ತರಗತಿಗೆ ಸರಿಯಾಗಿ ಬರುತ್ತಿಲ್ಲ ಎಂದು ಪೋಷಕರನ್ನು ಕರೆಸಿ ಬುದ್ಧಿ ಹೇಳಿದ್ದಕ್ಕೆ ವಿದ್ಯಾರ್ಥಿಯೊಬ್ಬ ಪ್ರಾಂಶುಪಾಲರನ್ನೇ ಗುಂಡಿಕ್ಕಿ ಹತ್ಯೆಗೈದ ಘಟನೆ ಮಧ್ಯಪ್ರದೇಶದ ಛತ್ತರ್‌ಪುರದಲ್ಲಿ ನಡೆದಿದೆ.
ಧಮೋರಾದ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಹತ್ಯೆಯಾದ ಪ್ರಾಂಶುಪಾಲರನ್ನು ಸುರೇಂದ್ರ ಕುಮಾರ್ ಸಕ್ಸೇನಾ ಎಂದು ಗುರುತಿಸಲಾಗಿದೆ. ಅವರು ಹತ್ಯೆಗೈದ ವಿದ್ಯಾರ್ಥಿಗೆ ಕಾಲೇಜಿಗೆ ಸರಿಯಾಗಿ ಬರುತ್ತಿರಲಿಲ್ಲ ಎಂದು ಛೀಮಾರಿ ಹಾಕಿದ್ದರು. ಇದೇ ಕಾರಣಕ್ಕೆ ಶಾಲೆಗೆ ನುಗ್ಗಿ ಶೌಚಾಲಯದಲ್ಲಿದ್ದ ಪ್ರಾಂಶುಪಾಲರ ತಲೆಗೆ ಗುಂಡು ಹಾರಿಸಿದ್ದಾನೆ. ಈ ವೇಳೆ ಪ್ರಾಂಶುಪಾಲರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ಕಾಲೇಜಿನಲ್ಲಿ ಅಳವಡಿಸಲಾದ ಸಿಸಿಟಿವಿಯಲ್ಲಿ ಆರೋಪಿಗಳ ಕೃತ್ಯ ಸೆರೆಯಾಗಿದೆ. ಹತ್ಯೆ ಬಳಿಕ ಪ್ರಾಂಶುಪಾಲರ ಸ್ಕೂಟರ್ ಸಮೇತ ಆರೋಪಿ ಹಾಗೂ ಆತನ ಸ್ನೇಹಿತ ಇಬ್ಬರೂ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಂದ ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ. ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.