ನೆಲ್ಯಾಡಿ ವಿಶ್ವವಿದ್ಯಾನಿಲಯ ಘಟಕ ಕಾಲೇಜಿನ 2024-25ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭ ನ.14ರಂದು ನಡೆಯಿತು.
ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾದ ಸುರೇಶ್ ಕುಮಾರ್.ಬಿ.ನಾವೂರು ವಿದ್ಯಾರ್ಥಿ ಸಂಘವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ವಿಶ್ವವಿದ್ಯಾನಿಲಯ ಕಾಲೇಜು ಪ್ರಾರಂಭವಾಗಿ ಯಶಸ್ವಿಯಾಗಿ ಏಳನೇ ಶೈಕ್ಷಣಿಕ ವರ್ಷಕ್ಕೆ ಹೆಜ್ಜೆ ಇರಿಸಿದ್ದು ಹೆಮ್ಮೆಯ ಸಂಗತಿ. ಕಾಲೇಜಿಗೆ 24ಎಕರೆ ಜಾಗ ಈಗಾಗಲೇ ನೋಂದಣಿ ಆಗಿದ್ದರು ಕೂಡ ಸ್ವಂತ ಕಟ್ಟಡ ಆಗಿರುವುದಿಲ್ಲ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ನೀಡುತ್ತಿರುವ ಈ ಕಾಲೇಜಿಗೆ ಸ್ವಂತ ಕಟ್ಟಡದೊಂದಿಗೆ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸುವುದರ ಮೂಲಕ ಕಾಲೇಜಿನ ಸಮಗ್ರ ಅಭಿವೃದ್ಧಿಗೆ ವಿಶ್ವವಿದ್ಯಾನಿಲಯದ ಪರವಾಗಿ ನಾನು ಯಾವತ್ತಿಗೂ ನಿಮ್ಮೆಲ್ಲರ ಜೊತೆ ಇರುತ್ತೇನೆ. ವಿಶ್ವವಿದ್ಯಾನಿಲಯದಿಂದ ಈ ಕಾಲೇಜಿಗೆ ದೊರಕಬೇಕಾದ ಸೌಕರ್ಯಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಪ್ರಯತ್ನಿಸುವುದಾಗಿ ತಿಳಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿರುವ ಈ ಕಾಲೇಜನ್ನು ಪ್ರಾರಂಭಿಸಿ ಬೆಳೆಯಲು ಅನುಷ್ಠಾನ ಸಮಿತಿಯ ಅಧ್ಯಕ್ಷರು, ಸದಸ್ಯರು, ಗ್ರಾಮದ ಶಿಕ್ಷಣ ಪ್ರೇಮಿಗಳು ತುಂಬಾ ಶ್ರಮವಹಿಸಿದ್ದಾರೆ. ಇಂತಹ ಕಾಲೇಜಿನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾಗಿ ಆಯ್ಕೆಯಾದ ಎಲ್ಲಾ ವಿದ್ಯಾರ್ಥಿಗಳು ಪಠ್ಯ, ಪಠ್ಯೇತರ ಚಟುವಟಿಕೆಗಳೊಂದಿಗೆ ಕಾಲೇಜು ಮತ್ತು ವಿಶ್ವವಿದ್ಯಾನಿಲಯಕ್ಕೆ ಉತ್ತಮ ಹೆಸರನ್ನು ತರಬೇಕೆಂದು ಕರೆ ನೀಡಿದರು.
