Breaking: ಮಾಜಿ ಮುಖ್ಯಮಂತ್ರಿ ಎಸ್‌ಎಂ ಕೃಷ್ಣ ಇನ್ನಿಲ್ಲ

ಶೇರ್ ಮಾಡಿ

ಕರ್ನಾಟಕ ಕಂಡ ಅಪರೂಪದ ಮುಖ್ಯಮಂತ್ರಿಗಳಲ್ಲಿ ಒಬ್ಬರಾಗಿದ್ದ ಎಸ್‌.ಎಂ ಕೃಷ್ಣ ವಿಧಿವಶರಾಗಿದ್ದಾರೆ. ಮಾಜಿ ಕೇಂದ್ರ ಸಚಿವರೂ ಆಗಿದ್ದ ಅವರು ಬೆಂಗಳೂರಿನ ಸದಾಶಿವನಗರದಲ್ಲಿನ ತಮ್ಮ ನಿವಾಸದಲ್ಲಿ ಮಂಗಳವಾರ ನಸುಕಿನ 2.45ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು.

ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು, ಅನೇಕ ಬಾರಿ ಆಸ್ಪತ್ರೆಗೆ ದಾಖಲಾಗಿ, ಬಳಿಕ ಬಿಡುಗಡೆಯಾಗಿದ್ದರು. ಅವರ ಪಾರ್ಥಿವ ಶರೀರವನ್ನು ಸದಾಶಿವನಗರದ ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗುವುದು. ಹುಟ್ಟೂರು ಮದ್ದೂರಿನ ಸೋಮನಹಳ್ಳಿಯಲ್ಲಿ ಬುಧವಾರ ಅಂತ್ಯಕ್ರಿಯೆ ನಡೆಯಲಿದೆ.

ಕರ್ನಾಟಕದ ಮುಖ್ಯಮಂತ್ರಿಯಾಗಿ 1999 ರಿಂದ 2004ರವರೆಗೂ ಅಧಿಕಾರ ನಡೆಸಿದ ಅವರು, 2004- 2008ರಲ್ಲಿ ಯುಪಿಎ ಸರಕಾರದ ಮೊದಲ ಅವಧಿಯಲ್ಲಿ ಮಹಾರಾಷ್ಟ್ರ ರಾಜ್ಯಪಾಲರಾಗಿ, ನಂತರ ವಿದೇಶಾಂಗ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.

ಎಸ್‌ಎಂ ಕೃಷ್ಣ ಅವರು ಪತ್ನಿ ಪ್ರೇಮಾ ಹಾಗೂ ಇಬ್ಬರು ಹೆಣ್ಣುಮಕ್ಕಳನ್ನು ಅಗಲಿದ್ದಾರೆ.

ಮಂಡ್ಯ ಹೈದನ ಅಮೆರಿಕ ಪದವಿ
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿ ಗ್ರಾಮದಲ್ಲಿ 1932ರ ಮೇ 1ರಂದು ಜನಿಸಿದ ಸೋಮನಹಳ್ಳಿ ಮಲ್ಲಯ್ಯ ಕೃಷ್ಣ, ಮುಂದೆ ವಿದೇಶಾಂಗ ಸಚಿವರಾಗಿ ದೇಶವನ್ನು ಪ್ರತಿನಿಧಿಸುವ ಮಟ್ಟಕ್ಕೆ ಬೆಳೆದಿದ್ದು ಸ್ಫೂರ್ತಿದಾಯಕ ಕಥೆ. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ ಅವರು, ಮೈಸೂರಿನ ಶ್ರೀ ರಾಮಕೃಷ್ಣ ವಿದ್ಯಾಶಾಲೆಯಲ್ಲಿ ಪ್ರೌಢಶಿಕ್ಷಣ ಪಡೆದರು. ನಂತರ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ಬಿಎ ಪದವಿ ಮುಗಿಸಿ, ಯುನಿವರ್ಸಿಟಿ ಕಾಲೇಜಿನಲ್ಲಿ ಕಾನೂನು ಪದವಿ ಪೂರೈಸಿದರು. ಇದರ ನಂತರ ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಕ್ಕೆ ತೆರಳಿದ ಅವರು, ಟೆಕ್ಸಾಸ್‌ನ ಡಲ್ಲಾಸ್‌ನಲ್ಲಿರುವ ಸದರ್ನ್ ಮೆಥೋಡಿಕ್ಸ್ ವಿವಿ ಹಾಗೂ ವಾಷಿಂಗ್ಟನ್ ಡಿಸಿಯಲ್ಲಿನ ಜಾರ್ಜ್ ವಾಷಿಂಗ್ಟನ್ ವಿವಿ ಲಾ ಸ್ಕೂಲ್‌ನಿಂದ ಪದವಿ ಪಡೆದರು.

