ನೆಲ್ಯಾಡಿ: ಕಡಬ ತಾಲೂಕಿನ ಇಚ್ಲಂಪಾಡಿ ಗ್ರಾಮದ ಮಾನಡ್ಕ ನಿವಾಸಿ ಸತೀಶ್ ಹಾಗೂ ಪುರಂದರ ಎಂಬುವರ ಮನೆಗೆ ನ.17ರಂದು ಮುಂಜಾನೆ 1.30ರ ವೇಳೆಗೆ ಅಪರಿಚಿತರೊಬ್ಬರು ಮನೆಯೊಳಗೆ ಪ್ರವೇಶಿಸಿ ದಾಂಧಲೆ ನಡೆಸಿರುವ ಪ್ರಕರಣ ಒಂದು ಬೆಳಕಿಗೆ ಬಂದಿದೆ.
ಪುರಂದರ ಎಂಬವರ ಮನೆಗೆ ಮುಂಜಾನೆ 1.30ರ ವೇಳೆಗೆ ಅಪರಿಚಿತರೊಬ್ಬರು ಹಿಂಬದಿ ಗೋಡೆ ಹತ್ತಿ ಒಳಗೆ ಬಂದಿದ್ದು ನಿದ್ರೆಯಲ್ಲಿದ್ದ ಪುರಂದರ ಅವರ ಪತ್ನಿ ಮೋಹಿನಿಯವರ ಕತ್ತು ಹಿಸುಕಿದ್ದು ಅವರು ಬೊಬ್ಬೆ ಹೊಡೆಯುತ್ತಿದ್ದಂತೆ ಅಲ್ಲೇ ಮಲಗಿದ್ದ ಪತಿ, ಮಗಳು ಎಚ್ಚರಗೊಳ್ಳುತ್ತಿದ್ದಂತೆ ಅಪರಿಚಿತ ಹಿಂಬದಿ ಬಾಗಿಲ ಮೂಲಕ ಪರಾರಿಯಾಗಿದ್ದ. ಪುರಂದರ ಅವರ ಮನೆಯ ವಿದ್ಯುತ್ ಸಂಪರ್ಕದ ಮೈನ್ ಸ್ವಿಚ್ ಆಫ್ ಮಾಡಲಾಗಿತ್ತು. ಈ ಘಟನೆ ಕುರಿತಂತೆ ಪುರಂದರ ಅವರು ನೆರೆ ಮನೆಯವರಿಗೆ ಹಾಗೂ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದರು. ಮುಂಜಾನೆಯೇ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದು ಈ ವೇಳೆ ಸಮೀಪದ ಸತೀಶ್ ಅವರ ಮನೆಯಲ್ಲಿ ಬೆಳಕು ಕಾಣುತ್ತಿದ್ದು ಪೊಲೀಸರು ಅಲ್ಲಿಗೆ ತೆರಳಿ ಪರಿಶೀಲನೆ ನಡೆಸಿದ ವೇಳೆ ಸತೀಶ್ ಅವರ ಮನೆಯ ಹಿಂಬದಿ ಬಾಗಿಲು ತೆರೆದುಕೊಂಡಿದ್ದು ಮನೆಯ ಒಳಗೆ ಹೋಗಿ ಪರಿಶೀಲಿಸಿದ ವೇಳೆ ಕೊಠಡಿಯೊಂದರ ಗೋದ್ರೆಜ್‌ನಲ್ಲಿದ್ದ ದಾಖಲೆಗಳಿಗೆ ಹಾಗೂ ಬಟ್ಟೆಗಳಿಗೆ ಬೆಂಕಿ ಹಚ್ಚಿ ದಾಂಧಲೆ ಎಸಗಿರುವುದು ಕಂಡುಬಂದಿದೆ. ಈ ಗೋದ್ರೆಜ್‌ನಲ್ಲಿ ಸತೀಶ್ ಅವರ ತಾಯಿಯ ಬಂಗಾರದ ಸರ, ಕಿವಿಯೋಲೆ ಇದ್ದು ಅವು ಕಾಣೆಯಾಗಿರುವುದಾಗಿ ವರದಿಯಾಗಿದೆ. ಇದೊಂದು ಗೋದ್ರೆಜ್ ನ ಬೀಗವನ್ನು ಮುರಿಯಲಾಗಿದೆ. ಸತೀಶ್ ಅವರು ನ.16ರಂದು ಸಂಜೆ ಮನೆಗೆ ಬೀಗ ಹಾಕಿ ಪತ್ನಿ, ಮಕ್ಕಳೊಂದಿಗೆ ಸಂಬಂಧಿಕರ ಮನೆಗೆ ಹೋಗಿದ್ದರು.
ಸ್ಥಳಕ್ಕೆ ಮಂಗಳೂರಿನಿಂದ ಸ್ವಾನ ದಳ ಹಾಗೂ ಬೆರಳಚ್ಚು ತಜ್ಞರು, ಅಡಿಷನಲ್ ಎಸ್ಪಿ ರಾಜೇಂದ್ರ , ಡಿಎಸ್ಪಿ ಅರುಣ್ ನಾಗೇಗೌಡ, ಉಪ್ಪಿನಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ರವಿ ಬಿ.ಎಸ್., ಸಬ್‌ಇನ್ಸ್‌ಪೆಕ್ಟರ್ ಅವಿನಾಶ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.