ಮುಖ್ಯ ಅತಿಥಿಯಾಗಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಉಷಾ ಅಂಚನ್ ಉಪಸ್ಥಿತರಿದ್ದು ಮಾತನಾಡಿ ಇಂದು ಕಾಲೇಜಿಗೆ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರು ಆಗಮಿಸಿ ವಿದ್ಯಾರ್ಥಿ ಸಂಘ ಉದ್ಘಾಟಿಸಿದ್ದು ನಮಗೆ ಕಾಲೇಜಿನ ಅಭಿವೃದ್ಧಿಗೆ ಶ್ರಮಿಸಲು ಉತ್ಸಾಹ ಹೆಚ್ಚಿಸಿದೆ. ಗ್ರಾಮೀಣ ಪರಿಸರದ ಶೈಕ್ಷಣಿಕ ಬೇಡಿಕೆಗಳನ್ನು ಪೂರೈಸುತ್ತಿರುವ ಈ ಕಾಲೇಜಿಗೆ ಸ್ವಂತ ಕಟ್ಟಡದೊಂದಿಗೆ, ಮೂಲ ಸೌಲಭ್ಯಗಳೊಂದಿಗೆ ಮತ್ತಷ್ಟು ಅಭಿವೃದ್ಧಿಯಾಗಲು ವಿಶ್ವವಿದ್ಯಾನಿಲಯದ ಪಾತ್ರ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ನಮ್ಮ ಗ್ರಾಮೀಣ ಭಾಗದ ಮಕ್ಕಳಿಗೆ ಶಿಕ್ಷಣ ಪ್ರೇಮಿಗಳಿಗೆ ನಿರಾಶೆಯಾಗದಂತೆ ಕಾಲೇಜಿನ ಅಭಿವೃದ್ಧಿಗೆ ಪೂರಕವಾಗಿ ನಿರ್ಣಯಗಳನ್ನು ತೆಗೆದುಕೊಳ್ಳುವಲ್ಲಿ ವಿಶ್ವವಿದ್ಯಾನಿಲಯ ಮುಂದಾಗಬೇಕು ಎಂದರು. ಮಕ್ಕಳ ದಿನಾಚರಣೆಯ ದಿನದಂದೇ ವಿದ್ಯಾರ್ಥಿ ಸಂಘ ಉದ್ಘಾಟನೆಯಾಗಿರುವುದು ತುಂಬಾ ಸಂತಸದ ಸಂಗತಿಯಾಗಿದೆ. ಪಾಠ ಪ್ರವಚನಗಳ ಜೊತೆಗೆ ಅನೇಕ ಕಾರ್ಯಕ್ರಮಗಳನ್ನು ನಿರಂತರವಾಗಿ ಅಯೋಜಿಸುತ್ತಾ ಬರುತ್ತಿರುವ ಈ ಕಾಲೇಜಿನ ಯಶಸ್ಸಿನ ಮುಂದುವರಿಕೆಗೆ ವಿದ್ಯಾರ್ಥಿ ಸಂಘದ ಎಲ್ಲಾ ಪದಾಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕೆಂದು ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.
ನೆಲ್ಯಾಡಿ ಐಐಸಿಟಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ಪ್ರಶಾಂತ್.ಸಿ.ಎಚ್ ಅವರು ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಶುಭ ಹಾರೈಸಿದರು. ನಾಯಕನಾಗಿರುವಂಥವನು ಶ್ರದ್ಧೆ, ಬದ್ಧತೆ ಹಾಗೂ ಎಲ್ಲಾ ವಿದ್ಯಾರ್ಥಿ ಸಹಪಾಠಿಗಳನ್ನು ಜೊತೆಗೆ ಒಟ್ಟಿಗೆ ಸೇರಿಸಿಕೊಂಡು ಸಮಾನತೆಯ ಭಾವದಿಂದ ಎಲ್ಲಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡುವುದು ಮಹತ್ವದ ಜವಾಬ್ದಾರಿಯಾಗಿದೆ. ಇಂತಹ ವ್ಯಕ್ತಿತ್ವವನ್ನು ಎಲ್ಲಾ ವಿದ್ಯಾರ್ಥಿ ಪದಾಧಿಕಾರಿಗಳು ಮೈಗೂಡಿಸಿಕೊಳ್ಳಬೇಕೆಂದು ಸೂಚಿಸಿದರು. ಈ ಕಾಲೇಜಿನಲ್ಲಿ ನೂರಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳಿದ್ದು ಎಲ್ಲಾ ವಿದ್ಯಾರ್ಥಿಗಳ ಹೆತ್ತವರ, ಪೋಷಕರ ಕೈಜೋಡಿಸುವ ಪಾತ್ರ ಕೂಡ ಈ ಕಾಲೇಜಿನ ಅಭಿವೃದ್ಧಿಗಾಗಿ ಮಹತ್ವದ್ದಾಗಿದೆ. ಹಾಗಾಗಿ ನೆಲ್ಯಾಡಿ ಭಾಗದ ಎಲ್ಲಾ ವಿದ್ಯಾರ್ಥಿಗಳು, ಪೋಷಕರು ಹಾಗೂ ಎಲ್ಲರ ಸಹಕಾರದಿಂದ ಈ ಕಾಲೇಜಿನ ಶ್ರೇಯೋಭಿವೃದ್ಧಿ ಸಾಧ್ಯ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಸಂಯೋಜಕರಾದ ಡಾ.