ರಾಜಕೀಯ ಪ್ರವೇಶ
ಕಾಂಗ್ರೆಸ್‌ನಿಂದ ಮುಖ್ಯಮಂತ್ರಿಯಾದ ಎಸ್‌ಎಂ ಕೃಷ್ಣ, ಮೊದಲು ರಾಜಕೀಯಕ್ಕೆ ಇಳಿದಿದ್ದು ಪಕ್ಷೇತರ ಅಭ್ಯರ್ಥಿಯಾಗಿ. 1962ರಲ್ಲಿ ಮದ್ದೂರು ವಿಧಾನಸಭೆ ಕ್ಷೇತ್ರದಲ್ಲಿ ಮೊದಲ ಚುನಾವಣೆಯಲ್ಲಿಯೇ ಗೆಲುವಿನ ನಗೆ ಬೀರಿದ್ದರು. ನಂತರ ಪ್ರಜಾ ಸೋಷಿಯಲಿಸ್ಟ್ ಪಕ್ಷ ಸೇರಿದ್ದರು. 1967ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿದರು. 1968ರಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸುವ ಮೂಲಕ ಸಂಸತ್ ಪ್ರವೇಶಿಸಿದರು. ಬಳಿಕ ಕಾಂಗ್ರೆಸ್ ಸೇರಿದ ಅವರು 1971 ಹಾಗೂ 1980ರ ಚುನಾವಣೆಗಳಲ್ಲಿ ಲೋಕಸಭೆಗೆ ಆಯ್ಕೆಯಾಗಿದ್ದರು.

ಕೆಪಿಸಿಸಿ ಅಧ್ಯಕ್ಷರಾದ ಅವರು 1999ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಗೆಲುವಿನತ್ತ ಮುನ್ನಡೆಸಿದರು. ಮುಖ್ಯಮಂತ್ರಿ ಹುದ್ದೆಯೂ ಅನಾಯಾಸವಾಗಿ ಒಲಿದಿತ್ತು. ಯುಪಿಎ ಸರಕಾರದ ಮೊದಲ ಅವಧಿಯಲ್ಲಿ ಮಹಾರಾಷ್ಟ್ರ ರಾಜ್ಯಪಾಲರಾಗಿ, ಎರಡನೇ ಅವಧಿಯಲ್ಲಿ ರಾಜ್ಯಸಭೆ ಸದಸ್ಯತ್ವದ ಮೂಲಕ ವಿದೇಶಾಂಗ ಸಚಿವರಾಗಿ ಕಾರ್ಯ ನಿರ್ವಹಿಸಿದರು.

ಹಲವಾರು ದಶಕಗಳ ಕಾಲ ಕಾಂಗ್ರೆಸ್ ಕಟ್ಟಾಳುವಾಗಿದ್ದ ಅವರು, 2017ರಲ್ಲಿ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿ ಅಚ್ಚರಿ ಮೂಡಿಸಿದರು. ಆದರೆ ಇಳಿವಯಸ್ಸಿನಲ್ಲಿ ಅವರು ಮತ್ತೆ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಳ್ಳಲಿಲ್ಲ. 2023ರ ಜನವರಿ 7ರಂದು ರಾಜಕೀಯದಿಂದ ನಿವೃತ್ತಿ ಘೋಷಣೆ ಮಾಡಿದ್ದ ಕೃಷ್ಣ, ಈಗ ಇಹಲೋಕ ತ್ಯಜಿಸಿದ್ದಾರೆ.

Leave a Reply

error: Content is protected !!