಗಳ ಸಂಸಾರಗಳು ಬೀದಿಗೆ ಬರುವ ಪ್ರಸಂಗ ಉದ್ಭವವಾಗುತ್ತದೆ. ಆದ್ದರಿಂದ ಅನಿವಾರ್ಯ ಕಾರಣಗಳಿಂದ ನವೆಂಬರ್ 16ರ ರಾತ್ರಿ 8 ಗಂಟೆಯ ಒಳಗಾಗಿ ಮೂರು ತಿಂಗಳ ಸಂಪೂರ್ಣ ವೇತನ ಪಾವತಿ ಆಗದಿದ್ದ ಪಕ್ಷದಲ್ಲಿ ನ.16ರ ರಾತ್ರಿ 8:00 ಗಂಟೆಯ ನಂತರ ಸಂಪೂರ್ಣ ಮೂರು ತಿಂಗಳ ವೇತನ ಪಾವತಿ ಆಗುವವರೆಗೂ ಎಲ್ಲಾ ಸಿಬ್ಬಂದಿಗಳು ಕರ್ತವ್ಯದಲ್ಲಿ ಇದ್ದುಕೊಂಡು ಯಾವುದೇ ತುರ್ತು ಸೇವೆಯನ್ನು ನೀಡದೆ ಆಂಬ್ಯುಲೆನ್ಸ್ಗಳನ್ನು ಸ್ಥಗಿತಗೊಳಿಸುವುದಾಗಿ ಹೇಳಿದ್ದಾರೆ.