ಸುರೇಶ್ ಅವರು ನೂತನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಶುಭ ಹಾರೈಸಿದರು. ನೆಲ್ಯಾಡಿ ಸುತ್ತಮುತ್ತಲಿನ ಅನೇಕ ಗ್ರಾಮಗಳಿಂದ ಈ ಕಾಲೇಜಿಗೆ ಬರುತ್ತಿರುವ ಎಲ್ಲಾ ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲ ಹಾಗೂ ಸೃಜನಶೀಲ ಮನೋಭಾವವನ್ನು ಬೆಳೆಸಿಕೊಳ್ಳಲು ಕಾಲೇಜಿನ ವಾತಾವರಣವು ಪೂರಕವಾಗಿ ಕಾರ್ಯನಿರ್ವಹಿಸುತ್ತಿದೆ. ವಿಶ್ವವಿದ್ಯಾನಿಲಯ ರೂಪಿಸಿದ ವಿದ್ಯಾರ್ಥಿ ಸಂಘದ ನೀತಿ ನಿಯಮಗಳಂತೆ ಕಾರ್ಯನಿರ್ವಹಿಸುತ್ತಾ ಉತ್ತಮ ಕಲಿಕಾ ವಾತಾವರಣವನ್ನು ನಿರ್ಮಿಸಿಕೊಳ್ಳುವಲ್ಲಿ ವಿದ್ಯಾರ್ಥಿ ಸಂಘದ ಪಾತ್ರ ಮುಖ್ಯವಾಗಿರುತ್ತದೆ. ಶಾಂತಿ ಸಹಬಾಳ್ವೆ ಮತ್ತು ಒಗ್ಗಟ್ಟಿನ ಮಂತ್ರಗಳೊಂದಿಗೆ ಎಲ್ಲಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಾ ಉತ್ತಮ ನಾಯಕತ್ವ ಗುಣಗಳೊಂದಿಗೆ ಸಾಮಾಜಿಕ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವ ಮೂಲಕ ದೇಶದ ಅಭಿವೃದ್ಧಿಗೆ ಶ್ರಮಿಸಲು ವಿದ್ಯಾರ್ಥಿ ಸಂಘಕ್ಕೆ ಕರೆ ನೀಡಿದರು.
ವಿಶ್ವವಿದ್ಯಾನಿಲಯ ಕಾಲೇಜಿಗೆ ಸಿಂಡಿಕೇಟ್ ಸದಸ್ಯರಾಗಿ ಆಯ್ಕೆಯಾದ ನಂತರ ಮೊದಲ ಬಾರಿಗೆ ಕಾಲೇಜಿಗೆ ಭೇಟಿ ನೀಡುತ್ತಿರುವ ಸಂದರ್ಭ ಇದಾಗಿರುವುದರಿಂದ ಕಾಲೇಜಿನ ವತಿಯಿಂದ ಸಿಂಡಿಕೇಟ್ ಸದಸ್ಯರಾದ ಸುರೇಶ್ ಕುಮಾರ್.ಬಿ.ನಾವೂರು ಇವರಿಗೆ ಸನ್ಮಾನಿಸಲಾಯಿತು.
ವಿದ್ಯಾರ್ಥಿ ಸಂಘದ ಸಂಚಾಲಕರಾದ ಡಾ.ನೂರಂದಪ್ಪ ಅವರು ನೂತನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳೆಲ್ಲರಿಗೂ ಪ್ರತಿಜ್ಞಾವಿಧಿ ಬೋಧಿಸಿದರು. ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ.ಸೀತಾರಾಮ.ಪಿ. ಸ್ವಾಗತಿಸಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ವೆರೊಣಿಕ ಪ್ರಭಾ ವಂದಿಸಿದರು. ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕರಾದ ಸಚಿನ್ ಎನ್.ಟಿ ಕಾರ್ಯಕ್ರಮ ನಿರ್ವಹಿಸಿದರು.
ಕೃಷ್ಣಸೌರಭ ಕಾಂಪ್ಲೆಕ್ಸ್ ಕಟ್ಟಡದ ಮಾಲಕರಾದ ರವಿಚಂದ್ರ ಹೊಸವಕ್ಲು, ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷರಾದ ಪ್ರೇಮಾ ಮತ್ತು ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.